ಪಿಹೆಚ್‌ಡಿ ಗೈಡ್ ರಿಂದ ಲೈಂಗಿಕ ಕಿರುಕುಳ; ಪದವಿ ತಡೆದು ಸತಾಯಿಸಿದ ಆರೋಪ : 19ಕ್ಕೂ ಹೆಚ್ಚು ಮಾತ್ರೆ ಸೇವಿಸಿ ವಿದ್ಯಾರ್ಥಿನಿಯಿಂದ ಆತ್ಮಹತ್ಯೆಗೆ ಯತ್ನ

Dec 1, 2025 - 23:26
 0  717
ಪಿಹೆಚ್‌ಡಿ ಗೈಡ್ ರಿಂದ ಲೈಂಗಿಕ ಕಿರುಕುಳ;  ಪದವಿ ತಡೆದು ಸತಾಯಿಸಿದ ಆರೋಪ :   19ಕ್ಕೂ ಹೆಚ್ಚು ಮಾತ್ರೆ ಸೇವಿಸಿ ವಿದ್ಯಾರ್ಥಿನಿಯಿಂದ ಆತ್ಮಹತ್ಯೆಗೆ ಯತ್ನ
Photo credit: TV09 (ಫೋಟೋ:ಬೆಳಗಾವಿಯ ರಾಣಿ‌ ಚೆನ್ನಮ್ಮ ವಿಶ್ವವಿದ್ಯಾಲಯ)

ಬೆಳಗಾವಿ, ಡಿ. 1: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಿಹೆಚ್‌ಡಿ ವಿದ್ಯಾರ್ಥಿನಿಯೊಬ್ಬರು ಗೈಡ್ ಹಾಗೂ ವಿಶ್ವವಿದ್ಯಾಲಯದ ಅಧಿಕಾರಿಗಳಿಂದ ಸತತ ಕಿರುಕುಳಕ್ಕೆ ಒಳಗಾದ ಕಾರಣ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ.

ಗೈಡ್ ಕೆ.ಎಲ್.ಎನ್. ಮೂರ್ತಿ, ಕುಲಪತಿ ಸಿ.ಎಂ. ತ್ಯಾಗರಾಜ್ ಹಾಗೂ ರಿಜಿಸ್ಟ್ರಾರ್ ಸಂತೋಷ ಕಾಮೇಗೌಡ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.

ವಿದ್ಯಾರ್ಥಿನಿ ಆರು ತಿಂಗಳ ಹಿಂದೆ ಪಿಹೆಚ್‌ಡಿ ಪ್ರಬಂಧವನ್ನು ಸಲ್ಲಿಸಿದ್ದರೂ, ಯಾವುದೇ ಸ್ಪಷ್ಟ ಕಾರಣವಿಲ್ಲದೆ ಪದವಿ ಮಂಜೂರು ಮಾಡದೇ ವಿಳಂಬ ಮಾಡಲಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾದ ಅವರು ಮನೆಯಲ್ಲೇ 19ಕ್ಕೂ ಹೆಚ್ಚು ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆಯಿಂದ ಪ್ರಾಣಾಪಾಯ ತಪ್ಪಿದೆ.

ಗೈಡ್ ಕೆ.ಎಲ್.ಎನ್. ಮೂರ್ತಿ ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದ್ದ ವಿಚಾರವಾಗಿ ವಿದ್ಯಾರ್ಥಿನಿ ಹಿಂದೆಯೇ ಕುಲಪತಿ ಹಾಗೂ ರಿಜಿಸ್ಟ್ರಾರ್‌ಗೆ ದೂರು ನೀಡಿದ್ದರು. ದೂರು ಪರಿಶೀಲಿಸಿದ ಸಿಂಡಿಕೇಟ್ ಪ್ರಾಥಮಿಕವಾಗಿ ಗೈಡ್ ತಪ್ಪಿತಸ್ಥರೆಂದು ಗುರುತಿಸಿ ಅಮಾನತು ಕ್ರಮ ಕೈಗೊಳ್ಳಲು ನಿರ್ಧರಿಸಿತ್ತು. 

ಬಳಿಕ ವಿದ್ಯಾರ್ಥಿನಿಯೇ ದೂರು ವಾಪಸ್ ಪಡೆದಿದ್ದರೂ ಪದವಿ ಮಂಜೂರಿಗೆ ಸಂಬಂಧಿಸಿದ ಪ್ರಕ್ರಿಯೆ ಪೂರ್ಣಗೊಳ್ಳದೆ ಬಾಕಿಯೇ ಉಳಿದಿದೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.

ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಕುಲಪತಿ ಸಿ.ಎಂ. ತ್ಯಾಗರಾಜ್ ಅವರು, ವಿದ್ಯಾರ್ಥಿನಿ 2021ರಲ್ಲಿ ಸಂಶೋಧನೆ ಆರಂಭಿಸಿ 2025ರಲ್ಲಿ ಪ್ರಬಂಧ ಸಲ್ಲಿಸಿರುವುದಾಗಿ ಹೇಳಿದರು. ಗೈಡ್ ವಿರುದ್ಧದ ಕಿರುಕುಳದ ದೂರು ಸಿಂಡಿಕೇಟ್ ಸಭೆಯಲ್ಲಿ ಚರ್ಚೆಗೆ ಬಂದು ಅಮಾನತು ತೀರ್ಮಾನ ಕೈಗೊಳ್ಳಲಾಗಿದ್ದರೂ, ವಿದ್ಯಾರ್ಥಿನಿ ನಂತರ ದೂರು ವಾಪಸ್ ಪಡೆದಿದ್ದರು. ಪದವಿ ಮಂಜೂರಿಗೆ ಸಂಬಂಧಿಸಿದ ಅಂತಿಮ ತೀರ್ಮಾನ ಸಿಂಡಿಕೇಟ್ ಅನುಮೋದನೆಗೆ ಬಾಕಿ ಇರುವುದರಿಂದ ಘಟಿಕೋತ್ಸವದಲ್ಲಿ ಪದವಿ ನೀಡಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಈ ಸಂಬಂಧ ಡಿಸೆಂಬರ್ 4ರಂದು ತುರ್ತು ಸಿಂಡಿಕೇಟ್ ಸಭೆ ಕರೆಯಲಾಗಿದ್ದು, ವಿದ್ಯಾರ್ಥಿನಿಗೆ ಪದವಿ ಮಂಜೂರು ಮಾಡುವ ವಿಷಯದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕುಲಪತಿ ತಿಳಿಸಿದ್ದಾರೆ.

ಈ ಘಟನೆ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣವಾಗಿ ದಾಖಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0