ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸಂಕ್ರಾಂತಿ ಸಂಭ್ರಮ: ಎತ್ತಿನ ಗಾಡಿಯೊಂದಿಗೆ ಕಳೆಗಟ್ಟಿದ ಸಂಕ್ರಾಂತಿ ಸಂಭ್ರಮ

Jan 15, 2026 - 15:31
 0  311
ಕೂಡ್ಲೂರು ಸರ್ಕಾರಿ  ಪ್ರೌಢಶಾಲೆಯಲ್ಲಿ ಸಂಕ್ರಾಂತಿ ಸಂಭ್ರಮ:   ಎತ್ತಿನ ಗಾಡಿಯೊಂದಿಗೆ ಕಳೆಗಟ್ಟಿದ  ಸಂಕ್ರಾಂತಿ ಸಂಭ್ರಮ

ಕುಶಾಲನಗರ, ಜ.15 : ಕುಶಾಲನಗರ ತಾಲ್ಲೂಕಿನ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮೀಣ ಜನಪದ ಸೊಗಡಿನ ಪ್ರತೀಕವಾದ ರೈತರ ಸುಗ್ಗಿ ಹಬ್ಬವಾದ ಸಂಕ್ರಾಂತಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ಪೂಜೆ ನೆರವೇರಿಸುವ ಮೂಲಕ ಶಾಲೆಯ ವಿದ್ಯಾರ್ಥಿಗಳು ಗ್ರಾಮೀಣ ಸೊಗಡಿನ ಸಂಕ್ರಾಂತಿ ಹಬ್ಬದ ಸಂಸ್ಕೃತಿ ಬಿಂಬಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

 ಅಲಂಕೃತ ಎತ್ತಿನ ಗಾಡಿ ಜತೆಗೆ ಎತ್ತುಗಳೊಂದಿಗೆ ಕೃಷಿ ಸಲಕರಣೆಗಳು ಮತ್ತು ಧಾನ್ಯಗಳ ರಾಶಿ ಹಾಗೂ ಗೋ ಪೂಜೆ ಮಾಡಿ ವಿದ್ಯಾರ್ಥಿಗಳು ಖುಷಿಪಟ್ಟು ಅನ್ನದಾತರ ಅರಿವು ಮೂಡಿಸುವ ಸುಗ್ಗಿ ಸಂಭ್ರಮದಲ್ಲಿ ಭಾಗಿಯಾದರು. ವಿದ್ಯಾರ್ಥಿಗಳು ರಂಗೋಲಿ ಚಿತ್ತಾರದೊಂದಿಗೆ ಎಳ್ಳು ಬೆಲ್ಲ ಕಬ್ಬು, ಹಣ್ಣು‌ ಹಂಚಿಕೆ, ಸಾಂಪ್ರದಾಯಿಕ ಉಡುಪು, ಕುಣಿತದೊಂದಿಗೆ ಸಂಭ್ರಮಿಸಿದರು.

 ಶಾಲಾವರಣದಲ್ಲಿ ನಡೆದ ಸಂಕ್ರಾಂತಿ ಸಂಭ್ರಮ ಕಳೆಗಟ್ಟಿತ್ತು. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ರೀತಿ ಓದುವ ವಿದ್ಯಾರ್ಥಿಗಳಲ್ಲಿ ಹಬ್ಬ ಹರಿದಿನ, ಸಂಪ್ರದಾಯ, ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಲು ಶಾಲೆಯ ವಿದ್ಯಾರ್ಥಿ ಸಂಘ, ರಾಷ್ಟ್ರೀಯ ಸೇವಾ ಯೋಜನೆ ( ಎನ್.ಎಸ್.ಎಸ್.) ಘಟಕ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಘಟಕದಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮ ಮಕ್ಕಳು ಮತ್ತು ಗ್ರಾಮಸ್ಥರ ಮನಸೂರೆಗೊಂಡಿತು.

ಸಂಕ್ರಾಂತಿ ಹಬ್ಬದ ಕುರಿತು ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಬೆಳೆಗಳು ರೈತರ ಕೈ ಸೇರಿದ ಖಷಿಯಲ್ಲಿ ಎಲ್ಲರೂ ಸಾಮೂಹಿಕವಾಗಿ ತಮ್ಮ ತಮ್ಮ ಹೊಲ, ಗದ್ದೆಗಳಲ್ಲಿ ನವ ಧಾನ್ಯಗಳನ್ನು ರಾಶಿ ಹಾಕಿ ಪೂಜೆ ಮಾಡುತ್ತಿದ್ದು, ಇದನ್ನು ಯುವ ಪೀಳಿಗೆಗೆ ಪರಿಚಯಿಸಿ ಮುಂದುವರೆಸಿಕೊಂಡು ಹೋಗುವಂತೆ ಪ್ರೇರೇಪಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.

ಸಂಕ್ರಾಂತಿ ಹಬ್ಬದ‌ ಮಹತ್ವ‌ ಕುರಿತು ಮಾತನಾಡಿದ ಕನ್ನಡ ಭಾಷಾ ಶಿಕ್ಷಕ ಕೆ.ಗೋಪಾಲಕೃಷ್ಣ, ಸಂಕ್ರಾಂತಿ ಎಂದರೆ ರೈತರಿಗೆ ಸುಗ್ಗಿಯ ಹಬ್ಬ. ವರ್ಷವಿಡೀ ಕಷ್ಟಪಟ್ಟು ದುಡಿಯುವ ರೈತರು ಸಂಕ್ರಾಂತಿ ಬಂದರೆ ಸಾಕು ಬೆಳೆದ ಬೆಳೆ, ಜಾನುವಾರು, ಕುಟುಂಬ, ಬಂಧು-ಬಳಗದ ಜೊತೆ ಸುಗ್ಗಿಯನ್ನು ಹುಗ್ಗಿಯನ್ನಾಗಿ ಸಂಭ್ರಮಿಸುವ ಕಾಲವಿದು. ಇದು ಗ್ರಾಮೀಣ ಜನಪದ ಸಂಸ್ಕೃತಿಯ ಪ್ರತೀಕವಾಗಿದೆ ಎಂದರು.

