ನೆಲ ಮಾರಾಟ ಮಾಡದೆ ಜನಸಂಖ್ಯೆ ವೃದ್ಧಿಗೆ ಗಂಭೀರ ಚಿಂತನೆ ಅಗತ್ಯ:ಎಂಎಲ್‌ಸಿ ಸುಜಾ ಕುಶಾಲಪ್ಪ

ನೆಲ ಮಾರಾಟ ಮಾಡದೆ ಜನಸಂಖ್ಯೆ ವೃದ್ಧಿಗೆ ಗಂಭೀರ ಚಿಂತನೆ ಅಗತ್ಯ:ಎಂಎಲ್‌ಸಿ ಸುಜಾ ಕುಶಾಲಪ್ಪ

ಪೊನ್ನಂಪೇಟೆ:ಅತೀ ಸೂಕ್ಷ್ಮ ಹಾಗೂ ಅಲ್ಪಸಂಖ್ಯಾತ ಕೊಡವ ಜನಾಂಗದ ಭಾಷೆ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೊಡವ ಸಮಾಜ, ಸಂಘ ಸಂಸ್ಥೆಗಳು, ಅಕಾಡೆಮಿ ಪ್ರಯತ್ನದ ನಡುವೆ ಬೆಳವಣಿಗೆ ಕಾಣುತ್ತಿದೆ, ಆದರೆ ಇದರ ನಡುವೆ ಕೊಡವರು ತಮ್ಮ ಮಣ್ಣನ್ನು ಮಾರಾಟ ಮಾಡದೇ ಉಳಿಸಿಕೊಳ್ಳಬೇಕು ಹಾಗೂ ಜನಸಂಖ್ಯೆ ವೃದ್ದಿಗೆ ಗಂಭೀರವಾದ ಚಿಂತನೆ ಅಗತ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

 ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆದ ಒಂಬತ್ತನೇ ವರ್ಷದ ಪತ್ತಲೋದಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 

ಕೊಡವ ಸಮಾಜಗಳು ಸಂಘ ಸಂಸ್ಥೆ ಕೊಡವರ ಹಿತಾಸಕ್ತಿ ಕಾಪಾಡಲು ಕೆಲಸ ಮಾಡುತ್ತಿವೆ ಆದರೆ ಸಣ್ಣ ಸಣ್ಣ ಭಿನ್ನಾಭಿಪ್ರಾಯ ಬಂದರೆ ಅದನ್ನು ವೇದಿಕೆಯಲ್ಲಿ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕೇ ಹೊರತು, ಯಾವುದೇ ರೀತಿಯಲ್ಲಿ ಸಂಘರ್ಷದ ಹಾದಿ ತುಳಿಯಬಾರದು ಎಂದು ಕಿವಿಮಾತು ಹೇಳಿದ ಅವರು ಈಚೆಗೆ ಅಖಿಲ ಕೊಡವ ಸಮಾಜದ ಸಭೆಯಲ್ಲಿ ಉಂಟಾದ ಅಹಿತಕರ ಘಟನೆಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಬೇಸರ ವ್ಯಕ್ತಪಡಿಸಿದರು.

