ನಿಧಿ ಆಸೆಗೆ ಪೋಷಕರಿಂದಲೇ ಮಗು ಬಲಿ ಯತ್ನ ಆರೋಪ; ಎಂಟು ತಿಂಗಳ ಶಿಶು ರಕ್ಷಣೆ

Jan 5, 2026 - 01:08
 0  1.5k
ನಿಧಿ ಆಸೆಗೆ ಪೋಷಕರಿಂದಲೇ ಮಗು ಬಲಿ ಯತ್ನ ಆರೋಪ; ಎಂಟು ತಿಂಗಳ ಶಿಶು ರಕ್ಷಣೆ
Photo credit: TV09 (ಮನೆಯಲ್ಲಿ ಗುಂಡಿ ಅಗೆದಿರುವ ದೃಶ್ಯ)

ದೇವನಹಳ್ಳಿ, ಜ.4: ನಿಧಿ ಆಸೆಗಾಗಿ ಎಂಟು ತಿಂಗಳ ಗಂಡು ಶಿಶುವನ್ನು ಬಲಿ ನೀಡಲು ಯತ್ನಿಸಲಾಗಿದೆ ಎಂಬ ಆರೋಪ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದಲ್ಲಿ ಕೇಳಿಬಂದಿದೆ. ನಿಖರ ಮಾಹಿತಿ ಆಧರಿಸಿ ದಾಳಿ ನಡೆಸಿದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಶಿಶುವನ್ನು ರಕ್ಷಿಸಿದ್ದಾರೆ.

ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿರುವ ಸೈಯದ್ ಇಮ್ರಾನ್ ಎಂಬುವರ ನಿವಾಸದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮನೆಯ ಕೋಣೆಯೊಂದರಲ್ಲಿ ಗುಂಡಿ ತೆಗೆಯಲಾಗಿದ್ದು, ನಿಧಿಗಾಗಿ ಶಿಶು ಬಲಿ ನೀಡುವ ಪೂಜೆ ನಡೆಯುತ್ತಿತ್ತು ಎಂಬ ಆರೋಪ ವ್ಯಕ್ತವಾಗಿದೆ.

ಹುಣ್ಣಿಮೆ ಹಿನ್ನೆಲೆಯಲ್ಲಿ ಮಗು ಬಲಿ ನೀಡಲಾಗುತ್ತಿದೆ ಎಂಬ ಮಾಹಿತಿ ಸಹಾಯವಾಣಿಗೆ ಬಂದ ಬಳಿಕ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಕೋಣೆಯೊಳಗೆ ಗುಂಡಿ ತೆಗೆಯಲಾಗಿದ್ದು, ಪೂಜಾ ಸಿದ್ಧತೆಗಳು ಕಂಡುಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಕ್ಷಣವೇ ಶಿಶುವನ್ನು ವಶಕ್ಕೆ ಪಡೆದು ಶಿಶು ಆರೈಕೆ ಕೇಂದ್ರಕ್ಕೆ ರವಾನಿಸಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ, ದಂಪತಿ ಎಂಟು ತಿಂಗಳ ಹಿಂದೆ ಕೂಲಿ ಕಾರ್ಮಿಕರಿಂದ ಶಿಶುವನ್ನು ಪಡೆದಿರುವುದು ಬೆಳಕಿಗೆ ಬಂದಿದೆ. ದತ್ತು ಪಡೆದ ಬಳಿಕ ಶಿಶುವಿನ ಹೆಸರಿನಲ್ಲಿ ನಕಲಿ ಜನನ ಪ್ರಮಾಣ ಪತ್ರವನ್ನು ಮಾಡಿಸಿಕೊಂಡಿರುವ ಶಂಕೆಯೂ ವ್ಯಕ್ತವಾಗಿದೆ. ದಾಳಿ ವೇಳೆ ದಂಪತಿ ದತ್ತು ಸಂಬಂಧಿತ ಒಪ್ಪಂದ ಪತ್ರವಿದೆ ಎಂದು ಹೇಳಿಕೊಂಡಿದ್ದರೂ, ಕಾನೂನುಬದ್ದ ದತ್ತು ಪ್ರಕ್ರಿಯೆ ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಕುರಿತು ಮಕ್ಕಳ ರಕ್ಷಣಾ ಕಲ್ಯಾಣ ಸಮಿತಿ ತನಿಖೆ ಕೈಗೊಂಡಿದ್ದು, ಸೂಲಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

What's Your Reaction?

Like Like 1
Dislike Dislike 1
Love Love 0
Funny Funny 2
Angry Angry 2
Sad Sad 5
Wow Wow 0