 ನವಧಾನ್ಯಗಳ ರಾಶಿಗೆ ಪೂಜೆ ಸಲ್ಲಿಸಿದ ಗ್ರಾಮದ ಹಿರಿಯ ಕೃಷಿಕ ಕೆ.ಎಸ್.ರಾಜಾಚಾರಿ ಮಾತನಾಡಿ, ಸಂಕ್ರಾಂತಿ ಹಬ್ಬವನ್ನು ಹಳ್ಳಿಗಳಲ್ಲಿ ಸಾಂಪ್ರದಾಯಿಕವಾಗಿ ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ದಯಾನಂದ ಪ್ರಕಾಶ್, ಸಂಕ್ರಾಂತಿ ಶುಭಾಶಯಗಳನ್ನು ತಿಳಿಸಿದರು. ಸನ್ಮಾನ: ಇದೇ ವೇಳೆಯಲ್ಲಿ ಹಿರಿಯ ಕೃಷಿಕ ಕೆ.ಎಸ್.ರಾಜಾಚಾರಿ ಅವರನ್ನು ಶಾಲೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

 ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಬಿ.ಡಿ.ರಮ್ಯ, ಎಸ್.ಎಂ.ಗೀತಾ, ಅನ್ಸಿಲಾ ರೇಖಾ, ಎನ್ನೆಸ್ಸೆಸ್ ಅಧಿಕಾರಿ ಕೆ.ಟಿ.ಸೌಮ್ಯ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಚ್.ಎಸ್.ಸುಜಾತ, ಕಛೇರಿ ಸಿಬ್ಬಂದಿ ಎಂ.ಉಷಾ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು‌ ಮತ್ತು ವಿದ್ಯಾರ್ಥಿಗಳು ಸಂಕ್ರಾಂತಿ ಸಂಭ್ರಮಕ್ಕೆ ಸಾಕ್ಷಿಯಾದರು. ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪರಸ್ಪರ ಎಳ್ಳು ಬೆಲ್ಲ ಹಂಚಿ ಕುಣಿದು ಸಂಭ್ರಮಿಸಿದರು. ಮಕ್ಕಳ ಸಂಭ್ರಮಕ್ಕೆ ಶಿಕ್ಷಕರು ಸಾಥ್ ನೀಡಿದರು.

 ‌‌‌ ನಂತರ ಕೂಡ್ಲೂರು ಗ್ರಾಮದ ಕೃಷಿಕ ಕೆ.ಆರ್.ನಾಗರಾಜ್ ಅವರ ಎತ್ತಿನ ಗಾಡಿಗೆ‌ ಏರಿದ ವಿದ್ಯಾರ್ಥಿಗಳು ಗಾಡಿಯಲ್ಲಿ ಸಂಚರಿಸಿ ಸಂತಸಪಟ್ಟರು. ‌ ಕೃಷಿಕ‌ ದಂಪತಿ ಕೆ.ಆರ್.ನಾಗರಾಜ್ ಮತ್ತು ರಜನಿ ಹಾಗೂ ಅವರ ಮಗಳು ಕೆ.ಎನ್.ಪುಣ್ಯ, ಸಂಕ್ರಾಂತಿಯ ಹಬ್ಬದ ಆಚರಣೆಗಳನ್ನು ನಡೆಸಿಕೊಟ್ಟರು. ಶಾಲಾ ಅಂಗಳದಲ್ಲಿ ತೋಳೂರು ಶೆಟ್ಟಳ್ಳಿ ಡಾ ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿನಿ‌ ಕೆ.ಎನ್.ಪುಣ್ಯ, ಬಿಡಿಸಿದ್ದ ಸಂಕ್ರಾಂತಿ ಹಬ್ಬ ಪ್ರತಿಬಿಂಬಿಸುವ ಬಣ್ಣಬಣ್ಣದ ರಂಗೋಲಿ ಚಿತ್ರ‌ ಗಮನ ಸೆಳೆಯಿತು.

ಸಂಕ್ರಾಂತಿ ಹಬ್ಬವನ್ನು ಗ್ರಾಮೀಷ ಪ್ರದೇಶದಲ್ಲಿ ರೈತರು ತಾವು ವರ್ಷ ಪೂರ್ತಿ ವ್ಯವಸಾಯ ಮಾಡಿ ಬೆಳೆದ ಬೆಳೆಗಳನ್ನು ರಾಶಿ ಹಾಕಿ ಅವುಗಳಿಗೆ ಪೂಜೆ ಸಲ್ಲಿಸಿ ಸುಗ್ಗಿ ಹಬ್ಬವಾಗಿ ಆಚರಿಸುವುದು, ರೈತರಿಗೆ ವ್ಯವಸಾಯದಲ್ಲಿ ಪೂರಕವಾಗಿ ಸಹಕಾರ ನೀಡಿದ ವ್ಯವಸಾಯ ಸಲಕರಣೆಗಳು, ಹಸು, ಕರು, ದನಗಳನ್ನು ಪೂಜಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0