ಏಪ್ರಿಲ್ 21ರಿಂದ 23ರವರೆಗೆ ಪುಲಿಯೇರಿ(ಇಂಜಿಲಗೆರೆ)‌ ಮಂಗಳಾಂಕುನ್ನೇಲ್ ಶ್ರೀ ಚಾಮುಂಡೇಶ್ವರಿ ಗುಳಿಗನ್ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮ ಕಲಶ ಮಹೋತ್ಸವ

ಏಪ್ರಿಲ್ 21ರಿಂದ 23ರವರೆಗೆ ಪುಲಿಯೇರಿ(ಇಂಜಿಲಗೆರೆ)‌ ಮಂಗಳಾಂಕುನ್ನೇಲ್ ಶ್ರೀ ಚಾಮುಂಡೇಶ್ವರಿ ಗುಳಿಗನ್ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮ ಕಲಶ ಮಹೋತ್ಸವ

ರಜಿತ ಕಾರ್ಯಪ್ಪ

ವಿರಾಜಪೇಟೆ: ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಲಿಯೇರಿ(ಇಂಜಿಲೆಗೆರೆ) ಗ್ರಾಮದಲ್ಲಿರುವ ಮಂಗಳಾಂಕುನ್ನೇಲ್ ಶ್ರೀ ಚಾಮುಂಡೇಶ್ವರಿ ಗುಳಿಗನ್ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮ ಕಲಶ ಮಹೋತ್ಸವವು ಏಪ್ರಿಲ್ 21ರಿಂದ 23 ರವರೆಗೆ ನಡೆಯಲಿದೆ ಎಂದು ದೇವಾಲಯದ ಮುಖ್ಯಸ್ಥರಾದ ಎಂ.ಬಿ. ಶ್ರೀಜಿಶ್ ಅವರು ತಿಳಿಸಿದರು.

     ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ದೇವಾಲಯದ ಕುರಿತು ಮಾಹಿತಿ ನೀಡಿದ ಶ್ರೀಜಿಶ್ ಅವರು, ಶ್ರೀ ಚಾಮುಂಡೇಶ್ವರಿ ಹಾಗೂ ಗುಳಿಗನ್ ದೇವರ ಸ್ಥಾನ ನಮ್ಮ ಸ್ಥಳದಲ್ಲಿದ್ದು ಸುಮಾರು 300 ವರ್ಷಗಳಿಗೂ ಅಧಿಕ ಕಾಲದಿಂದ ನಮ್ಮ ಕುಟುಂಬದ ಹಿರಿಯರು ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದರು. ನಾವು ಇದರ ಐದನೇ ತಲೆಮಾರಾಗಿದ್ದು, ಪ್ರಸ್ತುತ ಸಂದರ್ಭದಲ್ಲಿ ಈ ದೇವರ ಸ್ಥಾನವು ರಸ್ತೆ ಬದಿಯಲ್ಲಿ ಇರುವ ಕಾರಣ ದೇವಾಲಯ ನಿರ್ಮಿಸುವ ಆಲೋಚನೆ ಮಾಡಿ ತಂತ್ರಿಗಳಲ್ಲಿ ವಿಚಾರಿಸಿದಾಗ ದೇವಾಲಯ ನಿರ್ಮಾಣ ಮಾಡುವ ಬಗ್ಗೆ ತಿಳಿಸಿದರು. ಇದರ ಪ್ರಕಾರ ಕುಟುಂಬದವರು, ಗ್ರಾಮಸ್ಥರು ಸೇರಿ ಚರ್ಚೆ ನಡೆಸಿ ದೇವಾಲಯ ನಿರ್ಮಾನ ಕಾರ್ಯಕ್ಕೆ ಅಡಿಪಾಯ ಹಾಕಿ ದೇವಾಲಯ ನಿರ್ಮಾಣ ಕಾರ್ಯ ಪ್ರಾರಂಭ ಮಾಡಲಾಯಿತು. ದೇವಾಲಯ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡು ಹನ್ನೆರಡು ವರ್ಷಗಳು ಆಗುತ್ತಾ ಬಂದಿದ್ದು ಇದೀಗ ದಾನಿಗಳ, ಗ್ರಾಮಸ್ಥರ ನೆರವಿನಿಂದ ನಿರ್ಮಾಣ ಕಾರ್ಯ ಪೂರ್ಣಗೊಂಡು ಪ್ರತಿಷ್ಠಾ ಬ್ರಹ್ಮ ಕಲಶ ಮಹೋತ್ಸವಕ್ಕೆ ಎಲ್ಲ ಸಿದ್ದತೆಗಳು ನಡೆದಿದೆ.

