ಮಾದರಿ ಸೌರಗ್ರಾಮ ಯೋಜನೆಯಡಿ ‘ಸೌರ ವಿದ್ಯುತ್’ ಉತ್ಪಾದನೆಗೆ ಗ್ರಾಮಗಳ ಆಯ್ಕೆ
ಮಡಿಕೇರಿ:-ಮಾದರಿ ಸೌರಗ್ರಾಮ ಯೋಜನೆಯಡಿಯಲ್ಲಿ ಭಾರತ ಸರ್ಕಾರ ‘ಸೌರ ವಿದ್ಯುತ್’ ಉತ್ಪಾದನೆಯ ಪಾಲನ್ನು ಹೆಚ್ಚಿಸುವ ಗುರಿ ಹೊಂದಿದೆ. ಎಂಎನ್‍ಆರ್‍ಐ ಮಾದರಿ ಸೂಚಿಯಂತೆ ಪ್ರತಿ ಜಿಲ್ಲೆಯಲ್ಲಿ 5 ಸಾವಿರ ಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಹಾಲಿ ವಿದ್ಯುತ್ ಜಾಲದಿಂದ ಸಂಪರ್ಕ ಹೊಂದಿರುವ ಕಂದಾಯ ಗ್ರಾಮಗಳು ಸ್ಪರ್ಧಿಸುವ ಅವಕಾಶ ಇರುವುದರಿಂದ ಕೊಡಗು ಜಿಲ್ಲೆಯಲ್ಲಿ ಸೋಮವಾರಪೇಟೆ ತಾಲ್ಲೂಕಿನ ಬಿದರೂರು, ಚೌಡ್ಲು, ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ, ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು-ಕೂಡಿಗೆ ಮತ್ತು ವಿರಾಜಪೇಟೆ ತಾಲ್ಲೂಕಿನ ಚೆನ್ನಯ್ಯನಕೋಟೆ ಗ್ರಾಮಗಳನ್ನು ಪೊಟೆನ್ಸ್ಯಯಲ್ ಕ್ಯಾಂಡಿಡೇಟ್ ಗ್ರಾಮಗಳಾಗಿ ಗುರುತಿಸಲಾಗಿದೆ. ಪೊಟೆನ್ಸ್ಯಯಲ್ ಕ್ಯಾಂಡಿಡೇಟ್ ಗ್ರಾಮಗಳಾಗಿ ಆಯ್ಕೆಯಾಗಿರುವ ಗ್ರಾಮಗಳಿಗೆ 2025 ರ ಜುಲೈ, 01 ರಿಂದ 6 ತಿಂಗಳ ಅವಧಿ(31-12-2025) ನೀಡಲಾಗಿದ್ದು, ಈ ಅವಧಿಯಲ್ಲಿ ವಿವಿಧ ಯೋಜನೆಗಳನ್ನು ಗರಿಷ್ಠ ಮಟ್ಟದಲ್ಲಿ ಅನುಷ್ಠಾನಗೊಳಿಸಿ ಹೆಚ್ಚಿನ ನವೀಕರಿಸಬಹುದಾದ ಸೌರವಿದ್ಯುತ್ ಉತ್ಪಾದನೆಯ ಗುರಿಯನ್ನು ಸಾಧಿಸುವ ಗ್ರಾಮವನ್ನು ಮಾದರಿ ಸೌರಗ್ರಾಮ ಎಂದು ಆಯ್ಕೆ ಮಾಡಲಾಗುವುದು.
ಆಯ್ಕೆ ಆಗುವ ಮಾದರಿ ಸೌರಗ್ರಾಮಕ್ಕೆ ರೂ.1 ಕೋಟಿ ಕೇಂದ್ರಿಯ ಹಣಕಾಸಿನ ಸಹಾಯ(ಸಿಎಫ್‍ಎ) ಅನುದಾನ ನೀಡಲಾಗುವುದು. ಈ ಚಟುವಟಿಕೆಗಳನ್ನು ಆಯಾಯ ಪಂಚಾಯತ್ ಕಾರ್ಯದರ್ಶಿಗಳ ನೇತೃತ್ವದಲ್ಲಿ ಗ್ರಾಮ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ರಚಿಸಲಾಗುವುದು. ನಿರೀಕ್ಷಿತ ಫಲಾನುಭವಿಗಳ ಮನೆಬಾಗಿಲಿಗೆ ಹೋಗಿ ಪ್ರಚಾರ ಮಾಡುವುದು, ಜನಸಾಮಾನ್ಯರಲ್ಲಿ ಸೌರ ವಿದ್ಯುತ್ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವುದು, ಸರ್ಕಾರದ ಪಿ.ಎಂ.ಸೂರ್ಯ ಘರ್-ಮುಪ್ತ್ ಬಿಜಲಿ ಯೋಜನೆ, ಕೆಯುಎಸ್‍ಯುಎಂ-ಬಿ, ಕೆಯುಎಸ್‍ಯುಎಂ-ಸಿ ಯೋಜನೆಗಳ ಸವಲತ್ತುಗಳನ್ನು ಪಡೆದುಕೊಳ್ಳಲು ಉತ್ತೇಜಿಸುವುದು. ಪಂಚಾಯತ್‍ಗಳು ನಿರೀಕ್ಷಿತ ಫಲಾನುಭವಿಗಳು, ಬ್ಯಾಂಕ್‍ಗಳು, ಅನುಮೋದನೆ ಹೊಂದಿರುವ ಮಾರಾಟಗಾರರ ನಡುವೆ ಸಂಪರ್ಕ ಕಲ್ಪಿಸುವುದು ಆಗಿದೆ. ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಮಾರ್ಗಸೂಚಿಯಂತೆ ಸಮಿತಿಯನ್ನು ರಚಿಸಲಾಗಿದೆ. ಜಿಲ್ಲಾಧಿಕಾರಿ ಅವರು ಅಧ್ಯಕ್ಷರಾಗಿದ್ದು, ಜಿ.ಪಂ.ಸಿಇಒ, ತಹಶೀಲ್ದಾರರು, ಸೆಸ್ಕ್ ಎಂಜಿನಿಯರ್‍ಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಇತರರು ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.