State News

ಪರಪ್ಪನ ಅಗ್ರಹಾರ ‘ರಾಜಾತಿಥ್ಯ’ ವಿಡಿಯೋ ಕೇಸ್‌: ತನಿಖೆಗೆ ಹೊಸ ತಿರುವು

admincoorgdaily

ಆನೇಕಲ್, ನ. 23: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಡ್ಯಾನ್ಸ್, ಬರ್ತ್‌ಡೇ ಸಂಭ್ರಮ, ಮೊಬೈಲ್ ಬಳಕೆ ನಡೆಸುತ್ತಿರುವ ದೃಶ್ಯಗಳಿರುವ ವಿಡಿಯೋ ವೈರಲ್‌ ಆಗಿದ ನಂತರ ಪ್ರಕರಣದ ತನಿಖೆ ವೇಗ ಪಡೆದಿದೆ. ಈ ಸಂಬಂಧ ರೌಡಿಶೀಟರ್‌ ಕುದುರೆ ಮಂಜ ವಿಚಾರಣೆ ವೇಳೆ ಪೊಲೀಸರಿಗೆ ಸ್ಫೋಟಕ ಮಾಹಿತಿ ಲಭಿಸಿದೆ.

ವಿಡಿಯೋದಲ್ಲಿ ಡ್ಯಾನ್ಸ್ ಮಾಡಿದ್ದು ತಾನೇ ಎಂದು ಮಂಜುನಾಥ್ ಅಲಿಯಾಸ್ ಕುದುರೆ ಮಂಜ ಒಪ್ಪಿಕೊಂಡಿದ್ದು, ದೃಶ್ಯವನ್ನ ಗುಬ್ಬಚ್ಚಿ ಸೀನ ಮತ್ತು ವಿಲ್ಸನ್ ಗಾರ್ಡನ್ ನಾಗನಿಗೆ ಶೇರ್ ಮಾಡಿರುವುದಾಗಿ ಹೇಳಿದ್ದಾನೆ. ಈ ಹೇಳಿಕೆಯಿಂದ ಇಬ್ಬರ ಮೇಲೂ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿದು ಬಂದಿದೆ.

ಕೋರ್ಟ್ ಅನುಮತಿ ಪಡೆದು ಇವರ ವಿಚಾರಣೆ ನಡೆಸಲು ಪೊಲೀಸರು ಸಿದ್ಧರಾಗಿದ್ದಾರೆ. ಸದ್ಯ ಇಬ್ಬರೂ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ವಿಡಿಯೋ ವೈರಲ್‌ ನಂತರ ಕೊಲೆ ಆರೋಪಿ ದರ್ಶನ್ ಆಪ್ತ ಧನ್ವೀರ್‌ ಸೇರಿದಂತೆ ಹಲವರ ವಿಚಾರಣೆ ನಡೆದಿತ್ತು. ಯಾರಿಗೂ ವಿಡಿಯೋ ಕಳುಹಿಸಿಲ್ಲ ಎಂದು ಧನ್ವೀರ್ ಹೇಳಿದ ಹಿನ್ನೆಲೆಯಲ್ಲಿ ಊಹಾಪೋಹಗಳು ಹೆಚ್ಚಾಗಿದ್ದವು. ವಿಜಯಲಕ್ಷ್ಮೀ ದರ್ಶನ್ ಹೆಸರು ಸಹ ಚರ್ಚೆಗೆ ಬಂದಿತ್ತು. ಆದರೆ ಕುದುರೆ ಮಂಜನ ಹೇಳಿಕೆ ಪ್ರಕರಣಕ್ಕೆ ಹೊಸ ಆಯಾಮ ನೀಡಿದ್ದು, ವಿಜಯಲಕ್ಷ್ಮೀ ಹೆಸರು ಸುತ್ತಲಿನ ಗೊಂದಲಕ್ಕೆ ತೆರೆ ಬಿದ್ದಂತಾಗಿದೆ.

ಕುದುರೆ ಮಂಜ ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿ ಆಗಿರುವ ಕಾರಣ ವಿಚಾರಣೆ ಗಂಭೀರತೆಯಿಂದ ಮುಂದುವರಿಯುತ್ತಿದ್ದು, ವಿಡಿಯೋ ಕೇಸ್ ಇನ್ನೂ ಹಲವರ ಕುತ್ತಿಗೆಗೆ ಸುತ್ತಿಕೊಳ್ಳುವ ಸಾಧ್ಯತೆ ಇದೆ ಎಂದು ತನಿಖಾ ಮೂಲಗಳು ತಿಳಿಸಿವೆ.