ಸುಪ್ರೀಂ‌ ಕೋರ್ಟ್ ನ್ಯಾಯಾಧೀಶರ ಮೇಲೆ ಶೂ ಎಸೆತ ಪ್ರಕರಣ ಖಂಡಿಸಿ ಕುಶಾಲನಗರದಲ್ಲಿ ಪ್ರತಿಭಟನೆ

ಸುಪ್ರೀಂ‌ ಕೋರ್ಟ್ ನ್ಯಾಯಾಧೀಶರ ಮೇಲೆ ಶೂ ಎಸೆತ ಪ್ರಕರಣ  ಖಂಡಿಸಿ ಕುಶಾಲನಗರದಲ್ಲಿ  ಪ್ರತಿಭಟನೆ

ಕುಶಾಲನಗರ: ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಿಗೆ ಅಪಮಾನಿಸಿದ ಘಟನೆಯನ್ನು ಖಂಡಿಸಿ ವಿಶ್ವಜ್ಞಾನಿ ಅಂಬೇಡ್ಕರ್ ಟ್ರಸ್ಟ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಕುಶಾಲನಗರದ ಐಬಿಯಿಂದ ಮೆರವಣಿಗೆ ಬಂದ ಪ್ರತಿಭಟನಾಕಾರರು ಕಾರ್ಯಪ್ಪ ವೃತ್ತದಲ್ಲಿ ಮಾನವ ಸರಪಳಿ‌ ನಿರ್ಮಿಸಿ ಪ್ರತಿಭಟನೆ ನಡೆಸಿದರು. ನ್ಯಾಯಾಧೀಶರನ್ನು ಅಪಮಾನಿಸಿದ ವ್ಯಕ್ತಿಯನ್ನು ದೇಶದಿಂದಲೇ ಗಡಿಪಾರು ಮಾಡುವಂತೆ ಒತ್ತಾಯಿಸಿದ ಅವರು, ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ನಂತರ ಕುಶಾಲನಗರ ತಾಲ್ಲೂಕು ಕಚೇರಿಯತ್ತ ಸಾಗಿದ ಪ್ರತಿಭಟನಾಕಾರರು ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ದಲಿತ ಮುಖಂಡ ಮೋಹನ್ ಮೌರ್ಯ, ದೇಶದಲ್ಲಿ ನ್ಯಾಯಾಧೀಶರಿಗೆ ಅಪಮಾನ ಮಾಡಿರುವುದು ಅತ್ಯಂತ ಖಂಡನೀಯ. ಕೂಡಲೇ ಕೃತ್ಯವೆಸಗಿದಾತನನ್ನು ಕೂಡಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

 ಟ್ರಸ್ಟ್ ನ ಅಧ್ಯಕ್ಷರಾದ ಲೋಕೇಶ್ ಮಾತನಾಡಿ, ಮುಖ್ಯ ನ್ಯಾಯಾಧೀಶರಿಗೆ ಅಪಮಾನ ಎಸಗಿರುವುದರ ವಿರುದ್ಧ ಪ್ರತಿಯೊಬ್ಬ ಭಾರತೀಯನೂ ಖಂಡಿಸಬೇಕು. ಇದು ಎಲ್ಲಾ ಭಾರತೀಯರಿಗೂ ಮಾಡಿರುವ ಅಪಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಟ್ರಸ್ಟ್ ಕಾರ್ಯದರ್ಶಿ ಸತೀಶ್ ಕುಮಾರ್, ಖಜಾಂಜಿ ಜ್ಞಾನವಾಣಿ ಸತೀಶ್, ನಿರ್ದೇಶಕರಾದ ಜಯವರ್ಧನ್(ಕೇಶವ್), ಪ್ರಮುಖರಾದ ಸುರೇಶ್, ವೀರಭದ್ರ, ಶಿವಪ್ಪ, ಮಹೇಶ್, ರವಿ, ಮಂಜುನಾಥ್, ಅಣ್ಣಯ್ಯ, ಕೃಷ್ಟ, ಗೋವಿಂದರಾಜ್ ಹಾಗೂ ಇನ್ನಿತರರು ಇದ್ದರು.