 ಅಖಿಲ ಕೊಡವ ಸಮಾಜ ಹಾಗೂ 35 ಕೊಡವ ಸಮಾಜಗಳು ಸಂಘ ಸಂಸ್ಥೆಗಳು ಲೇಖಕರು ಅಭಿಪ್ರಾಯದೊಂದಿಗೆ ಮತ್ತು ನಮ್ಮ ಜನಾಂಗದ ಇತಿಹಾಸದ ದಾಖಲೆಗಳನ್ನು ಅಧ್ಯಯನ ಮಾಡಿ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೇ ಹೊರತು ಸಂಘರ್ಷದ ಹಾದಿ ಸರಿಯಲ್ಲ ಎಂದ ಅವರು ಇನ್ನು ಮುಂದೆ ಇಂತಹ ಘಟನೆ ನಡೆಯಬಾರದು ಎಂದು ಕಿವಿಮಾತು ಹೇಳಿದ ಅವರು ಟಿ. ಶೆಟ್ಟಿಗೇರಿ ಕೊಡವ ಸಮಾಜ ಕಳೆದ 9 ವರ್ಷದಿಂದ ಹಮ್ಮಿಕೊಂಡಿರುವ ಪತ್ತಾಲೋದಿ ಕಾರ್ಯಕ್ರಮ ಜನಪ್ರಿಯವಾಗಿದೆ. ಕೊಡವ ಸಂಸ್ಕೃತಿ ರಕ್ಷಣೆ, ಜನಾಂಗದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಕೊಡವ ಸಮಾಜ ಸಂಘ ಸಂಸ್ಥೆ ಕೆಲಸ ಮಾಡಬೇಕು ಎಂದರು.

 ಮುಖ್ಯ ಅತಿಥಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ಗುಡ್ಡಗಾಡು ಪ್ರದೇಶದಲ್ಲಿ ತಮ್ಮ ನಾಗರಿಕತೆ ಹಾಗೂ ಬದುಕನ್ನು ಕಂಡುಕೊಂಡ ಒಂದು ವಿಶೇಷ ಜನಾಂಗ ಕೊಡವರಾಗಿದ್ದು, ಇತರ ಜನಾಂಗ ಮತ್ತು ಧರ್ಮಕ್ಕಿಂತ ತಮ್ಮ ಸಂಸ್ಕೃತಿ, ಆಚರಣೆಗಳು ವಿಭಿನ್ನವಾಗಿರುವ ಪರಂಪರೆಯನ್ನು ಹೊಂದಿರುವ ಜನಾಂಗವಾಗಿದೆ. ಪ್ರಮುಖ ಹಬ್ಬಗಳಾದ ಕೈಲ್ ಪೋಳ್ದ್ ನಲ್ಲಿ ನಾವು ಆಯುಧ ಪೂಜೆ ಮಾಡುತ್ತೇವೆ,ಕಾವೇರಿ ಚಂಗ್ರಾಂದಿ ಹಬ್ಬದಲ್ಲಿ 'ತೋಟ ಗದ್ದೆ ಜಾನುವಾರು ಇತ್ಯಾದಿ ವಿಚಾರದಲ್ಲಿ ಏನೇ ಹಗೆತನ ಜಗಳ ಇದ್ದರೂ ಕಾವೇರಿ ಮಾತೆಯನ್ನು ಪೂಜಿಸಿ ಹತ್ತು ದಿನ ಪತ್ತಲೋದಿವರೆಗೆ ನೆರೆ ಕರೆ ಊರಿನವರು ಮನೆಗೆ ಮನೆಗೆ ಹೋಗಿ ಕಾಲು ಹಿಡಿಯುವ ಸಂಸ್ಕೃತಿಯೊಂದಿಗೆ ಹಿರಿಯರ ಆಶೀರ್ವಾದ ಪಡೆಯುವ ಮೂಲಕ ಅಲ್ಲಿಗೆ ಹಿಂದಿನ ಎಲ್ಲಾ ಜಗಳ ಭಿನ್ನಾಭಿಪ್ರಾಯ ಮುಗಿಸಿಕೊಳ್ಳುತ್ತೇವೆ. ಹಾಗೆ ಪುತ್ತರಿ ಹಬ್ಬದಲ್ಲಿ ಹೊಸ ಬೆಳೆಯನ್ನು ಮನೆಗೆ ಸ್ವಾಗತಿಸುವ ಸುಗ್ಗಿ ಹಬ್ಬವಾಗಿದೆ ಎಂದು ಹಬ್ಬದ ವಿಶೇಷತೆಗಳ ಬಗ್ಗೆ ವಿವರಿಸಿದ ಅವರು ವಿಶ್ವ ಮತ್ತು ದೇಶದಲ್ಲಿ ಅತಿ ಸೂಕ್ಷ್ಮ ಅಲ್ಪಸಂಖ್ಯಾತ ಜನಾಂಗವಾಗಿರುವ ಕೊಡವರು ತಮ್ಮ ಸಂಸ್ಕೃತಿ ಆಚಾರ ವಿಚಾರ ಮೂಲಕ ಗುರುತಿಸಿಕೊಂಡಿದ್ದೇವೆ. ಆದ್ದರಿಂದ ಈ ಮೂಲಕ ಜನಾಂಗದ ವಿಭಿನ್ನತೆ ಯನ್ನು ಸಂರಕ್ಷಿಸಲು ದೊರೆಯುವ ಯಾವುದೇ ಅವಕಾಶವನ್ನು ಬಳಸಿಕೊಳ್ಳಬೇಕು. ಇಂದಿನ ಜಾಗತೀಕರಣ ಆಧುನಿಕರಣ ಹಾಗೂ ಬಹುಸಂಖ್ಯಾತ ಸಮುದಾಯದ ಸ್ಪರ್ಧೆ ನಡುವೆ ತಮ್ಮ ವಿಭಿನ್ನತೆ ಕಾಪಾಡಿಕೊಂಡಾಗ ಮಾತ್ರ ಅಭಿವೃದ್ಧಿ, ಸಂರಕ್ಷಣೆ ಸಾಧ್ಯ. ಅತಿ ಸೂಕ್ಷ್ಮ ಕೊಡವ ಜನಾಂಗದ ಸಂರಕ್ಷಣೆಗೆ ಯಾವುದೇ ಸಂದರ್ಭ ಅವಕಾಶ ಸಿಕ್ಕಿದರೆ ರಾಜಕೀಯ ವಿಚಾರ ಬದಿಗಿಟ್ಟು ಅ ಜನಾಂಗವನ್ನು ಸಂರಕ್ಷಿಸಲು ಇರುವ ಅವಕಾಶವನ್ನು ಬಳಸಿಕೊಳ್ಳುವುದು ಬುದ್ಧಿವಂತಿಕೆ ಎಂದು ಹೇಳಿದರು.

