ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲೆ ಶೂ ಎಸೆತ ಪ್ರಕರಣ: ವಕೀಲ ರಾಕೇಶ್ ಕಿಶೋರ್ ನನ್ನು ದೇಶದಿಂದಲೇ ಗಡಿಪಾರು ಮಾಡಲು ಆಗ್ರಹ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲೆ ಶೂ ಎಸೆತ ಪ್ರಕರಣ:  ವಕೀಲ ರಾಕೇಶ್ ಕಿಶೋರ್ ನನ್ನು ದೇಶದಿಂದಲೇ ಗಡಿಪಾರು ಮಾಡಲು ಆಗ್ರಹ

ಕೊಡ್ಲಿಪೇಟೆ :ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದಂತಹ ವಕೀಲ ರಾಕೇಶ್ ಕಿಶೋರ್ ಎಂಬಾತನನ್ನು ಬಂಧಿಸಿ ಕಾನೂನೂ ಕ್ರಮಕೈಗೊಂಡು ದೇಶದಿಂದಲೇ ಗಡಿಪಾರು ಮಾಡುವಂತೆ ಕೊಡ್ಲಿಪೇಟೆ ಹೋಬಳಿ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.

ದಲಿತ ಸಂಘರ್ಷ ಸಮಿತಿ ವತಿಯಿಂದ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರುಗಳ ನೇತೃತ್ವದಲ್ಲಿ ಶುಕ್ರವಾರ ಸಂಜೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸಮೀಪದ ಕಡೇಪೇಟೆ ಸರ್ಕಲ್ ನಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿಬಂದ ಪ್ರತಿಭಟನಕಾರರು ಶೂ ಎಸೆದ ವಕೀಲನ ಮತ್ತು ಕೇಂದ್ರ ಸರಕಾರ ಹಾಗೂ ಸಂವಿಧಾನ ವಿರೋದಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ದಲಿತ ಯುವ ಮುಖಂಡ ಮೋಹನ್ ಮೌರ್ಯ ಮಾತನಾಡಿ, ಭಾರತ ದೇಶದಲ್ಲಿ ಬಾಬಸಾಹೇಬರ ಸಂವಿಧಾನ ಆಡಳಿತದಲ್ಲಿದೆ. ಎರಡು ಸಾವಿರ ವರ್ಷಗಳ ಕಾಲ ಗುಲಾಮಗಿರಿಯಲ್ಲಿಟ್ಟು ಆಡಳಿತ ನಡೆಸಿದ ಮನುವಾದಿಗಳ ಸಂತತಿಯ ರಾಕೇಶ್‌ ಕಿಶೋರ್ ಎಂಬಾತನು ಒಂದು ವಾರದ ಹಿಂದಿನ ತೀರ್ಪಿಗೆ ಸಂಬದಿಸಿದಂತೆ ಮುಖ್ಯ ನ್ಯಾಯಧೀಶರಿಗೆ ಶೂ ಎಸೆದಿದ್ದಾನೆ.ಈ ದೇಶದಲ್ಲಿ ಹುಟ್ಟಿರುವ ಪ್ರತಿಯೊಬ್ಬರು ಡಾ.ಅಂಬೇಡ್ಕರ್ ರವರು ಬರೆದಂತಹ ಸಂವಿಧಾನವನ್ನು ಗೌರವಿಸಬೇಕು.ಪರ್ಯಾಯ ಸಂವಿಧಾನ ಜಾರಿಗೆ ತರಲು ಬಾಬ ಸಾಹೇಬರ ಸಂತತಿಗಳು ಇರುವವರೆಗೂ ಸಾಧ್ಯವಿಲ್ಲ.

ಇದು ಈ ದೇಶದ ಮೇಲೆ ನಮಗಿರುವ ಸ್ವಾಭಿಮಾನವಾಗಿದೆ. ಈ ದುಶ್ಕೃತ್ಯವನ್ನು ಬೆಂಬಲಿಸಿದ ನಿವೃತ್ತ ಪೊಲೀಸ್ ಅಧಿಕಾರಿ ಬಾಸ್ಕರ್ ರಾವ್ ನನ್ನು ಬಿಜೆಪಿ ಈ ಕೂಡಲೇ ಪಕ್ಷದಿಂದ ಉಚ್ಚಾಟಿಸಿ ತಮ್ಮ ಪಕ್ಷಕ್ಕೆ ಸಂವಿಧಾನದ ಮೇಲೆ ಗೌರವ ಇದೆ ಎಂದು ಸಾಬೀತುಪಡಿಸಬೆಕೆಂದು ಆಗ್ರಹಿಸಿದರು.

ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಜೆ.ಎಲ್.ಜನಾರ್ದನ್ ಮಾತನಾಡಿ,ಮುಖ್ಯ ನ್ಯಾಯಾಧೀಶ ರಿಗೆ ಶೂ ಎಸೆದ ದಿನ ಸಂವಿಧಾನಕ್ಕೆ ಆಗೌರವ ತಂದತಹ ದಿನವಾಗಿದೆ.ಈ ವಿಷಯದಲ್ಲಿ ಕೇಂದ್ರ ಸರಕಾರ ಮತ್ತು ಗೃಹ ಸಚಿವರು ಮೌನ ವಹಿಸಿರುವುದು ನೋಡಿದರೆ ಇದರ ಹಿಂದಿನ ನಡೆ ಬೆಳಕಿಗೆ ಬಂದಿದೆ. ಇದಕ್ಕೆ ಕೇಂದ್ರದ ಸಂವಿಧಾನ ವಿರೋಧಿ ದೊರಣೆಯೇ ಪ್ರೇರಣೆ ಎಂದು ಹೇಳಿದರು.

ಸ್ಥಳೀಯ ಯುವ ಮುಖಂಡ ಡಿ.ಎನ್.ವಸಂತ್ ಮಾತನಾಡಿ, ಬಾಬಸಾಹೇಬರ ಸಂವಿಧಾನದಲ್ಲಿರುವ ಮಹಿಳೆಯರಿಗಿರುವ ಹಕ್ಕು ಮನು ಸಂವಿಧಾನದಲ್ಲಿ ಇಲ್ಲ. ಈ ಸಂವಿಧಾನದಡಿ ಬದುಕುತ್ತಿರುವ ದೇಶದ ಪ್ರತಿಯೊಬ್ಬರು ಸಹ ಜಾತಿ ಮತ್ತು ಧರ್ಮ ಭೇದ ಮರೆತು ಪ್ರತಿಭಟಿಸಬೇಕು,ಲ. ರಾಕೇಶ್ ಕಿಶೋರ್ ನಿಗೆ ಮುಂದೆ ಕೇಂದ ಸರಕಾರ ರಾಜ್ಯಪಾಲರೋ ಇನ್ನಿತರ ಸ್ಥಾನ ಮಾನ ನೀಡಿದರೂ ಅನುಮಾನವಿಲ್ಲ.ಈ ಸಂವಿಧಾನ ವಿರೋಧಿ ಕ್ರೌರ್ಯವನ್ನು ಸರ್ಮರ್ಥಿಸಿದ ಭಾಸ್ಕರ್ ರಾವ್ ರನ್ನು ಸಹ ರಾಜ್ಯದಿಂದಲೇ ಗಡಿಪಾರು ಮಾಡಬೇಕೆಂದರು.

ವಲಯ ಕಾಂಗ್ರೆಸ್ ಅದ್ಯಕ್ಷ ಔರಂಗಜೇಬ್, ರಾಜ್ಯ ಜಿಲ್ಲಾ ಮುಖಂಡರಾದ, ಕೆ.ಬಿ.ರಾಜು ಕುಶಾಲನಗರ ಮತ್ತು ಟಿ.ಇ.ಸುರೇಶ್ ಕೃತ್ಯವನ್ನು ಖಂಡಿಸಿ ಮಾತನಾಡಿದರು.

 ಪ್ರತಿಭಟನೆಯ ನೇತ್ವತ್ವ ವಹಿಸಿದ ಪ್ರಮುಖರಾದ ಡಿ.ಆರ್.ವೇದಕುಮಾರ್ ಮನವಿ ಪತ್ರವನ್ನು ಓದಿದರು. ಉಪತಹಶೀಲ್ದಾರರ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು.

ಸಂಘಟನೆಯ ಪ್ರಮುಖರಾದ ಡಿ.ವಿ.ಜಗದೀಶ್ ಮತ್ತು ವೀರಭದ್ರ ಬೆಸೂರು ಪಂಚಾಯತ್ ಸದಸ್ಯ ಜಯರಾಜ್ , ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ನಿಸಾರ್ ,ಪ್ರಮುಖರಾದ ಅಬ್ದುಲ್ ರಹ್ಮಾನ್ ,ಸಾಬ್ಜಾನ್ , ದಲಿತ ಮುಖಂಡರುಗಳಾದ ಶಿವಲಿಂಗ, ಜೆ.ಸಿ ರಾಜು, ಪ್ರಸನ್ನ ನೀರುಗುಂದ, ಜೆ.ಸಿ.ಹರೀಶ್, ಪಾಂಡು, ಕೆಂಚಪ್ಪ, ತಮ್ಮಯ್ಯ, ಸುರೇಶ್, ಸಿ.ಈ ಹರೀಶ್, ಸಂದೀಪ್,ಮಂಜು ಚಿಕ್ಕಬಂಡಾರ, ಡಿ.ಎನ್, ವಿಜಯ್, ರೂಪ, ವೇದಾವತಿ, ಡಿ.ಸಿ. ಸೋಮಣ್ಣ,ಕಾರ್ತಿಕ್, ಮುಂತಾದವರುಗಳು ಇದ್ದರು.