ಅರೆಭಾಷೆ ವಿಚಾರ ಸಂಕಿರಣ ಮತ್ತು ಪದ ಕಟ್ಟುವ ಕಾರ್ಯಗಾರ ನಾಡಿನ ಭಾಷೆ ಜೊತೆಗೆ ಅರೆಭಾಷೆ ಸೇರಿದಂತೆ ಸಣ್ಣ ಸಣ್ಣ ಭಾಷೆ ಉಳಿಸಿ, ಬೆಳೆಸಿ: ಅಶೋಕ ಸಂಗಪ್ಪ
ಮಡಿಕೇರಿ ಮಾ.26:-ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗವು ಬಹುಭಾಷೆ ಮತ್ತು ಬಹುಸಂಸ್ಕøತಿ ಒಳಗೊಂಡಿರುವ ಪ್ರದೇಶವಾಗಿದೆ. ಆ ದಿಸೆಯಲ್ಲಿ ನಾಡಿನ ಭಾಷೆ ಜೊತೆಗೆ ಅರೆಭಾಷೆ ಸೇರಿದಂತೆ ಸಣ್ಣ ಸಣ್ಣ ಭಾಷೆಗಳನ್ನು ಉಳಿಸಿ, ಬೆಳೆಸುವಂತಾಗಬೇಕು ಎಂದು ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಅಶೋಕ್ ಸಂಗಪ್ಪ ಆಲೂರ ಅವರು ತಿಳಿಸಿದ್ದಾರೆ.
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಇವರ ಸಹಯೋಗದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ಗುರುವಾರ ನಡೆದ ರಾಜ್ಯ ಮಟ್ಟದ ಅರೆಭಾಷೆ ವಿಚಾರ ಸಂಕಿರಣ ಮತ್ತು ಪದ ಕಟ್ಟುವ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಜಿಲ್ಲೆಗಳಲ್ಲಿ ಬಹುಭಾಷೆ ಮತ್ತು ಬಹುಸಂಸ್ಕøತಿ ಇರುವುದನ್ನು ಕಾಣಬಹುದಾಗಿದೆ. ನಾಡಿನ ಭಾಷೆಯ ಜೊತೆಗೆ ಹಲವು ಸ್ಥಳೀಯ ಭಾಷೆ ಕಾಣಬಹುದಾಗಿದೆ ಎಂದು ಹೇಳಿದರು.
ಬಹುದೊಡ್ಡ ಭಾಷೆಯಾದ ಕನ್ನಡ ಭಾಷೆಯ ಜೊತೆಗೆ ಸಣ್ಣ ಸಣ್ಣ ಸ್ಥಳೀಯ ಭಾಷೆಗಳನ್ನು ಸಹ ಉಳಿಸಬೇಕು. ಆ ನಿಟ್ಟಿನಲ್ಲಿ ಅರೆಭಾಷೆಗೆ ತನ್ನದೇ ಆದ ವೈವಿದ್ಯಮಯ ಭಾಷಾ ಶ್ರೀಮಂತಿಕೆ ಇದ್ದು, ಅದನ್ನು ಉಳಿಸುವಂತಾಗಬೇಕು ಎಂದು ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಅವರು ಕರೆ ನೀಡಿದರು.
ಅರೆಭಾಷೆಯನ್ನು ಕೊಡಗು ಮತ್ತು ದಕ್ಷಿಣ ಕನ್ನಡದಲ್ಲಿ ಹೆಚ್ಚಾಗಿ ಮಾತನಾಡುವ ಪ್ರದೇಶವಾಗಿದೆ. ಸಂವಿಧಾನದ 8ನೇ ಪರಿಚ್ಛೇದದಲ್ಲಿ 22 ಭಾಷೆಗಳು ಇದ್ದು, ಇವುಗಳಲ್ಲಿ ಉತ್ತರ ಭಾರತದ 18 ಭಾಷೆಗಳು ಹಾಗೂ ದಕ್ಷಿಣದ ನಾಲ್ಕು ಭಾಷೆಗಳು ಸಂವಿಧಾನ 8 ನೇ ಪರಿಚ್ಚೇದದಲ್ಲಿ ಸೇರಿವೆ ಎಂದು ಪ್ರೊ.ಅಶೋಕ ಸಂಗಪ್ಪ ಆಲೂರ ಅವರು ತಿಳಿಸಿದರು.
