ಸೇವಾ ಭಾರತಿ ಟ್ರಸ್ಟ್‌ನಿಂದ ಕೂಡ್ಲೂರು ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

ಸೇವಾ ಭಾರತಿ ಟ್ರಸ್ಟ್‌ನಿಂದ ಕೂಡ್ಲೂರು ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ  ಉಚಿತ ನೋಟ್ ಪುಸ್ತಕ ವಿತರಣೆ

ಕುಶಾಲನಗರ :ಕುಶಾಲನಗರ ತಾಲ್ಲೂಕಿನ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಸಹಕಾರದೊಂದಿಗೆ ಸಮುದಾಯದ ಸಹಭಾಗಿತ್ವದ ಯೋಜನೆಯಡಿ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.

ಮಕ್ಕಳಿಗೆ ಪುಸ್ತಕ ವಿತರಿಸಿ ಮಾತನಾಡಿದ ಸೇವಾ ಭಾರತಿ ಟ್ರಸ್ಟ್‌ ನ ಸಂಯೋಜಕ ಡಾ‌ ಅಚ್ಯುತರಾವ್, ತಮ್ಮ ಸಂಸ್ಥೆಯ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಲ್ಲಿ ಕಲಿಯುವ ಯತ್ನ ಮತ್ತು ಕಲಿಸುವ ಯತ್ನ ಶೈಕ್ಷಣಿಕ ಕಲಿಕಾ ಆಂದೋಲನದಡಿ ಪ್ರತಿ ವರ್ಷ 4 ಲಕ್ಷದಷ್ಟು ಉಚಿತ ನೋಟ್ ಪುಸ್ತಕಗಳನ್ನು ನೀಡಲಾಗುತ್ತಿದೆ ಎಂದರು. ವಿದ್ಯಾರ್ಥಿಗಳಲ್ಲಿ ಕಲಿಕಾ ಜಾಗೃತಿ ಉಂಟು ಮಾಡಿ ಅವರ ಕಲಿಕೆಗೆ ಅಗತ್ಯವಾದ ಕೌಶಲ್ಯ ಮತ್ತು ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಕಳೆದ 25 ವರ್ಷಗಳಿಂದ ನಡೆಸುತ್ತಾ ಬರಲಾಗುತ್ತಿದೆ ಎಂದರು.

ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಒದಗಿಸಲು ಸಹಕರಿಸಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಸೇವಾ ಭಾರತಿ ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸುವ ಮೂಲಕ ಈ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯವಾದುದು ಎಂದರು. ಮಕ್ಕಳಿಗೆ ನೋಟ್ ಪುಸ್ತಕಗಳು ಸೇರಿದಂತೆ ಲೇಖನ ಸಾಮಾಗ್ರಿಗಳು ಹಾಗೂ ವಿದ್ಯಾರ್ಥಿಗಳು ತಮ್ಮ ಶಾಲೆಯಲ್ಲಿ ಗುರುಗಳು ಕಲಿಸುವ ಪಾಠ- ಪ್ರವಚನಗಳನ್ನು ಉತ್ತಮವಾಗಿ ಅಧ್ಯಯನ ಮಾಡುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಶಾಲಾ ಮುಖ್ಯ ಶಿಕ್ಷಕಿ ಎಚ್.ಎಸ್.ಸುಜಾತ, ಸೇವಾ ಭಾರತಿ ಟ್ರಸ್ಟ್ ನವರು ಸರ್ಕಾರಿ ಶಾಲಾ ಮಕ್ಕಳಿಗೆ ಈ ಸೌಲಭ್ಯ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಟ್ರಸ್ಟ್ ನ ಪ್ರಮುಖರಾದ ಕೃಷ್ಣಕುಮಾರ್ ಗುರೂಜಿ, ವಿದ್ಯಾರ್ಥಿಗಳಿಗೆ ಕಲಿಕೆಯ ಮಹತ್ವ ಹಾಗೂ ಉತ್ತಮ ಕಲಿಕೆಗೆ ಏಕಾಗ್ರತೆ ಬೆಳೆಸಿಕೊಳ್ಳುವ ಕುರಿತು ಮಾಹಿತಿ ನೀಡಿದರು. ಟ್ರಸ್ಟ್ ನ ಸದಸ್ಯರಾದ ವೆಂಕಟೇಶ್ ಬಾಬು, ರಾಧಾ ವೆಂಕಟೇಶ್, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಪವಿತ್ರ ಶಾಲಾ ಶಿಕ್ಷಕರಾದ ಕೆ.ಬಿ. ಗೀತಾರಾಣಿ, ಮೇರಿ ಮಾರ್ಗರೇಟ್, ಜಿ.ನಳಿನಿ, ಅತಿಥಿ ಶಿಕ್ಷಕ ಎಚ್.ಆರ್. ಹೇಮಂತ್ ಮತ್ತು ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಸೇವಾ ಭಾರತಿ ಟ್ರಸ್ಟ್ ವತಿಯಿಂದ ಮೈಸೂರಿನ ಸ್ವಯಂ ಸೇವಾ ಸಂಸ್ಥೆಗಳಾದ ನಿರಂತರ ಮಿತ್ರ ವೃಂದ, ಭೂಮಿ ಫೌಂಡೇಶನ್, ಭವಿಷ್ಯ ಚಾರಿಟೇಬಲ್ ಟ್ರಸ್ಟ್ ಹಾಗೂ ಪಿರಾಮಿಡ್ ಧ್ಯಾನ ಕೇಂದ್ರ ಕೂಡ ಜತೆಗೂಡಿ ಈ ಕಾರ್ಯದಲ್ಲಿ ತೊಡಗಿವೆ ಎಂದು ಕಾರ್ಯಕ್ರಮದ ಸಂಯೋಜಕ ಡಾ ಅಚ್ಯುತರಾವ್ ತಿಳಿಸಿದರು.