ಅ.27 ರಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಪತ್ತಾಲೋಧಿ ನಮ್ಮೆ
ನಾಪೋಕ್ಲು :ಕಕ್ಕಬ್ಬೆ ಪಾಡಿಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಅ. 27ರಂದು ಪತ್ತಾಲೋಧಿ ನಮ್ಮೆ ನಡೆಯಲಿದೆ ಎಂದು ದೇವಾಲಯದ ದೇವದಕ್ಕರಾದ ಪರದಂಡ ಕುಟುಂಬಸ್ಥರು ತಿಳಿಸಿದ್ದಾರೆ.
ಆದಿಮಾತೆ ಶ್ರೀ ಕಾವೇರಿಯ ತೀರ್ಥೋದ್ಭವ ಕಳೆದು ಕೊಡವ ಸಂಪ್ರದಾಯಸ್ಥರ ಮನೆಗಳಲ್ಲಿ ಜರುಗುವ "ಕಣಿಪೂಜೆಯ" ದಿನದ ಸೂರ್ಯೋದಯದಿಂದ ಸರಿಯಾಗಿ ಹತ್ತನೇ ಸೂರ್ಯೋದಯದ ದಿನದಂದು ಕೊಡಗಿನಾದ್ಯಂತ ಪತ್ತಾಲೋಧಿ ಅಂದರೆ ಹತ್ತನೇ ಪವಿತ್ರ ದಿನವು "ತೊಲೆಯಾರ್ ಪತ್ತ್" ಎಂಬ ಪ್ರತೀತಿ ಪಡೆದಿದೆ.
ಶುಭ ಕಾರ್ಯಗಳಿಗೆ ಅತ್ಯಂತ ಪ್ರಶಸ್ತವಾದ ಈ ದಿನ ಕೊಡವ ಸಂಪ್ರದಾಯದಂತೆ ಕೈಗೊಳ್ಳುವ ಯಾವುದೇ ಕಾರ್ಯವು ಕಾರ್ಯಗತವಾಗುವುದಲ್ಲದೇ, ದೇವಾನುಗ್ರಹದೊಂದಿಗೆ ಅಕ್ಷಯವಾಗುವುದೆಂಬ ನಂಬಿಕೆ. ಪಾಡಿಯಲ್ಲಿ ಪರದಂಡ ಕುಟುಂಬಸ್ಥರ ವತಿಯಿಂದ ಸಂಪ್ರದಾಯದಂತೆ ಆ ದಿವಸ ಅಂದರೆ ಸೋಮವಾರ ಅ.27ರಂದು "ತೊಲೆಯಾರ್ ಪತ್ತ್ ಆರಾಧನೆ "ನಡೆಯಲಿದೆ.
ಅಂದು ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿದ್ದು ತುಲಾಭಾರ ಸೇವೆಗಳು, ಮಹಾಪೂಜೆಗಳು ನಡೆಯಲಿದೆ ಎಂದು ಪರದಂಡ ಕುಟುಂಬಸ್ಥರು ತಿಳಿಸಿದ್ದಾರೆ. ಅಲ್ಲದೆ ಭಕ್ತಾದಿಗಳು ಆಗಮಿಸಿ ಪಾಡಿ ಶ್ರೀ ಇಗುತಪ್ಪ ದೇವರ ದರ್ಶನ ಪಡೆದು ಕೃಪಾಶೀರ್ವಾದಗಳಿಗೆ ಪಾತ್ರರಾಗಬೇಕೆಂದು ವಿನಂತಿಸಿದ್ದಾರೆ.