ಪೊಲೀಸರೇ ದರೋಡೆಕೋರರು: ಚಿನ್ನ ಲಪಟಾಯಿಸಿದ ಇಬ್ಬರು ಪಿಎಸ್ಐ ಬಂಧನ

Nov 26, 2025 - 12:22
 0  1k
ಪೊಲೀಸರೇ ದರೋಡೆಕೋರರು:  ಚಿನ್ನ ಲಪಟಾಯಿಸಿದ ಇಬ್ಬರು ಪಿಎಸ್ಐ ಬಂಧನ
Photo credit: TV09 (ಫೋಟೋ: ಬಂಧಿತ ಪೊಲೀಸರು)

ದಾವಣಗೆರೆ, ನ. 26: ಜನರನ್ನು ದರೋಡೆ–ಕಳ್ಳತನದಿಂದ ರಕ್ಷಿಸಬೇಕಾದ ಪೊಲೀಸರೇ ದರೋಡೆಗೆ ಇಳಿದಿರುವ ಘಟನೆ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ. ಕಾರವಾರ ಮೂಲದ ಚಿನ್ನದ ವ್ಯಾಪಾರಿಯಿಂದ ಲಕ್ಷಾಂತರ ಮೌಲ್ಯದ 80 ಗ್ರಾಂ ಚಿನ್ನವನ್ನು ಕಸಿದುಕೊಂಡ ಆರೋಪದ ಮೇಲೆ ಇಬ್ಬರು ಪಿಎಸ್ಐಗಳನ್ನು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಮಾಳಪ್ಪ ಚಿಪ್ಪಲಕಟ್ಟಿ ಹಾಗೂ ಪ್ರವೀಣ್ ಕುಮಾರ್ ಬಂಧಿತ ಅಧಿಕಾರಿಗಳು ಎಂದು ತಿಳಿದು ಬಂದಿದೆ.

ಚಿನ್ನದ ವ್ಯಾಪಾರಿ ವಿಶ್ವನಾಥ್, ದಾವಣಗೆರೆಯ ವ್ಯಾಪಾರಿಗಳಿಂದ ಗಟ್ಟಿ ಚಿನ್ನ ಪಡೆದು ಆಭರಣ ತಯಾರಿಸುವ ಕೆಲಸ ಮಾಡುತ್ತಿದ್ದರು. ನವೆಂಬರ್ 24ರ ರಾತ್ರಿ ಕಾರವಾರಕ್ಕೆ KSRTC ಬಸ್ ಗಾಗಿ ಮಧ್ಯರಾತ್ರಿ 12.30ಕ್ಕೆ ನಿಲ್ದಾಣಕ್ಕೆ ಬಂದಿದ್ದರು. ಈ ಮಾಹಿತಿ ಮೊದಲೇ ಪಡೆದಿದ್ದ ಇಬ್ಬರು ಪಿಎಸ್ಐಗಳು ಸಿವಿಲ್ ಡ್ರೆಸ್‌ನಲ್ಲಿ ಬಂದು ವಿಶ್ವನಾಥ್‌ರನ್ನು ಬಸ್‌ನಿಂದ ಕೆಳಗಿಳಿಸಿ, “ನಾವು ಪೊಲೀಸರು” ಎಂದು ಬೆದರಿಕೆ ಹಾಕಿದ್ದಾರೆ. ಐಡಿ ತೋರಿಸಿ ನಂಬಿಕೆ ಮೂಡಿಸಿದ ಬಳಿಕ, ಹೊರಗೆ ನಿಲ್ಲಿಸಿದ್ದ ಪೊಲೀಸ್ ಜೀಪ್ ಮತ್ತು ನಕಲಿ ಗನ್ ತೋರಿಸಿ ಚಿನ್ನ ಕಸಿದುಕೊಂಡಿದ್ದಾರೆ.

ವ್ಯಾಪಾರಿಯನ್ನು ಜೀಪ್‌ನಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಯವರೆಗೆ ಕರೆದುಕೊಂಡು ಹೋದ ಆರೋಪಿಗಳು, “ನಾವು ಐಜಿಪಿ ಸ್ಕ್ವಾಡ್” ಎಂದು ಠಾಣೆಯ ಹೊರಗೆ ನಿಂತ ಸಿಬ್ಬಂದಿಗೆ ಸುಳ್ಳು ಮಾಹಿತಿ ನೀಡಿದರೆನ್ನಲಾಗಿದೆ. ನಂತರ ಮತ್ತೆ KSRTC ನಿಲ್ದಾಣಕ್ಕೆ ಕರೆದುಕೊಂಡು ಹೋಗಿ “ಕಾರವಾರಕ್ಕೆ ಹೋಗಿ” ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದಾರೆ.

 ಅನುಮಾನಗೊಂಡ ವಿಶ್ವನಾಥ್ ತಕ್ಷಣ ಕೆಟಿಜೆ ಠಾಣೆಗೆ ಬಂದು ದೂರು ನೀಡಿದ ನಂತರ ತನಿಖೆ ಗಂಭೀರವಾಗಿ ಮುಂದುವರಿಯಿತು. ಇಬ್ಬರು ಪಿಎಸ್ಐಗಳ ಜೊತೆ ದರೋಡೆಗೆ ಸಹಕಾರ ನೀಡಿದ ಚಿನ್ನದ ಅಂಗಡಿ ಕೆಲಸಗಾರ ಸತೀಶ್ ರೇವಣ್ಕರ್ ಹಾಗೂ ನಾಗರಾಜ್ ರೇವಣ್ಕರ್‌ರನ್ನು ಸಹ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಇಬ್ಬರು ಪಿಎಸ್ಐಗಳು ಇತ್ತೀಚೆಗೆ ಹಾವೇರಿಯಿಂದ ದಾವಣಗೆರೆಯ ಐಜಿಪಿ ಕಚೇರಿಗೆ ವರ್ಗಾವಣೆಗೊಂಡಿದ್ದರು. ಸ್ಥಳನಿಗದಿಗೂ ಮುನ್ನವೇ ‘ದರೋಡೆ ಕಾರ್ಯ’ ನಡೆಸಿದ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

What's Your Reaction?

Like Like 0
Dislike Dislike 0
Love Love 1
Funny Funny 1
Angry Angry 3
Sad Sad 1
Wow Wow 0