ಗುಂಡಿಮಯವಾದ ಮರಗೋಡು–ಕೊಂಡಂಗೇರಿ ರಸ್ತೆ :ಬಾಳೆ ಗಿಡ ನೆಟ್ಟು ಧರಣಿಗೆ ಆಟೋ ಚಾಲಕರು, ಮಾಲೀಕರ ಸಂಘ ಹಾಗೂ ಗ್ರಾಮಸ್ಥರ ಎಚ್ಚರಿಕೆ
ಮಡಿಕೇರಿ, ಜು. 2: ಮರಗೋಡು–ಕೊಂಡಂಗೇರಿ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ನಿಂತಿರುವುದರಿಂದ ರಸ್ತೆ ಮತ್ತು ಗುಂಡಿಗಳ ವ್ಯತ್ಯಾಸವೇ ತಿಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮವಾಗಿ ಬೈಕ್, ಆಟೋ, ಶಾಲಾ ವಾಹನ, ಕಾರು ಸೇರಿದಂತೆ ಎಲ್ಲಾ ವಾಹನಗಳ ಸವಾರರು ಪ್ರತಿದಿನ ಜೀವದ ಭಯದಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಈ ರಸ್ತೆಯ ಮೂಲಕ ಪ್ರತಿನಿತ್ಯ ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ವ್ಯಾಪಾರಸ್ಥರು ಹಾಗೂ ಸಾವಿರಾರು ಸಾರ್ವಜನಿಕರು ಸಂಚರಿಸುತ್ತಿದ್ದು, ರಸ್ತೆ ದುರವಸ್ಥೆಯಿಂದ ವಾಹನಗಳಿಗೆ ಹಾನಿಯಾಗುವುದರ ಜೊತೆಗೆ ಅಪಘಾತಗಳ ಭೀತಿಯೂ ಹೆಚ್ಚಾಗಿದೆ. ಹಲವು ಬಾರಿ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ರಸ್ತೆ ದುರಸ್ತಿಗೆ ಯಾವುದೇ ಶಾಶ್ವತ ಕ್ರಮ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಮರಗೋಡು–ಕೊಂಡಂಗೇರಿ ರಸ್ತೆಯಲ್ಲಿ ಪ್ರತಿದಿನ ಸಂಚರಿಸುವುದು ಜೀವದ ಜೊತೆ ಜೂಜಾಡಿದಂತಾಗಿದೆ. ಮಳೆ ಬಂದರೆ ಗುಂಡಿಗಳು ಕಾಣದೆ ಅಪಘಾತದ ಭೀತಿ ಹೆಚ್ಚಾಗುತ್ತದೆ.ಇನ್ನಷ್ಟು ಅನಾಹುತಗಳು ನಡೆಯುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ರಸ್ತೆ ದುರಸ್ತಿ ಮಾಡಿದರೆ ಒಳಿತು.
ದರ್ಶನ್ ಸುಕುಮಾರ್ (ಬೈಕ್ ಸವಾರ)
"ಪ್ರತಿದಿನ ಶಾಲಾ ಮಕ್ಕಳನ್ನು ಇದೇ ರಸ್ತೆಯಲ್ಲಿ ಕರೆದುಕೊಂಡು ಹೋಗುತ್ತೇವೆ. ರಸ್ತೆಯಲ್ಲಿರುವ ದೊಡ್ಡ ಗುಂಡಿಗಳಿಂದ ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ಎದುರಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೂಡಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು,"
ಹರೀಶ್ (ಶಾಲಾ ವಾಹನ ಚಾಲಕ)
ನಂದಕುಮಾರ್ (ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಅಧ್ಯಕ್ಷ) ಮಾತನಾಡಿ, "ರಸ್ತೆ ಸಮಸ್ಯೆ ಕುರಿತು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ತಕ್ಷಣ ರಸ್ತೆ ದುರಸ್ತಿ ಆರಂಭಿಸದಿದ್ದರೆ ಆಟೋ ಚಾಲಕರು, ಮಾಲೀಕರ ಸಂಘ ಹಾಗೂ ಗ್ರಾಮಸ್ಥರು ಸೇರಿ ರಸ್ತೆ ಮಧ್ಯೆ ಬಾಳೆ ಗಿಡ ನೆಟ್ಟು ವಿನೂತನ ಧರಣಿ ನಡೆಸಲಾಗುವುದು," ಎಂದು ಎಚ್ಚರಿಕೆ ನೀಡಿದರು.
ಗ್ರಾಮಸ್ಥರು ಕೂಡ ರಸ್ತೆ ದುರಸ್ತಿಗೆ ಆಗ್ರಹಿಸಿ, "ಇದು ಕೇವಲ ರಸ್ತೆ ಸಮಸ್ಯೆಯಲ್ಲ, ಸಾರ್ವಜನಿಕರ ಜೀವದ ಪ್ರಶ್ನೆಯಾಗಿದೆ. ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ಕೂಡಲೇ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಆಟೋ ಚಾಲಕರು, ಮಾಲೀಕರ ಸಂಘ ಮತ್ತು ಗ್ರಾಮಸ್ಥರು ಒಗ್ಗಟ್ಟಿನಿಂದ ಹೋರಾಟ ನಡೆಸಲಾಗುವುದು," ಎಂದು ಎಚ್ಚರಿಕೆ ನೀಡಿದ್ದಾರೆ.
ಈ ರಸ್ತೆಯ ದುರವಸ್ಥೆಯನ್ನು ಬಿಂಬಿಸುವ ಫೋಟೋಗಳನ್ನು ಬೈಕ್ ಸವಾರ ದರ್ಶನ್ ಸುಕುಮಾರ್ ಒದಗಿಸಿದ್ದು, ರಸ್ತೆ ಸಮಸ್ಯೆಯ ಗಂಭೀರತೆಯನ್ನು ಸಾರ್ವಜನಿಕರ ಗಮನಕ್ಕೆ ತಂದಿದ್ದಾರೆ.
ವರದಿ:ಅಶೋಕ್ ಮಡಿಕೇರಿ