ಅರೆಭಾಷೆ ಬಗ್ಗೆ ಅಭಿಮಾನ ಇರಬೇಕು. ಅರೆಭಾಷೆ, ಸಂಸ್ಕøತಿ, ಸಾಹಿತ್ಯ, ಜಾನಪದ ಇವುಗಳ ಅಧ್ಯಯನ, ಸಂಶೋಧನೆ ಇನ್ನಷ್ಟು ಹೆಚ್ಚು ಕೈಗೊಂಡು ಅರೆಭಾಷೆಯನ್ನು ಮತ್ತಷ್ಟು ಮುಂಚೂಣಿಗೆ ತರುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.
ಅರೆಭಾಷೆಗೆ ತನ್ನದೇ ಆದ ಪ್ರಾಚೀನ ಇತಿಹಾಸವಿದ್ದು, ವಿಶಿಷ್ಟ ಮತ್ತು ವೈವಿದ್ಯತೆ ಹೊಂದಿರುವ ಭಾಷೆಯಾಗಿದೆ. ಅರೆಭಾಷೆಯನ್ನು ಗೌಡ ಕನ್ನಡವೆಂದು ಸಹ ಕರೆಯುವ ಪ್ರತೀತಿ ಇದೆ ಎಂದು ಹೇಳಿದರು.
ಅರೆಭಾಷಿಗರ ಸಾಮಾಜಿಕ ಮತ್ತು ಸಾಂಸ್ಕøತಿಕ, ಭಾಷಾ ಚಟುವಟಿಕೆ, ಗಾದೆ, ಒಗಟುಗಳು, ಸಂಬಂಧ ವಾಚಕಗಳು, ಸಂಶೋಧನ ಕ್ಷೇತ್ರ ಹೀಗೆ ಹಲವು ವೈವಿದ್ಯತೆಯನ್ನು ಕಾಣಬಹುದಾಗಿದೆ ಎಂದು ಪ್ರೊ.ಅಶೋಕ ಸಂಗಪ್ಪ ಆಲೂರ ಅವರು ನುಡಿದರು.
ಅರೆಭಾಷೆಯನ್ನು ಉಳಿಸಿ ಬೆಳೆಸುವುದು ಇಲ್ಲಿನ ಜನರ ಬಹುದೊಡ್ಡ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಮಕ್ಕಳಿಗೆ ಕನ್ನಡದ ಜೊತೆಗೆ ಸ್ಥಳೀಯ ಭಾಷೆಗೆ ಒತ್ತು ನೀಡಿ, ಭಾಷಾ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸಬೇಕು ಎಂದರು.
ಮಾತೃ ಭಾಷೆ ಜೊತೆಗೆ ಸಂಘಟಿತ ಉಪ ಭಾಷೆಯನ್ನು ಬೆಳೆಸಬೇಕು. ನಾಡಿನ ಭಾಷೆ ಜೊತೆಗೆ ಇತರೆ ಭಾಷೆಯನ್ನು ಕಲಿಸಬೇಕು. ಅರೆಭಾಷೆಯನ್ನು ಶ್ರೀಮಂತಗೊಳಿಸಬೇಕು ಎಂದರು.
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಶಾಲಾ-ಕಾಲೇಜುಗಳಲ್ಲಿ ಅರೆಭಾಷೆ ಅಭಿವೃದ್ಧಿ ಮತ್ತು ಬೆಳವಣಿಗೆ ಸಂಬಂಧ ‘ಅರೆಭಾಷೆ ಸಂಘ’ಗಳನ್ನು ರಚಿಸಲಾಗಿದ್ದು, ಕೊಡಗು ಜಿಲ್ಲೆಯಲ್ಲಿಯೂ ಸಹ ಕಾಲೇಜುಗಳಲ್ಲಿ ಅರೆಭಾಷೆ ಸಂಘಗಳ ರಚನೆಗೆ ಸಹಕರಿಸುವಂತೆ ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಅವರಲ್ಲಿ ಮನವಿ ಮಾಡಿದರು.
ಸುಳ್ಯ ತಾಲ್ಲೂಕಿನಲ್ಲಿ ಪ್ರತಿಯೊಬ್ಬರೂ ಅರೆಭಾಷೆ ಮಾತನಾಡುತ್ತಿದ್ದು, ಜಾತಿ, ಧರ್ಮ ಮೀರಿ ಬೆಳೆದಿದೆ ಎಂದು ಅಧ್ಯಕ್ಷರು ನುಡಿದರು.
ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕøತರು ಮತ್ತು ಸಮಾಜ ಸೇವಕರಾದ ಚಂಡೀರ ಕೆ.ಬಸಪ್ಪ ಅವರು ಮಾತನಾಡಿ ಅರೆಭಾಷೆ ಸಂಸ್ಕøತಿ, ಸಾಹಿತ್ಯ, ಜಾನಪದ ಕಲೆಗಳನ್ನು ಉಳಿಸಬೇಕು. ಅರೆಭಾಷೆಯನ್ನು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರ್ಪಡೆಗೆ ಪ್ರಯತ್ನಿಸಬೇಕು ಎಂದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮೆ| ರಾಘವ ಬಿ. ಅವರು ಅರೆಭಾಷೆ ಸಂಸ್ಕøತಿ, ಆಚಾರ-ವಿಚಾರಗಳು ಉಳಿಯಬೇಕು. ಅರೆಭಾಷೆಯ ಉತ್ತಮ ಪುಸ್ತಕಗಳು ಇತರ ಭಾಷೆಗಳಿಗೆ ಅನುವಾದ ಆಗಬೇಕು. ಇದರಿಂದ ಭಾಷಾ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಅವರು ಸಲಹೆ ಮಾಡಿದರು.
ಬರಹಗಾರರಾದ ಸುಶೀಲಾ ಕುಶಾಲಪ್ಪ ಅಂಬೆಕಲ್ಲು ಅವರು ಮಾತನಾಡಿ ಅರೆಭಾಷೆ ಮಾತನಾಡುವ ನೆಲ, ಸಂಸ್ಕøತಿ ಮತ್ತು ಗುರುತನ್ನು ಕಾಪಾಡಿಕೊಂಡು ಹೋಗಬೇಕು. ಭಾಷೆಯು ಕೇವಲ ಮಾತನಾಡಲು ಇರುವ ಒಂದು ಸಾಧನ ಮಾತ್ರವಲ್ಲ, ಇದು ಒಂದು ರೀತಿ ಜೀವನ ಪರಂಪರಾ ಶೈಲಿ ಇದ್ದಂತೆ ಎಂದು ಅವರು ಪ್ರತಿಪಾದಿಸಿದರು.
ಅರೆಭಾಷೆ ಪಾರಂಪರಿಕ ಜ್ಞಾನದ ಜಾನಪದ ಕಲೆ ಹಾಡುಗಳನ್ನು ಸಂರಕ್ಷಿಸಬೇಕಿದೆ. ಹಬ್ಬ ಹರಿದಿನಗಳು, ಮದುವೆಗಳಲ್ಲಿ ಹೇಳುವ ಜಾನಪದ ಪದಗಳು, ಸೋಬಾನೆ ಪದಗಳು, ಅರೆಭಾಷೆ ಸಂಸ್ಕøತಿ ಔನತ್ಯಕ್ಕೆ ಕೊಂಡ್ಯೊಯುತ್ತವೆ ಎಂದು ವಿವರಿಸಿದರು.
ಮೈಸೂರು ಯುವರಾಜ ಕಾಲೇಜು ಮತ್ತು ಮಹಾರಾಜ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಚೆರಿಯಮನೆ ಬೆಳ್ಯಪ್ಪ ಡಾ.ರಾಮಚಂದ್ರ ಅವರು ಅರೆಭಾಸಿಕರ ಹಬ್ಬ ಮತ್ತು ಸಾಂಸ್ಕøತಿಕ ಮಹತ್ವ ಕುರಿತು ಮಾತನಾಡಿ ಅರೆಭಾಷಿಕರಲ್ಲಿ ಹರಿಸೇವೆಯು ಮೂಲ ಸಂಸ್ಕøತಿಯ ಹಬ್ಬವಾಗಿದೆ. ಗೌಡ ಸಂಸ್ಕøತಿಯ ಪ್ರಾಚೀನತೆ, ಪ್ರಕೃತಿಯ ಆರಾಧಕರಾಗಿದ್ದಾರೆ, ಉಳಿದಂತೆ ಎಲ್ಲಾ ಹಬ್ಬಗಳನ್ನು ಸಾರ್ವತ್ರಿಕವಾಗಿ ಆಚರಿಸುತ್ತಾರೆ ಎಂದರು.