  ಅಧ್ಯಕ್ಷತೆ ವಹಿಸಿ ಮಾತನಾಡಿದ ಟಿ. ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೈಬುಲೀರ ಹರೀಶ್ ಅಪ್ಪಯ್ಯ ಅವರು 10 ದಿನದ ಕಾರ್ಯಕ್ರಮ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ ನಿರಾಯ ಸವಾಗಿ ಆಗಿದೆ. ಪ್ರತಿ ವರ್ಷ ಸಾಂಸ್ಕೃತಿಕ ಕಾರ್ಯಕ್ರಮ ಹೊಣೆಗಾರಿಕೆ ವಹಿಸಿಕೊಂಡು ಸಾಂಸ್ಕೃತಿಕ ಸಮಿತಿ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ, ಸಮಾಜದ ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ, ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಮುಂದಿನ ವರ್ಷ 10ನೇ ವರ್ಷದ ಕಾರ್ಯಕ್ರಮವಿದ್ದು ಕೊಡವಾಮೆಗೆ ಉತ್ತಮ ಸಂದೇಶ ನೀಡುವ ಕಾರ್ಯಕ್ರಮ ನೀಡುವಂತೆ ಎಲ್ಲರಲ್ಲಿ ಕೋರಿದರು. 10 ದಿನದ ಕಾರ್ಯಕ್ರಮದಲ್ಲಿ ಪ್ರತಿದಿನ ನೂರಾರು ಜನರು ಪಾಲ್ಗೊಂಡಿದ್ದು ಅವರಿಗೆಲ್ಲರಿಗೂ ಊಟದ ವ್ಯವಸ್ಥೆ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.

