Kodagu

ಪಡಿತರ ಅಕ್ಕಿ ಪಡೆಯಲು ಸರ್ವರ್ ಸಮಸ್ಯೆ: ಶಾಶ್ವತ ಪರಿಹಾರಕ್ಕೆ ಹನೀಫ್ ಎಂ.ಎಂ. ಆಗ್ರಹ

admincoorgdaily

ಪಡಿತರ ಅಕ್ಕಿ ಪಡೆಯಲು ಸರ್ವರ್ ಸಮಸ್ಯೆ: ಶಾಶ್ವತ ಪರಿಹಾರಕ್ಕೆ ಹನೀಫ್ ಎಂ.ಎಂ. ಆಗ್ರಹ

ಕೊಡ್ಲಿಪೇಟೆ: ಪಡಿತರ  ಪಡೆಯಲು ಸರ್ವರ್ ಸಮಸ್ಯೆ ಎದುರಾಗುತ್ತಿದ್ದು, ಜನಸಾಮಾನ್ಯರು ಹಾಗೂ ಕೂಲಿ ಕಾರ್ಮಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಕೊಡ್ಲಿಪೇಟೆ ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹನೀಫ್ ಎಂ.ಎಂ. ಅವರು ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

 ತಿಂಗಳು ಕೊನೆಯಾಗುತ್ತಾ ಬಂದಿದ್ದರೂ ಪಡಿತರ ಅಕ್ಕಿ ಪಡೆಯಲು ಅರ್ಹರಾಗಿರುವ ಅರ್ಧದಷ್ಟು ಜನರಿಗೆ ಇನ್ನೂ ಪಡಿತರ ಚೀಟಿ ದೊರಕಿಲ್ಲ. ಸರ್ವರ್ ಸಮಸ್ಯೆಯಿಂದಾಗಿ ಚೀಟಿ ಪಡೆಯುವ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಇದರಿಂದ ಬಡ ಹಾಗೂ ಕೂಲಿ ಕಾರ್ಮಿಕರು ಹೆಚ್ಚಿನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಲಿ ಕಾರ್ಮಿಕರು ಪ್ರತಿನಿತ್ಯ ಕೆಲಸಕ್ಕೆ ತೆರಳಿ ಜೀವನ ನಿರ್ವಹಿಸಬೇಕಾದ ಪರಿಸ್ಥಿತಿಯಲ್ಲಿದ್ದಾರೆ.

ಆದರೆ ಪಡಿತರ ಚೀಟಿ ಪಡೆಯಲು ದಿನನಿತ್ಯ ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ, ಹೆಬ್ಬೆಟ್ಟು ನೀಡಿ ಚೀಟಿ ಪಡೆಯಲು ಗಂಟೆಗಟ್ಟಲೆ ಕಾಯಬೇಕಾಗಿದೆ. ಸರ್ವರ್ ಕೈಕೊಟ್ಟ ಸಂದರ್ಭದಲ್ಲಿ ಕೆಲಸವೂ ಆಗದೆ, ಕೂಲಿಯೂ ತಪ್ಪುವಂತಾಗಿದೆ ಎಂದರು, ಪಡಿತರ ಚೀಟಿ ಪಡೆಯಲು ಹಲವು ಬಾರಿ ಕಚೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು,ವಿಶೇಷವಾಗಿ ಬಡವರು ಮತ್ತು ಕೂಲಿ ಕಾರ್ಮಿಕರಿಗೆ ಇದರಿಂದ ಕಷ್ಟವಾಗುತ್ತದೆ. ಸರ್ಕಾರದ ಪಡಿತರ ಯೋಜನೆಯ ಪ್ರಯೋಜನ ಅರ್ಹ ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ದೊರೆಯಬೇಕಾದರೆ ಸರ್ವರ್ ಸಮಸ್ಯೆಯನ್ನು ತಕ್ಷಣ ಪರಿಹರಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ತಾಂತ್ರಿಕ ಸಮಸ್ಯೆಯನ್ನು ಪರಿಶೀಲಿಸಿ ಸರ್ವರ್ ವ್ಯವಸ್ಥೆಯನ್ನು ಸಮರ್ಪಕಗೊಳಿಸುವುದರ ಜೊತೆಗೆ, ಬಾಕಿ ಇರುವ ಪಡಿತರ ಚೀಟಿದಾರರಿಗೆ ಶೀಘ್ರವಾಗಿ ಅಕ್ಕಿ ವಿತರಿಸಲು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಅನ್ನ ಬಾಗ್ಯದ ಅಕ್ಕಿ ಪಡೆಯಲು ಇಂತಹ ಸಮಸ್ಯೆ ಮರುಕಳಿಸದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಎಂದು ಹನೀಫ್ ಎಂ.ಎಂ. ಅವರು ಆಗ್ರಹಿಸಿದ್ದಾರೆ.