  ಇದಕ್ಕೆ ನಮ್ಮ ಸುತ್ತಮುತ್ತಲಿನವರು, ಗ್ರಾಮಸ್ಥರು, ದಾನಿಗಳು ನೆರವು ನೀಡಿದ್ದಾರೆ. ಅಂದಾಜು 25 ಲಕ್ಷ ರೂ ವೆಚ್ಚದಲ್ಲಿ ಸಣ್ಣದಾದ ದೇವಾಲಯ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.

   ದೇವಾಲಯದಲ್ಲಿ ಏ.21 ರಿಂದ 23ರವರೆಗೆ ನಡೆಯುವ ಶ್ರೀ ಚಾಮುಂಡೇಶ್ವರಿ ಗುಳಿಗನ್ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮ ಕಲಶ ಮಹೋತ್ಸವದ ಕುರಿತು ಮಾಹಿತಿ ನೀಡಿದ ಸ್ಥಳೀಯರು ಹಾಗೂ ಅಮ್ಮತ್ತಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಿಧೀಶ್ ಮಾಹಿತಿ ನೀಡಿ ಗ್ರಾಮಸ್ಥರ ಸಹಕಾರದಿಂದ ನೂತನ ದೇವಾಲಯ ನಿರ್ಮಾಣಗೊಂಡಿದೆ. ಮೂರು ದಿನಗಳ ಕಾಲ ನಡೆಯುವ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವಕ್ಕೆ ಗ್ರಾಮಸ್ಥರು ಹಾಗೂ ಸರ್ವ ಭಕ್ತಾಧಿಗಳು ಪಾಲ್ಗೊಂಡು ಪೂಜಾ ಕಾರ್ಯಗಳನ್ನು ಯಶಸ್ವಿಗೊಳಿಸಿಕೊಡಬೇಕೆಂದು ತಿಳಿಸಿದರು.

  ಸ್ಥಳಿಯರಾದ ರೀಶಾ ಅವರು ಮಾತನಾಡಿ ಗ್ರಾಮದ ದೇವರಾಗಿರುವ ಶ್ರೀ ಚಾಮುಂಡೇಶ್ವರಿ ಗುಳಿಗನ್ ದೇವಾಲಯದ ಬ್ರಹ್ಮಕಲಶೋತ್ಸವವು ಸರ್ವ ಭಕ್ತಾಧಿಗಳ, ಗ್ರಾಮಸ್ಥರ ಸಹಕಾರದಿಂದ ಯಶಸ್ವಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಮೂರು ದಿನಗಳ ಕಾಲ ಪೂಜಾ ಕೈಂಕರ್ಯಗಳು, ಅನ್ನ ಸಂತರ್ಪಣೆ ನಡೆಸಲಾಗುತ್ತದೆ. ಎ.21 ರಂದು ಸಂಜೆ 5 ಗಂಟೆಗೆ ಕಾಂಞಂಗಾಡ್ ಎಡಮನ ಇಲ್ಲತ್ತಿಲ್ ಬ್ರಹ್ಮಶ್ರೀ ಶ್ರೀ ಈಶ್ವರ ತಂತ್ರಿಗಳು ಬ್ರಹ್ಮ ಕಲಸ ಮಹೋತ್ಸವದ ವಿಧಿವಿಧನಗಳನ್ನು ನಡೆಸಲಿದ್ದಾರೆ ಎಂದರು.

   ಅಮ್ಮತ್ತಿಯ ಹರೀಶ್ ಅವರು ಮಾತನಾಡಿ ಸುಮಾರು 300 ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯವನ್ನು ಸ್ಥಳೀಯರ ಸಹಕಾರದೊಂದಿಗೆ ಜೀರ್ಣೋದ್ದಾರ ಗೊಳಿಸಲಾಗಿದೆ. ಸುಮಾರು 12 ವರ್ಷಗಳ ನಿರಂತರ ಪ್ರಯತ್ನದಿಂದ ದೇವಾಲಯ ನಿರ್ಮಿಸಲಾಗಿದೆ. 3 ದಿನಗಳ ಕಾಲ ನಡೆಯುವ ಕಲಶ ಮಹೋತ್ಸವದಲ್ಲಿ ಸರ್ವರೂ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದರು.

ಮೂರು ದಿನಗಳ ಕಾಲ ನಡೆಯುವ ಪೂಜಾ ವಿವರಗಳು;

  ಏಪ್ರಿಲ್ 21 ರಂದು ಮಂಗಳವಾರ ಸಂಜೆ 5 ಗಂಟೆಗೆ ಕಾಂಞಂಗಾಡ್ ಎಡಮನ ಇಲ್ಲತ್ತಿಲ್ ಬ್ರಹ್ಮಶ್ರೀ ಶ್ರೀ ಈಶ್ವರ ತಂತ್ರಿಗಳನ್ನು ತಾಲಪೋಲಿ ಚಂಡೇವಾದ್ಯ ಮೇಳದೊಂದಿಗೆ ಸ್ವಾಗತಿಸಲಾಗುತ್ತದೆ.