ಮೈಸೂರು ಶೇಷಾದ್ರಿಪುರಂ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಲಾವಣ್ಯ ಸಿ.ಪಿ. ಅವರು ಅರೆಭಾಸೆ ನೆಲೆ ಮತ್ತು ಅದರ ಬೆಳವಣಿಗೆ ಸಾಧ್ಯತೆ ಕುರಿತು ಮಾತನಾಡಿ ಅರೆಭಾಷೆ ಪದ್ಧತಿ, ಜಂಬರ, ಸೋಬಾನೆ ಪದ್ಯ, ಜಾನಪದ ಹಾಡು ಹೀಗೆ ಆಚಾರ-ವಿಚಾರಗಳು, ಆರಾಧನೆ, ನಂಬಿಕೆಗಳು ಅರೆಭಾಷೆಗೆ ಒಂದು ರೀತಿ ಬೆನ್ನುಲುಬು ಇದ್ದಂತೆ ಎಂದರು.
‘ಭಾಷೆ ಇಲ್ಲದಿದ್ದರೆ ಅಸ್ತಿತ್ವವೇ ಇರುವುದಿಲ್ಲ. ಆ ನಿಟ್ಟಿನಲ್ಲಿ ಅರೆಭಾಷೆಯು ಒಂದು ಗುರುತನ್ನು ನೀಡಿದೆ. ಆ ನಿಟ್ಟಿನಲ್ಲಿ, ಅರೆಭಾಷೆ ಬೆಳವಣಿಗೆಗೆ ‘ಡಿಜಿಟಲ್ ಸ್ಪರ್ಶ’ ನೀಡಬೇಕಿದೆ. ಸಾಮಾಜಿಕ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ. ಇದರಿಂದ ಅರೆಭಾಷೆಯನ್ನು ಎಲ್ಲೆಡೆ ಪಸರಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.’
ಕಾರ್ಯಕ್ರಮದ ಸದಸ್ಯ ಸಂಚಾಲಕರಾದ ಗೋಪಾಲ್ ಪೇರಾಜೆ ಅವರು ಮಾತನಾಡಿ ಅರೆಭಾಷೆಯ ಐತಿಹಾಸಿಕ ಹಿನ್ನೆಲೆ, ಭಾಷೆ ಉಳಿಸಿ ಬೆಳೆಸುವಲ್ಲಿ ಪದಗಳ ರಚನೆ, ಸಂರಕ್ಷಣೆ, ಜತೆಗೆ ಅರೆಭಾಷೆ ಮಾತನಾಡುವ ಎಲ್ಲಾ ಜನರನ್ನು ಒಟ್ಟುಗೂಡಿಸಿ, ಭಾಷೆ ಅಭಿವೃದ್ಧಿಗೆ ಅಕಾಡೆಮಿ ಶ್ರಮಿಸುತ್ತಿದೆ ಎಂದರು.
ಪದಕಟ್ಟು ಕಾರ್ಯಾಗಾರದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಸಂಜೀವ ಕುದ್ಪಾಜೆ, ಸಾಹಿತಿ ಹಾಗೂ ಕವಯತ್ರಿ ಲೀಲಾವತಿ ದಾಮೋದರ ಕುಂದಲ್ಪಾಡಿ ಅವರು ಪಾಲ್ಗೊಂಡಿದ್ದರು.
ಅಕಾಡೆಮಿ ಸದಸ್ಯರಾದ ಸೂದನ ಎಸ್.ಈರಪ್ಪ, ಲತಾ ಪ್ರಸಾದ್ ಕುದ್ಪಾಜೆ, ಕುದ್ಪಾಜೆ ಕೆ.ಪ್ರಕಾಶ್, ವಿನೋದ್ ಮೂಡಗದ್ದೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ, ರಿಜಿಸ್ಟ್ರಾರ್ ಚಿನ್ನಸ್ವಾಮಿ ಇತರರು ಇದ್ದರು.
ಅಕಾಡೆಮಿ ಸದಸ್ಯರಾದ ಪೂಳಕಂಡ ಸಂದೀಪ್ ಸ್ವಾಗತಿಸಿದರು. ವರ್ಷ ಕೋಡಿಮನೆ ನಿರೂಪಿಸಿದರು. ಸಪ್ನ, ಚೊಂದಮ್ಮ, ಲಿಖಿತಾ ನಾಡಗೀತೆ ಹಾಡಿದರು, ಪೊನ್ನಚ್ಚನ ಮೋಹನ್ ವಂದಿಸಿದರು.