ಪ್ಯಾರಿಸ್ ನ ವಿಶ್ವ ಪ್ರಸಿದ್ಧ ಲೌವ್ರ್ ಮ್ಯೂಸಿಯಂನಲ್ಲಿ ದರೋಡೆ: ಕೇವಲ 7 ನಿಮಿಷಗಳಲ್ಲಿ ನೆಪೋಲಿಯನ್ ಕಾಲದ ಅಮೂಲ್ಯ ಆಭರಣ ದೋಚಿದ ಕಳ್ಳರು | 1911ರಲ್ಲಿ ಮೊನಾಲಿಸಾ ಚಿತ್ರವೂ ಇಲ್ಲಿಂದಲೇ ಕಳವಾಗಿತ್ತು!

ಪ್ಯಾರಿಸ್ ನ ವಿಶ್ವ ಪ್ರಸಿದ್ಧ ಲೌವ್ರ್ ಮ್ಯೂಸಿಯಂನಲ್ಲಿ ದರೋಡೆ: ಕೇವಲ 7 ನಿಮಿಷಗಳಲ್ಲಿ ನೆಪೋಲಿಯನ್ ಕಾಲದ ಅಮೂಲ್ಯ ಆಭರಣ ದೋಚಿದ ಕಳ್ಳರು  |  1911ರಲ್ಲಿ ಮೊನಾಲಿಸಾ ಚಿತ್ರವೂ ಇಲ್ಲಿಂದಲೇ ಕಳವಾಗಿತ್ತು!
Photo credit: NDTV World

ಪ್ಯಾರಿಸ್, ಅ. 19: ಫ್ರಾನ್ಸ್‌ನ ವಿಶ್ವಪ್ರಸಿದ್ಧ ಲೌವ್ರ್ ವಸ್ತುಸಂಗ್ರಹಾಲಯ ಭಾನುವಾರ ಬೆಳಿಗ್ಗೆ ಅಚ್ಚರಿ ಮೂಡಿಸುವ ನಡುಹಗಲು ದರೋಡೆ ನಡೆದಿದೆ. ಶಸ್ತ್ರಸಜ್ಜಿತ ಕಳ್ಳರ ತಂಡ ಕೇವಲ ಏಳು ನಿಮಿಷಗಳಲ್ಲಿ ಅಪೊಲೊ ಗ್ಯಾಲರಿಗೆ ನುಗ್ಗಿ, ನೆಪೋಲಿಯನ್ ಕಾಲದ ಅಮೂಲ್ಯ ಆಭರಣ ಸಂಗ್ರಹವನ್ನು ದೋಚಿದೆ.

ಸಾಮಾನ್ಯವಾಗಿ ಪ್ರತಿ ದಿನ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುವ ಲೌವ್ರ್ ಮ್ಯೂಸಿಯಂಗೆ ಭಾನುವಾರವೂ ಸುಮಾರು 30,000 ಮಂದಿ ಭೇಟಿ ನೀಡುವ ನಿರೀಕ್ಷೆಯಲ್ಲಿತ್ತು. ಆದರೆ ಬೆಳಗಿನ ಜಾವ ನಡೆದ ಈ ದರೋಡೆ ಘಟನೆ, ವಸ್ತುಸಂಗ್ರಹಾಲಯದ ಇತಿಹಾಸದಲ್ಲಿ ಮತ್ತೊಂದು ಕುಖ್ಯಾತ ಅಧ್ಯಾಯವನ್ನು ಸೇರಿಸಿದೆ.

ಬೆಳಗ್ಗೆ ಸ್ಕೂಟರ್‌ಗಳಲ್ಲಿ ಬಂದ ಕಳ್ಳರ ತಂಡ ಕಟರ್ ಉಪಕರಣಗಳ ನೆರವಿನಿಂದ ವಸ್ತುಸಂಗ್ರಹಾಲಯದ ಅಪೊಲೊ ಗ್ಯಾಲರಿಯ ಕಿಟಕಿಗಳನ್ನು ಒಡೆದು ಒಳನುಗ್ಗಿದೆ. ಕೇವಲ ಏಳು ನಿಮಿಷಗಳೊಳಗೆ ಅವರು ನೆಪೋಲಿಯನ್ ನ ಅಮೂಲ್ಯ ಆಭರಣ ಸಂಗ್ರಹದಲ್ಲಿದ್ದ ಒಂಭತ್ತು ರತ್ನಗಳನ್ನು ದೋಚಿದ್ದಾರೆ. 

ಫ್ರಾನ್ಸ್‌ನ ಆಂತರಿಕ ಸಚಿವ ಲಾರೆಂಟ್ ನುನೆಜ್ ಈ ಘಟನೆಯನ್ನು ದೃಢಪಡಿಸಿ, “ಇದು ಅತ್ಯಂತ ನಿಖರವಾಗಿ ಯೋಜಿಸಲಾದ ಪ್ರಮುಖ ದರೋಡೆ ಪ್ರಕರಣ,” ಎಂದು ತಿಳಿಸಿದ್ದಾರೆ.