   ಸಂಜೆ 6:00ಗೆ ಆಚಾರ್ಯ ವರಣಂ, ಸಾಮೂಹಿಕ ಪ್ರಾರ್ಥನೆ, ಸುದರ್ಶನ ಹೋಮ, ಬಿಂಬ ಪರಿಗ್ರಹಂ, ಪ್ರಸಾದ ಪರಿಗ್ರಹಂ, ಪಶುದಾನ ಪುಣ್ಯಾಹಂ,

ಪ್ರಸಾದ ಸುದ್ದಿ, ಸ್ಥಳ ಶುದ್ದಿ, ವಾಸ್ತು ಪೂಜಾ, ವಾಸ್ತು ಹೋಮ, ವಾಸ್ತು ಕಲಶ ಪೂಜೆ, ಅಸ್ತ್ರ ಕಲಶ ಪೂಜೆ, ವಾಸ್ತು ಕಲಶಾ ಅಭಿಷೇಕ, ವಾಸ್ತು ಬಲಿ, ಜಲಾದಿ ವಾಸಂ, ಬಳಿಕ ಅನ್ನ ಸಂತರ್ಪಣೆ ಜರುಗಲಿದೆ.

   22 ರಂದು ಬುಧವಾರ ಬೆಳಿಗ್ಗೆ 6 ಗಂಟೆಗೆ ಮಹಾಗಣಪತಿ ಹೋಮ, ಮಹಾ ಮೃತ್ಯುಂಜಯ ಹೋಮ, ಮಂಡಲ ಪೂಜೆ, ಶೈಯ್ಯ, ಕುಂಭೇಶ,ಕರ್ಕರಿ, ಜಲದ್ರೋಣಿ ಇತ್ಯಾದಿ ಪೂಜೆಗಳು, ಸಂಹಾರ ತತ್ವ ಹೋಮ, ಜೀವ ಕಲಶ ಪೂಜೆ, ಸಂಜೆ 6 ಗಂಟೆಗೆ ಭಕ್ತಾದಿಗಳು ತಮ್ಮ ತಮ್ಮ ಮನೆಗಳಿಂದ ಕಳಶಗಳನ್ನು ತಂದು ಕಲಶದ ನೀರಿನಿಂದ ದೇವಿಗೆ ಅಭಿಷೇಕ ಮಾಡುವುದು, ದೇವಿ ಪೂಜೆ, ಬಿಂಬೋದ್ಧಾರಣ, ಬಿಂಬಶುದ್ದಿ, ಕಳಶ ಪೂಜೆ, ಕಲಶಾಭಿಷೇಕ, ಧ್ಯಾನಾದಿವಾಸಂ, ಅದಿವಾಸ ಹೋಮ, ಬ್ರಹ್ಮ ಕಲಶಾ ಪೂಜಾ, ಅದಿವಾಸಂ, ಅಧಿವಾಸ ಬಲಿ, ಪ್ರಸಾದ ಬಿಂಬ, ಪೀಠ ಕಲಶಾದಿವಾಸಂ ನಡೆಯಲಿದೆ.

    23 ರಂದು ಗುರುವಾರ ಬೆಳಿಗ್ಗೆ 6 ಗಂಟೆಗೆ ಮಹಾಗಣಪತಿ ಹೋಮ, ಸಾಮೂಹಿಕ ನೀಲಾಂಜನ ಸಮರ್ಪಣೆ, ಭಕ್ತಾದಿಗಳು ತಮ್ಮ ತಮ್ಮ ಮನೆಗಳಿಂದ ತಾಲಂ ತಯಾರು ಮಾಡಿ ಬೆಳಿಗ್ಗೆ 6 ಗಂಟೆಗೆ ನಡೆಯುವ ಮಹಾಗಣಪತಿ ಹೋಮದ ಸಮಯದಲ್ಲಿ ಸಮರ್ಪಿಸುವುದು.

ಬೆಳಿಗ್ಗೆ 7.34 ರಿಂದ 9:37ರ ಶುಭ ಮುಹೂರ್ತದಲ್ಲಿ ಮಂಗಳಾಂಕುನ್ನೇಲ್ ಶ್ರೀ ಚಾಮುಂಡೇಶ್ವರಿ ಗುಳಿಗನ್ ಪ್ರತಿಷ್ಠಾಪನೆ ನಡೆಯುತ್ತದೆ. ನಂತರ ದೇವಿಗೆ ಬ್ರಹ್ಮಕಲಶಾಭಿಷೇಕ, ಅಲಂಕಾರ ಪೂಜೆ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯುತ್ತದೆ.