  ಉಪಾಧ್ಯಕ್ಷ ಮಚ್ಚಮಾಡ ಸುಮಂತ್ ಅವರು ಮಾತನಾಡಿ 1984ರಲ್ಲಿ ತುಂಬಾ ಆರ್ಥಿಕ ಕಷ್ಟವಿದ್ದ ಕಾಲದಲ್ಲಿ ನಮ್ಮ ಹಿರಿಯರು ಈ ಕೊಡವ ಸಮಾಜವನ್ನು ಸ್ಥಾಪನೆ ಮಾಡಲು ಮುಂದಾದರು. ನಂತರ ನ್ಯಾಯ ಪೀಠವನ್ನು ಸಹ ಸ್ಥಾಪನೆ ಮಾಡಲಾಯಿತು. ನಂತರದಲ್ಲಿ ಬಹಳಷ್ಟು ಆರ್ಥಿಕ ಸಂಕಷ್ಟ ದೊಂದಿಗೆ ಬಹಳಷ್ಟು ದಾನಿಗಳ ನೆರವಿನಿಂದ ಹಿರಿಯರ ಶ್ರಮ ಸೇವೆ ಯೊಂದಿಗೆ ಟಿ. ಶೆಟ್ಟಿಗೇರಿ ಕೊಡವ ಸಮಾಜದ ಬೆಳೆದು ಬಂದ ದಾರಿಯನ್ನು ಅವರು ಸ್ಮರಿಸಿದರು.

ಸಮಾಜದ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ಅವರು ಮಾತನಾಡಿ ಸ್ಥಳೀಯವಾಗಿ ಗೌರಿ ಗಣೇಶ ಹಬ್ಬಗಳನ್ನು ಬ

ಕೊಡವರ ಆರ್ಥಿಕ ಸಂಪನ್ಮೂಲ ಹಾಗೂ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸುತ್ತಾ ಬರಲಾಗುತ್ತಿತ್ತು. ಆದರೆ ನಮ್ಮ ಮಣ್ಣಿಗೆ ಸಂಬಂಧಪಟ್ಟ ಹಬ್ಬಗಳನ್ನು ನಾವು ಆಚರಣೆ ಮಾಡದೆ ಕಳೆ ಗುಂದುತ್ತಿದ್ದವು, ಈ ಹಿನ್ನೆಲೆಯಲ್ಲಿ ಕೊಡವ ಭಾಷೆ ಸಂಸ್ಕೃತಿ ಆಚರಣೆಗಳಿಗೆ ಮತ್ತು ಕಲೆ ಜನಪದಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಚಂಗ್ರಾಂದಿ ಪತ್ತಲೋಧಿ ಎಂಬ ಕಾರ್ಯಕ್ರಮವನ್ನು ಒಂಬತ್ತು ವರ್ಷಗಳ ಹಿಂದೆ ಆರಂಭ ಮಾಡಿ ಎಲ್ಲರ ಸಹಕಾರದಿಂದ ಇದೀಗ ಯಶಸ್ವಿಯಾಗಿ ನಡೆಯುತ್ತಿದೆ.ಆರಂಭದ ದಿನಗಳಲ್ಲಿ ನಮಗೆ 10 ದಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ತುಂಬಾ ಕಷ್ಟವಾಗುತ್ತಿತ್ತು, ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ತಂಡಗಳು ಸಿಗುತ್ತಿರಲಿಲ್ಲ. ಆದರೆ ಈಗ ಎಲ್ಲಾ ತಂಡಗಳಿಗೆ ವೇದಿಕೆ ನೀಡಲು ಸಾಧ್ಯವಾಗದಷ್ಟು ತಂಡಗಳು ಬರುತ್ತವೆ, ಈ ಮೂಲಕ ಈ ಕಾರ್ಯಕ್ರಮ ಜನಪ್ರಿಯತೆಗಳಿಸಿದೆ ಎಂದರು.

