ಪಹಲ್ಗಾಮ್ ಅಟ್ಯಾಕ್ ʼಡಿಜಿಟಲ್ ಅರೆಸ್ಟ್ʼ; ವೃದ್ಧ ದಂಪತಿಯ ಅಕೌಂಟ್ ನಿಂದ 70 ಲಕ್ಷ ರೂ. ವಂಚನೆ!

Oct 1, 2025 - 14:52
 0  207
ಪಹಲ್ಗಾಮ್ ಅಟ್ಯಾಕ್ ʼಡಿಜಿಟಲ್ ಅರೆಸ್ಟ್ʼ; ವೃದ್ಧ ದಂಪತಿಯ ಅಕೌಂಟ್ ನಿಂದ 70 ಲಕ್ಷ ರೂ. ವಂಚನೆ!
Photo credit: INDIA TODAY

ಮುಂಬೈ: ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ನಿಮ್ಮ ಹೆಸರು ಹೊರಬಂದಿದೆ ಎಂದು ಸುಳ್ಳು ಕಥೆ ಹೆಣೆದ ವಂಚಕರು ಮುಂಬೈನ 75 ವರ್ಷದ ವೃದ್ದ ದಂಪತಿಯ ಅಕೌಂಟ್ ನಿಂದ 70 ಲಕ್ಷ ರೂ. ಹಣ ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. “ಡಿಜಿಟಲ್ ಅರೆಸ್ಟ್”ಮಾದರಿಯಲ್ಲಿ ನಡೆದ ಈ ವಂಚನೆ ಪ್ರಕರಣವನ್ನು ಸೈಬರ್ ಅಪರಾಧ ಇಲಾಖೆ ತನಿಖೆ ಮಾಡುತ್ತಿದೆ.

ಸೆಪ್ಟೆಂಬರ್ 25ರಂದು, ನವದೆಹಲಿಯ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿ “ವಿನೀತಾ ಶರ್ಮಾ” ಎಂದು ಪರಿಚಯಿಸಿಕೊಂಡ ಮಹಿಳೆ ವೃದ್ಧರೊಬ್ಬರಿಗೆ ಕರೆ ಮಾಡಿದರು. ಅವರ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಲಾಗಿದೆ ಎಂದು ಭಯಹುಟ್ಟಿಸಿದರು. ಆನಂತರ ವೀಡಿಯೊ ಕರೆ ಮೂಲಕ “ಐಜಿಪಿ ಪ್ರೇಮ್ಕುಮಾರ್ ಗೌತಮ್” ಎಂದು ಪರಿಚಯಿಸಿಕೊಂಡ ವ್ಯಕ್ತಿ ಪೊಲೀಸ್ ಸಮವಸ್ತ್ರ ಧರಿಸಿ, ವೃದ್ದ ದಂಪತಿಗೆ ಬಂಧಿಸುವ ಬೆದರಿಕೆ ಹಾಕಿದನು. ಬಳಿಕ ಪಾಸ್ಪೋರ್ಟ್ ಜಪ್ತಿ ಮತ್ತು ಬ್ಯಾಂಕ್ ಖಾತೆಯನ್ನು ಫ್ರೀಝ್ ಮಾಡುವ ಬೆದರಿಕೆ ಹಾಕಿದ ಎಂದು ತಿಳಿದು ಬಂದಿದೆ. ವಂಚಕ ವೃದ್ಧರಿಂದ ವೈಯಕ್ತಿಕ ಮಾಹಿತಿ, ಬ್ಯಾಂಕ್ ಖಾತೆ ವಿವರಗಳು, ಸ್ಥಿರ ಠೇವಣಿಗಳು, ಷೇರು ಹೂಡಿಕೆಗಳು ಮತ್ತು ಪತ್ನಿಯ ವಿವರಗಳನ್ನು ಪಡೆದುಕೊಂಡು, ನಕಲಿ ಆರ್ಬಿಐ ನಿಯಮಗಳನ್ನು ಉಲ್ಲೇಖಿಸಿ ವೈಟ್ ಮನಿ ಮಾಡುತ್ತೇನೆ ಎಂದು ನಂಬಿಸಿ ಒಟ್ಟು 70 ಲಕ್ಷ ರೂ.ವನ್ನು ಮೂರು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾನೆ. ವಂಚಕರು ವಾಟ್ಸಾಪ್ ಮೂಲಕ ನಕಲಿ ರಶೀದಿಯನ್ನೂ ಕಳುಹಿಸಿದ್ದಾರೆ. ವಂಚಕರು ವೃದ್ಧರ ಮತ್ತು ಅವರ ಪತ್ನಿಯ ಮೊಬೈಲ್ ಫೋನ್ ಗಳು ಹಾಗೂ ಮನೆಯ ಕಂಪ್ಯೂಟರ್ ತಾತ್ಕಾಲಿಕವಾಗಿ ನಿಷ್ಕ್ರಿಯಗೊಂಡಿರುವಂತೆ ಭ್ರಮೆ ಮೂಡಿಸಿ, ಯಾರನ್ನೂ ಸಂಪರ್ಕಿಸಬಾರದೆಂದು ಸೂಚಿಸಿದ್ದರು. ಇದರಿಂದ ವೃದ್ಧರು ಭಾರೀ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ.

 ಅಷ್ಟಕ್ಕೇ ಮುಗಿಸದ ವಂಚಕರು, ಸೆಪ್ಟೆಂಬರ್ 28ರಂದು ಮತ್ತೆ 1 ಕೋಟಿ ರೂ. ಸ್ಥಿರ ಠೇವಣಿಯನ್ನು ವರ್ಗಾಯಿಸಲು ಒತ್ತಾಯಿಸಿದಾಗ, ವೃದ್ಧರು ಅನುಮಾನಗೊಂಡು ತಕ್ಷಣ ದೂರು ದಾಖಲಿಸಿದರು. ಮುಂಬೈ ಸೈಬರ್ ಅಪರಾಧ ಇಲಾಖೆ ತುರ್ತು ತನಿಖೆ ಕೈಗೊಂಡಿದ್ದು, ವಂಚಕರ ವಾಟ್ಸಾಪ್ ಸಂದೇಶಗಳು, ಆಡಿಯೋ ದಾಖಲೆಗಳು ಹಾಗೂ ಬ್ಯಾಂಕ್ ವಿವರಗಳನ್ನು ವಶಪಡಿಸಿಕೊಂಡಿದೆ. ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವ ಕಾರ್ಯಾಚರಣೆ ಪ್ರಾರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0