ಬಾಳುಗೋಡು ಬಳಿ ವಿಲ್ಲಾ ನಿರ್ಮಾಣ ವಿರೋಧಿಸಿ ಪ್ರತಿಭಟನೆ

Mar 25, 2026 - 11:24
 0  574
ಬಾಳುಗೋಡು ಬಳಿ ವಿಲ್ಲಾ ನಿರ್ಮಾಣ ವಿರೋಧಿಸಿ ಪ್ರತಿಭಟನೆ

ವೀರಾಜಪೇಟೆ, ಮಾ. 24: ಬಿಟ್ಟಂಗಾಲ ಬಾಳುಗೋಡು ರಸ್ತೆಯ ಅಂಚಿನಲ್ಲಿ ಆದಿತ್ಯ ಪಣಿಕರ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಐಷಾರಾಮಿ ವಿಲ್ಲಾಗಳ ವಿರುದ್ಧ ಪರಿಸರವಾದಿಗಳು ಪ್ರತಿಭಟನೆ ಮಾಡಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪರಿಸರವಾದಿ ಕರ್ನಲ್ ಸಿ.ಪಿ. ಮುತ್ತಣ್ಣ ಅವರು, ಅಭಿವೃದ್ಧಿ ಹೆಸರಿನಲ್ಲಿ ವಿಲ್ಲಾ ನಿರ್ಮಾಣ ಮಾಡುತ್ತಿರುವುದು ಪರಿಸರ ನಾಶಕ್ಕೆ ಕಾರಣವಾಗಿದೆ. ಪರಿಸರವನ್ನು ಹಾನಿಗೊಳಿಸಿ ವಿಲ್ಲಾ ಮತ್ತು ಬೃಹತ್ ಯೋಜನೆಗಳು ಕೊಡಗಿನಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಇಂತಹ ಯೋಜನೆಗಳಿಗೆ ಅನುಮತಿ ನೀಡಿದ ಇಲಾಖಾ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಪರಿಸರಕ್ಕೆ ಮಾರಕವಾದ ಯೋಜನೆಗಳ ವಿರುದ್ಧ ನ್ಯಾಯಯುತ ಹೋರಾಟ ಮುಂದುವರೆಯುತ್ತದೆ. ಅಲ್ಲದೆ. ಜಿಲ್ಲಾಧಿಕಾರಿಗಳು ಶಾಸಕರು ಮತ್ತು ಸಂಸದರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಹೇಳಿದರು.

ಕೊಡಗು ಮಾರಕ ಯೋಜನೆ ವಿರೋಧಿ ಹೋರಾಟ ವೇದಿಕೆಯ ಜಿಲ್ಲಾ ಸಂಚಾಲಕರಾದ ರಾಜೀವ್ ಬೋಪಯ್ಯ ಅವರು ಮಾತನಾಡಿ, ಪೂರ್ವಜರ ಆಸ್ತಿಯಲ್ಲಿ ಮರ ಕಡಿತ ಹಾಗೂ ಕಟ್ಟಡ ನಿರ್ಮಾಣಕ್ಕೆ ಕಾನೂನು ಅಡ್ಡಿಪಡಿಸಲಾಗುತ್ತಿದೆ. ಆದರೆ ಗಡಿನಾಡು ಅಭಿವೃದ್ಧಿಮಂಡಳಿಯ ಕಾನೂನು ಅನ್ವಯ 10 ಕಿ.ಮೀ ವ್ಯಾಪ್ತಿಯಲ್ಲಿ ಒಳಪಡುವ ಯೋಜನೆಗಳಿಗೆ ಕಾನೂನು ಅನ್ವಯವಾಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಪರಿಸರ ನಾಶದಿಂದಲೇ ಹವಮಾನ ವೈಪರಿತ್ಯಗಳು ಸಂಭವಿಸುತ್ತಿದ್ದು, ಪರಿಸರ ಉಳಿಸುವ ಹಂಬಲದಿಂದಾಗಿ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇವೆ

ಸೇವೆ ಕೊಡಗು ಸದಸ್ಯ ಪದ್ಮನಿ ಅವರು ಮಾತನಾಡಿ, ಸುಂದರ ಕೊಡಗು ಜಿಲ್ಲೆ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ, ಪ್ರಕೃತಿ ಸೌಂದರ್ಯ ಅಸ್ವಾದಿಸಲು ಪ್ರವಾಸಿಗಳು ಆಗಮಿಸುತ್ತಿದ್ದಾರೆ. ಆದರೆ, ಪರಿಸರ ನಾಶಮಾಡಿ ಅಭಿವೃದ್ಧಿಗೆ ಪೂರಕವಾಗಿ ಕಾಂಕ್ರೀಟ್ ನಗರ ನಿರ್ಮಾಣ ಮಾಡಿದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುತ್ತದೆ ಅಲ್ಲದೆ ಪ್ರವಾಸಿಗರನ್ನು ನಂಬಿಕೊಂಡು ಜೀವನ ನಡೆಸುವ ಪ್ರವಾಸೋದ್ಯಮ ಕಣ್ಮರೆಯಾಗುತ್ತದೆ. ನಿರ್ಮಾಣವಾಗುತ್ತಿರುವ ವಿಲ್ಲಾ ಕಾರ್ಯ ಸ್ಥಗಿತಗೊಳಿಸಬೇಕು ಎಂದು ಹೇಳಿದರು. ಅಪ್ಪಿಕೋ ಚಳವಳಿಯ ಹೋರಾಟಗಾರ ಮಾಳೇಟಿರ ಶ್ರೀನಿವಾಸ್ ಅವರು ಮಾತನಾಡಿ, ಸನಿಹದ ಬ್ರಹ್ಮಗಿರಿ ರಕ್ಷಿತಾರಣ್ಯ, ವಲಯ ನಿತ್ಯ ಮಳೆಯಾಗುವ ಮಾಕುಟ್ಟ ಅರಣ್ಯ ಪ್ರದೇಶವಿದೆ. ಇಂತಹ ಬೃಹತ್ ಯೋಜನೆಗೆ ಅನುಮತಿ ನೀಡಿದ್ದು ಹೇಗೆ ಎಂದು ಪ್ರಶ್ನಿಸಿದರು.

ಪ್ರತಿಭಟನಕಾರರು ಯೋಜನೆಯ ವಿರುದ್ಧ ಘೋಷಣೆಗಳನ್ನು ಕೂಗಿದರು, ಕೆಲ ಕಾಲ ರಸ್ತೆ ತಡೆಯನ್ನು ಮಾಡಿದರು. ಈ ಸಂಧರ್ಭ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಠಾಣಾಧಿಕಾರಿಗಳು ಪ್ರತಿಭಟನಾಕಾರನ್ನು ಮನವೊಲಿಸುವ ಪ್ರಯತ್ನ ಮಾಡಿದರು.

ಸಾಮಾಜಿಕ ಕಾರ್ಯಕರ್ತರ ಸಂಯುಕ್ತ ಹೋರಾಟ ಸಮಿತಿಯ ಸಂಚಾಲಕ ಮಾಳೇಟಿರ ಕಾಳಯ್ಯ, ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ಹೆಚ್.ಬಿ ಸತೀಶ್, ಓತ್ತೋರ್ಮೇರ ಕೊಡವ ಕೂಟ ಅಧ್ಯಕ್ಷ ಚೆಟ್ಟೋಳಿರ ಶರತ್ ಸೋಮಣ್ಣ, ಅಪ್ಪಂಡೇರಂಡ ಯಶ್ವಂತ್, ಬಲ್ಲು, ಸೇವ್ ಕೊಡಗು ಸಂಸ್ಥೆಯ ಸದಸ್ಯರು, ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಪರಿಸರವಾದಿಗಳು ಹಾಗೂ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವರದಿ:ಕಿಶೋರ್ ಕುಮಾರ್ ಶೆಟ್ಟಿ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0