ಕಾಳುಮೆಣಸು ಕಳ್ಳತನ:ಮೂವರ ಬಂಧನ

Mar 25, 2026 - 11:08
 0  2.5k
ಕಾಳುಮೆಣಸು ಕಳ್ಳತನ:ಮೂವರ ಬಂಧನ

ವೀರಾಜಪೇಟೆ, ಮಾ. 24: ಕಾಳುಮೆಣಸು ಕಳ್ಳತನವೆಸಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ವೀರಾಜಪೇಟೆ ಯಶಸ್ವಿಯಾಗಿದ್ದಾರೆ. 

ಮೂಲತಃ ತಿತಿಮತಿ ನೋಕ್ಯ ಗ್ರಾಮದ ನಿವಾಸಿ, ಪ್ರಸ್ತುತ 1ನೇ ಪೆರುಂಬಾಡಿ ಆರ್ಜಿ ಗ್ರಾಮದ ನಿವಾಸಿ ಶಫೀಕ್ ಕೆ.ಬಿ. (28) ಮತ್ತು 1 ನೇ ಪೆರುಂಬಾಡಿ ಆರ್ಜಿ ಗ್ರಾಮದ ನಿವಾಸಿ ದರ್ಶನ್ ನಾಯಕ್ (25) ಹಾಗೂ ಮೈಸೂರು ಮೂಲದ, ಪ್ರಸ್ತುತ ಕೇರಳದ ಮಾನಂದವಾಡಿಯ ಎಡಪ್ಪಾಡಿಯ ನಿವಾಸಿ ಮೊಹಮ್ಮದ್ ಶಾಕೀರ್ (31) ಬಂಧಿತ ಆರೋಪಿಗಳು.

ವೀರಾಜಪೇಟೆ ತಾಲೂಕು ಅಮ್ಮತ್ತಿ ಕಣ್ಣಂಗಾಲ ಗ್ರಾಮದ ನಿವಾಸಿ ಲೆಹರ್ ಗಣಪತಿ ಎಂಬವರು ಕಾಫಿ ಕಣದಲ್ಲಿ ಸುಮಾರು 300 ಕೆ.ಜಿ. ತೂಕದ ಕಾಳು ಮೆಣಸು ದಾಸ್ತಾನು ಇರಿಸಿದ್ದರು. ತಾ. 9 ರಂದು ಕಣದಲ್ಲಿದ್ದ ಕರಿಮೆಣಸು ಚೀಲ ಕಣ್ಮರೆಯಾಗಿತ್ತು. ತೋಟದಲ್ಲಿದ್ದ ಕಾರ್ಮಿಕರನ್ನು ವಿಚಾರಣೆ ಮಾಡಿದರೂ ಸುಳಿವು ಲಭ್ಯವಾಗಲಿಲ್ಲ. ನಂತರದಲ್ಲಿ ವೀರಾಜಪೇಟೆ ಗ್ರಾಮಾಂತರ ಮಾಲೀಕರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೊಲೀಸರು ಹುಣಸೂರು ತಾಲೂಕು ಪಂಚವಳ್ಳಿಯಲ್ಲಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ತನಿಖೆ ವೇಳೆಯಲ್ಲಿ ಆರೋಪಿಗಳು ಕಳ್ಳತನ ಮಾಡಿದ್ದ ಕಾಳು ಸ್ಥಳೀಯವಾಗಿ ಮಾರಾಟ ಮಾಡಿದ್ದಲ್ಲಿ ಅನುಮಾನ ಮೂಡುತ್ತದೆ ಎಂದು ಕೇರಳ ರಾಜ್ಯದಲ್ಲಿ 215 ಕೆ.ಜಿ ಕರಿಮೆಣಸು ಮಾರಾಟ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ್ದ 2 ಕಾರು ಹಾಗೂ 1 ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

 ಆರೋಪಿಗಳನ್ನು ಹೆಚ್ಚಿನ ತನಿಖೆ ಮಾಡಿದ ವೇಳೆಯಲ್ಲಿ ಆರೋಪಿಗಳ ಮೇಲೆ ಹುಣಸೂರು ನಗರ ಠಾಣೆಯಲ್ಲಿ ಬೈಕ್‌ಗಳ ಕಳ್ಳತನ, ಸುಂಟಿಕೊಪ್ಪ ಠಾಣೆಯಲ್ಲಿ 75 ಕೆ.ಜಿ ಕಾಳು ಮೆಣಸು ಕಳ್ಳತನ ಮತ್ತು ಕಾರು ಕಳ್ಳತನ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಮಾರ್ಗದರ್ಶನ, ವೀರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್ ಮತ್ತು ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಪಿ. ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೀರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ಲತಾ ಎನ್.ಜೆ, ಅಪರಾದ ವಿಭಾಗ ಪಿ.ಎಸ್.ಐ. ವಾಣಿಶ್ರೀ, ಸಿಬ್ಬಂದಿ ನವೀನ್‌, ಮಜೀದ್, ಅನೀಫ್, ಬಸವರಾಜು, ಶಿವರಾಜು, ಮಹೇಶ್ ಎಸ್, ರಾಜೇಶ್, ರಾಘವೇಂದ್ರ, ಶ್ರೀಪ್ರಸಾದ್ ಶಶಿಧರ, ಮಹೇಶ್ ಸಾರವಾಡ ಮತ್ತು ಗಿರೀಶ್ ಭಾಗವಹಿಸಿದ್ದರು.

ವರದಿ:ಕಿಶೋರ್ ಕುಮಾರ್ ಶೆಟ್ಟಿ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 2
Wow Wow 1