ಸಂಭ್ರಮ ಮಹಿಳಾ ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ ತೀತಿರ ಲೀನಾ ಸತೀಶ್ ಅವರು ಮಾತನಾಡಿ ಕೊಡವ ಹಬ್ಬ- ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ತಾಯಿ ತಂದೆ ಕಳಿಸಬೇಕು. ಇಂತಹ ಕಾರ್ಯಕ್ರಮಕ್ಕೆ ಮಕ್ಕಳನ್ನು ಕರೆತಂದಾಗ ಅವರಿಗೆ ಅಭಿಮಾನ ಮೂಡುತ್ತದೆ ಎಂದು ಹೇಳಿದರು

ವೇದಿಕೆಯಲ್ಲಿ ಟಿ. ಶೆಟ್ಟಿಗೇರಿ ರೂಟ್ಸ್ ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕಿ ನೆಲ್ಲೀರ ಪೂರ್ಣಿಮಾ, ಪೆರುಮಾಳೇಶ್ವರ ಆಟೋ ಮಾಲೀಕ ಮತ್ತು ಚಾಲಕರ ಸಂಘದ ಅಧ್ಯಕ್ಷ ಚೊಟ್ಟೆಯಂಡ ಮಾಡ ಪ್ರವೀಣ್ ಮೇದಪ್ಪ, ಸಂಭ್ರಮ ಮಹಿಳಾ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಸ್ಥೆ ಕಾರ್ಯದರ್ಶಿ ತೀತಿರ ಲೀನಾ ಸತೀಶ್, ಟಿ.ಶೆಟ್ಟಿಗೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟ ಅಧ್ಯಕ್ಷ ಕೋಟ್ರಮಾಡ ರೇಷ್ಮಾ ಕಾರ್ಯಪ್ಪ,ಕೊಡವ  ಎಳ್ತ್ ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ, ಕೊಡವ ಸಮಾಜದ ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ, ಜಂಟಿ ಕಾರ್ಯದರ್ಶಿ ಆಂಡಮಾಡ ಸತೀಶ್ ವಿಶ್ವನಾಥ್, ಖಜಾಂಚಿ ಚಂಗುಲಂಡ ಸತೀಶ್, ಕ್ರೀಡಾ ಸಂಚಾಲಕ ತಡಿಯಂಗಡ ಶಮ್ಮಿ ಸುಬ್ಬಯ್ಯ, ನಿರ್ದೇಶಕರುಗಳಾದ ಚಂಗುಲಂಡ ಅಶ್ವಿನಿ ಸತೀಶ್, ಮುಕ್ಕಾಟಿರ ಸಂದೀಪ್, ಕರ್ನಂಡ ರೂಪದೇವಯ್ಯ, ತೀತಿರ ಅನಿತ ಸುಬ್ಬಯ್ಯ, ಬಾದುಮಂಡ ವಿಷ್ಣು ಕಾರ್ಯಪ್ಪ, ಬೊಳ್ಳೇರ ಅಪ್ಪುಟ ಪೊನ್ನಪ್ಪ ಹಾಜರಿದ್ದರು. 

ಜನ ಮೆಚ್ಚುಗೆ ಪಡದ ಸಾಂಸ್ಕೃತಿಕ ಕಾರ್ಯಕ್ರಮ :ಟಿ. ಶೆಟ್ಟಿಗೇರಿಯ ರೂಟ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜನರ ಮನಸೂರೆಗೊಂಡಿತು ವಿಭಿನ್ನವಾಗಿ ಪ್ರದರ್ಶನ ಕಂಡ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟದಿಂದ ಉಂಟಾಗುವ ದುಷ್ಪರಿಣಾಮ ಬಗ್ಗೆ ಸಂದೇಶ ನೀಡುವ ನಾಟಕ ಗಮನ ಸೆಳೆಯಿತು ಇದರೊಂದಿಗೆ ಕೊಡವ ಸಾಂಸ್ಕೃತಿಕ ಹಿರಿಮೆಯನ್ನು ಸಾರುವ ಹಾಗೂ ಪರಿಸರದ ಮಹತ್ವದ ಬಗ್ಗೆ ವಿವಿಧ ನೃತ್ಯ ಕಾರ್ಯಕ್ರಮ ಗಮನ ಸೆಳೆಯಿತು.