ಉಪ ನಿರ್ದೇಶಕರಾಗಿ ಬಡ್ತಿ; ಗುರುಸ್ವಾಮಿಗೆ ಬೀಳ್ಕೊಡುಗೆ

ಉಪ ನಿರ್ದೇಶಕರಾಗಿ ಬಡ್ತಿ; ಗುರುಸ್ವಾಮಿಗೆ ಬೀಳ್ಕೊಡುಗೆ

ಮಡಿಕೇರಿ ಜೂ.17:-ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ಕಳೆದ ಹಲವು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿ.ಎಸ್.ಗುರುಸ್ವಾಮಿ ಅವರು ಉಪ ನಿರ್ದೇಶಕರಾಗಿ ಮುಂಬಡ್ತಿ ಹೊಂದಿ, ವರ್ಗಾವಣೆಗೊಂಡಿರುವ ಹಿನ್ನೆಲೆ ಬುಧವಾರ ಕೈಗಾರಿಕೆ, ಕೈಮಗ್ಗ ಮತ್ತು ಜವಳಿ ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ಸೇರಿದಂತೆ ವಿವಿಧ ಇಲಾಖೆ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. 

ಶಾಲೂ, ಫಲ ತಾಂಬೂಲ, ಪೇಟ ಹಾಗೂ ಉಡುಗೊರೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೊಡಗು ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷರಾದ ಸಿ.ವಿ.ನಾಗೇಶ್ ಅವರು ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  

ಜಿಲ್ಲಾ ಮಟ್ಟದಲ್ಲಿ ಕೈಮಗ್ಗ ಮತ್ತು ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳ, ಜವಳಿ ಕೈಗಾರಿಕೆಗೆ ಸಹಾಯಧನ ಸೌಲಭ್ಯ, ಸಾಲ ಆಧಾರಿತ ಬಂಡವಾಳ ಸಹಾಯಧನ, ಬಡ್ಡಿ ಸಹಾಯಧನ, ವಿಮಾ ಯೋಜನೆ, ವಿದ್ಯುತ್ ಮಗ್ಗಕ್ಕೆ ಸಹಾಯಧನ ಹೀಗೆ ಹಲವು ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸುವಲ್ಲಿ ಶ್ರಮಿಸಿದ್ದಾರೆ ಎಂದು ಅವರು ಸ್ಮರಿಸಿದರು. 

ಎಲ್ಲರೊಂದಿಗೆ ಆತ್ಮೀಯವಾಗಿ ಸಹೋದ್ಯೋಗಿಗಳ ರೀತಿ ಕೆಲಸ ನಿರ್ವಹಿಸುತ್ತಿದ್ದರು. ಸರ್ಕಾರದ ಸಾಲ ಸೌಲಭ್ಯ ಕೊಡಿಸುವಲ್ಲಿ ಇನ್ನಷ್ಟು ಕೆಲಸ ಮಾಡುವಂತಾಗಲಿ ಎಂದು ಇದೇ ಸಂದರ್ಭದಲ್ಲಿ ನಾಗೇಶ್ ಅವರು ಆಶಿಸಿದರು. 

ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಹನುಮಂತರಾಯ ಅವರು ಮಾತನಾಡಿ ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ಸ್ನೇಹಮಯಿಯಾಗಿ ಕೆಲಸ ನಿರ್ವಹಿಸಿ ಉಪ ನಿರ್ದೇಶಕರಾಗಿ ಮುಂಬಡ್ತಿ ಹೊಂದಿ ವರ್ಗಾವಣೆಯಾಗಿರುವುದು ಸಂತಸ ತಂದಿದೆ ಎಂದರು.  

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿ.ಎಸ್.ಗುರುಸ್ವಾಮಿ ಅವರು ಕಳೆದ 17 ವರ್ಷಗಳ ಸೇವಾವಧಿಯಲ್ಲಿ ಮೂರುವರೆ ವರ್ಷ ಹೊರತುಪಡಿಸಿ ಹದಿಮೂರುವರೆ ವರ್ಷ ಕೊಡಗಿನಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿದ್ದಕ್ಕೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. 

ಕೈಗಾರಿಕೆ ಮತ್ತು ಜವಳಿ ಇಲಾಖೆಯಲ್ಲಿ ಹಲವು ಜನರಿಗೆ ಹೊಲಿಗೆ ತರಬೇತಿ, ಹಲವರಿಗೆ ಸ್ವ ಉದ್ಯೋಗ ಕಲ್ಪಿಸಲು ಪ್ರಯತ್ನ, ಹಾಗೆಯೇ ಕೈಮಗ್ಗ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ಮೇಳ ಹೀಗೆ ಹಲವು ಕಾರ್ಯಗಳನ್ನು ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಿರ್ವಹಿಸಲಾಗಿದೆ ಎಂದು ಸ್ಮರಿಸಿದರು. 

ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಶಶಿಧರ, ಸಹಾಯಕ ನಿರ್ದೇಶಕರಾದ ಬಿ.ಎಸ್.ಮುತ್ತಪ್ಪ, ವರದರಾಜು, ಜಿ.ಪಂ.ಲೆಕ್ಕ ವಿಭಾಗದ ಬಲರಾಂ, ಕೈಗಾರಿಕೆ ಇಲಾಖೆಯ ಪ್ರಶಾಂತ್, ಮಧು, ಕೈಗಾರಿಕೆ ಇಲಾಖೆಯ ಸಿಬ್ಬಂದಿಗಳು ಇತರರು ಇದ್ದರು.