RSS ವಿವಾದ | ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕಿದ್ದಾತನ ಬಂಧನ

RSS ವಿವಾದ | ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕಿದ್ದಾತನ ಬಂಧನ
Photo credit: public tv

ಕಲಬುರಗಿ.: ಸರ್ಕಾರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಚಟುವಟಿಕೆಗಳನ್ನು ನಿಷೇಧಿಸಲು ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿದ್ದ ಪತ್ರ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಹಿನ್ನೆಲೆಯಲ್ಲಿ, ಪ್ರಿಯಾಂಕಾ ಖರ್ಗೆ ಅವರಿಗೆ ದೂರವಾಣಿ ಮೂಲಕ ಬೆದರಿಕೆ ಹಾಕಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

 ಬಂಧಿತನನ್ನು ಮಹಾರಾಷ್ಟ್ರದ ಸೋಲಾಪುರ ಮೂಲದ ದಾನಪ್ಪ ಅಲಿಯಾಸ್ ದಾನೇಶ್ ಎಂದು ಗುರುತಿಸಲಾಗಿದ್ದು, ಬೆಂಗಳೂರು ಹಾಗೂ ಕಲಬುರಗಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಮಹಾರಾಷ್ಟ್ರದ ಲಾತೂರಿನಲ್ಲಿ ಬಂಧಿಸಲಾಗಿದೆ.

ದಾನಪ್ಪ ಪ್ರಿಯಾಂಕ್ ಖರ್ಗೆಗೆ ಕರೆ ಮಾಡಿ ಅವಾಚ್ಯ ಶಬ್ದಗಳಲ್ಲಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ. ಈ ಕುರಿತು ಕಾಂಗ್ರೆಸ್ ಮುಖಂಡ ಮನೋಹರ್ ಅವರು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಎಫ್‌ಐಆರ್‌ ದಾಖಲಾಗಿದ್ದು, ತನಿಖೆ ಮುಂದುವರಿಯುತ್ತಿದೆ. ಬಂಧಿತನನ್ನು ಬೆಂಗಳೂರಿಗೆ ತರಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

 ಸಚಿವ ಪ್ರಿಯಾಂಕ್ ಖರ್ಗೆ ಅವರು ಸರ್ಕಾರಿ ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರಿ ಕಚೇರಿಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ RSS ಶಾಖೆ ಚಟುವಟಿಕೆಗಳನ್ನು ನಿಷೇಧಿಸುವಂತೆ ಸಿಎಂಗೆ ಪತ್ರ ಬರೆದಿದ್ದರು.

 ಪತ್ರ ವಿವಾದದ ಬಳಿಕ ಪ್ರಿಯಾಂಕಾ ಖರ್ಗೆಯವರಿಗೆ ಅನಾಮಧೇಯ ಕರೆಗಳ ಮೂಲಕ ನಿಂದನೆ ಮತ್ತು ಬೆದರಿಕೆಗಳು ಬಂದಿದ್ದು, ಅವರೇ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಹಂಚಿಕೊಂಡು “ಇವು RSS ಶಾಖೆಗಳಲ್ಲಿ ನೀಡುವ ಸಂಸ್ಕಾರಗಳೇ?” ಎಂದು ಪ್ರಶ್ನಿಸಿದ್ದರು.

ತಮ್ಮ ಟ್ವೀಟ್‌ನಲ್ಲಿ, “ಆರ್‌ಎಸ್‌ಎಸ್ ಯುವಕರ ಮನಸ್ಸುಗಳಲ್ಲಿ ಕಲ್ಮಶ ಹೇಗೆ ತುಂಬುತ್ತಿದೆ ಎಂದರೆ, ಅದು ಹೇಗಿರುತ್ತದೆ ಎಂಬುದಕ್ಕೆ ಈ ವಿಡಿಯೋ ಒಂದು ಉದಾಹರಣೆ. ತಾಯಿ ಮತ್ತು ಸಹೋದರಿಯರ ಹೆಸರು ಹಿಡಿದು ನಿಂದಿಸುವುದೇ ಆರ್‌ಎಸ್‌ಎಸ್ ಶಾಖೆಯ ಸಂಸ್ಕಾರವೇ? ಮೋದಿ ಹಾಗೂ ಮೋಹನ್ ಭಾಗವತ್ ಅವರ ತಾಯಿಯರ ಬಗ್ಗೆ ಇದೇ ರೀತಿಯ ನಿಂದನೆಗಳನ್ನು ಬಿಜೆಪಿ ನಾಯಕರು ಒಪ್ಪುತ್ತಾರೆಯೇ?” ಎಂದು ಪ್ರಿಯಾಂಕಾ ಖರ್ಗೆಯವರು ಕಟುವಾಗಿ ಪ್ರತಿಕ್ರಿಯಿಸಿದ್ದರು.