ಮಂಗಳೂರು ಮೂಲದ ಟೆಕ್ಕಿ ಶರ್ಮಿಳಾ ಹತ್ಯೆಗೂ ಮುನ್ನ ಲೈಂಗಿಕ ದೌರ್ಜನ್ಯ ಶಂಕೆ; ಎಫ್‌ಎಸ್‌ಎಲ್ ವರದಿಗೆ ಮೊರೆ ಹೋದ ಪೊಲೀಸರು

Jan 13, 2026 - 23:37
Jan 14, 2026 - 00:31
 0  1.3k
ಮಂಗಳೂರು ಮೂಲದ ಟೆಕ್ಕಿ ಶರ್ಮಿಳಾ ಹತ್ಯೆಗೂ ಮುನ್ನ ಲೈಂಗಿಕ ದೌರ್ಜನ್ಯ ಶಂಕೆ; ಎಫ್‌ಎಸ್‌ಎಲ್ ವರದಿಗೆ ಮೊರೆ ಹೋದ ಪೊಲೀಸರು
Photo credit: TV09

ಬೆಂಗಳೂರು, ಜ.12: ಮಂಗಳೂರು ಮೂಲದ ಟೆಕ್ಕಿ ಶರ್ಮಿಳಾ (34) ಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು, ಹತ್ಯೆಗೆ ಮುನ್ನ ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸತ್ಯಾಂಶ ದೃಢಪಡಿಸಲು ಎಫ್‌ಎಸ್‌ಎಲ್ ಪರೀಕ್ಷೆಗೆ ಅಗತ್ಯ ಮಾದರಿಗಳನ್ನು ಕಳುಹಿಸಲಾಗಿದೆ.

ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿ ಕೊಡಗು ಜಿಲ್ಲೆಯ ವಿರಾಜಪೇಟೆಯ ಕರ್ನಲ್ ಕುರೈ (18) ಎಂಬಾತನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಕೊಲೆ ಸೇರಿದಂತೆ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರ ತನಿಖೆ ಪ್ರಕಾರ, ಜನವರಿ 3ರ ರಾತ್ರಿ ಆರೋಪಿ ಅಪಾರ್ಟ್‌ಮೆಂಟ್‌ನ ಸ್ಲೈಡಿಂಗ್ ಕಿಟಕಿಯ ಮೂಲಕ ಶರ್ಮಿಳಾ ಮನೆಗೆ ನುಗ್ಗಿದ್ದಾನೆ. ಆ ವೇಳೆ ಶರ್ಮಿಳಾ ಒಬ್ಬರೇ ಮನೆಯಲ್ಲಿದ್ದರು. ಆರೋಪಿ ದೌರ್ಜನ್ಯಕ್ಕೆ ಯತ್ನಿಸಿದಾಗ ಶರ್ಮಿಳಾ ಪ್ರತಿರೋಧ ವ್ಯಕ್ತಪಡಿಸಿದ್ದು, ಈ ಸಂದರ್ಭದಲ್ಲಿ ನಡೆದ ಹೊಡೆದಾಟದಲ್ಲಿ ಆಕೆ ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದಾಳೆ. ಬಳಿಕ ಆಕೆಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಹತ್ಯೆಯ ನಂತರ ಸಾಕ್ಷ್ಯ ನಾಶಗೊಳಿಸುವ ಉದ್ದೇಶದಿಂದ ಕೋಣೆಗೆ ಬೆಂಕಿ ಹಚ್ಚಿ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಾರಿಯಾಗುವ ವೇಳೆ ಶರ್ಮಿಳಾಳ ಮೊಬೈಲ್ ಫೋನ್‌ನ್ನು ಕೊಂಡೊಯ್ದಿದ್ದು, ಅದೇ ಸುಳಿವಿನ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ಲೈಂಗಿಕ ದೌರ್ಜನ್ಯ ಕುರಿತು ವಿಚಾರಣೆ ನಡೆಸಿದಾಗ ಆರೋಪಿ ಸ್ಪಷ್ಟ ಉತ್ತರ ನೀಡದೆ ತಪ್ಪಿಸಿಕೊಳ್ಳುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಪ್ರಕರಣದ ಸಂಪೂರ್ಣ ಚಿತ್ರಣ ಸ್ಪಷ್ಟವಾಗಲಿದೆ.

ಆರಂಭದಲ್ಲಿ ಈ ಘಟನೆ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಬೆಂಕಿ ಅವಘಡ ಎಂದು ಶಂಕಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆ ಹಾಗೂ ತನಿಖೆಯಿಂದ ಇದು ಪೂರ್ವಯೋಜಿತ ಹತ್ಯೆ ಎಂಬುದು ಸ್ಪಷ್ಟವಾಗಿದೆ. ಒನ್ ಸೈಡ್ ಪ್ರೀತಿಯ ಹಿನ್ನೆಲೆ ಈ ಪ್ರಕರಣಕ್ಕೆ ಕಾರಣವಾಗಿರಬಹುದು ಎಂಬುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0