ತನಿಖಾಧಿಕಾರಿಗಳ ಪ್ರಕಾರ, ಕಳ್ಳರು ಕಟ್ಟಡದ ಹೊರಗಿನಿಂದ ಬ್ಯಾಸ್ಕೆಟ್ ಲಿಫ್ಟ್ ಬಳಸಿ ಮೇಲ್ಮಹಡಿಗೆ ತಲುಪಿದ್ದಾರೆ. ಕಿಟಕಿಗಳನ್ನು ಡಿಸ್ಕ್ ಕಟರ್ ಮೂಲಕ ಕತ್ತರಿಸಿ ಒಳನುಗ್ಗಿ, ಕೇವಲ 7 ನಿಮಿಷಗಳಲ್ಲಿ ಆಭರಣ ಸಂಗ್ರಹವನ್ನು ಕಳ್ಳತನ ಮಾಡಿದ್ದಾರೆ. ಘಟನೆಯ ಮುಂಚಿತವಾಗಿ ಮೂವರು ಅಥವಾ ನಾಲ್ವರು ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಯೋಜನೆ ನಡೆಸಿದ್ದರೆಂದು ಶಂಕೆ ವ್ಯಕ್ತವಾಗಿದೆ. ಘಟನೆಯ ನಂತರ ವಸ್ತುಸಂಗ್ರಹಾಲಯವನ್ನು ತಕ್ಷಣವೇ ಮುಚ್ಚಿ ತನಿಖೆ ಪ್ರಾರಂಭಿಸಲಾಗಿದೆ.

ಲೆ ಪ್ಯಾರಿಸಿಯನ್ ಪತ್ರಿಕೆಯ ವರದಿ ಪ್ರಕಾರ, ಕಳ್ಳರು ಸೀನ್ ನದಿಯ ತೀರದಲ್ಲಿರುವ ನಿರ್ಮಾಣ ಪ್ರದೇಶದ ಮೂಲಕ ಒಳನುಗ್ಗಿ, ಸರಕು ಲಿಫ್ಟ್ ಮೂಲಕ ಗುರಿ ಕೋಣೆಯಾದ ಅಪೊಲೊ ಗ್ಯಾಲರಿಗೆ ತಲುಪಿದ್ದಾರೆ. ಕಳ್ಳತನ ಮಾಡಿರುವ ಆಭರಣಗಳಲ್ಲೊಂದನ್ನು ವಸ್ತುಸಂಗ್ರಹಾಲಯದ ಹೊರಗೆ ಹಾನಿಗೊಂಡ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ.

ದರೋಡೆ ನಂತರ ತಕ್ಷಣವೇ ವಸ್ತುಸಂಗ್ರಹಾಲಯದ ಬಾಗಿಲುಗಳನ್ನು ಮುಚ್ಚಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತೆಯನ್ನು ಕಠಿಣಗೊಳಿಸಲಾಯಿತು. ಸ್ಥಳದಲ್ಲಿದ್ದ ಪ್ರವಾಸಿಗರು ಹೊರಬರಲು ಕಾಯುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗಿವೆ.

ಲೌವ್ರ್ ವಸ್ತುಸಂಗ್ರಹಾಲಯದಲ್ಲಿ ಇದು ಮೊದಲ ಕಳ್ಳತನವಲ್ಲ. 1911ರಲ್ಲಿ ನಡೆದ ಮೋನಾಲಿಸಾ ಚಿತ್ರ ಕಳ್ಳತನ ವಿಶ್ವದಾದ್ಯಂತ ಸಂಚಲನ ಮೂಡಿಸಿತ್ತು. ಆಗ ವಸ್ತುಸಂಗ್ರಹಾಲಯದ ಉದ್ಯೋಗಿ ವಿನ್ಸೆಂಜೊ ಪೆರುಗ್ಗಿಯಾ ಚಿತ್ರವನ್ನು ಚೌಕಟ್ಟಿನಿಂದ ತೆಗೆದು ತನ್ನ ಕೋಟ್‌ನಲ್ಲಿ ಅಡಗಿಸಿಕೊಂಡು ಹೊರನಡೆದಿದ್ದ.

ಫ್ರಾನ್ಸ್ ಸಂಸ್ಕೃತಿ ಸಚಿವೆ ರಚಿಡಾ ದಾಟಿ ತಿಳಿಸಿದ್ದಾರೆ: “ವಸ್ತುಸಂಗ್ರಹಾಲಯದಲ್ಲಿ ಹಗಲಿನ ವೇಳೆಯಲ್ಲೇ ಈ ದರೋಡೆ ನಡೆದಿದೆ. ಯಾವುದೇ ಗಾಯಗಳಾಗಿರುವ ವರದಿಯಾಗಿಲ್ಲ. ನಾನು ಸ್ಥಳದಲ್ಲೇ ಇದ್ದು ಸಿಬ್ಬಂದಿ ಹಾಗೂ ಪೊಲೀಸರೊಂದಿಗೆ ಕಾರ್ಯಾಚರಣೆ ಮುಂದುವರಿಸುತ್ತಿದ್ದೇನೆ,” ಎಂದಿದ್ದಾರೆ.