ಸಿದ್ದಾಪುರ:ಎಸ್ಟೇಟ್ ನೊಳಗೆ ಕಾರಿನ ಮೇಲೆ ಕಾಡಾನೆ ದಾಳಿ

Jun 10, 2026 - 22:02
 0  1.7k
ಸಿದ್ದಾಪುರ:ಎಸ್ಟೇಟ್ ನೊಳಗೆ ಕಾರಿನ ಮೇಲೆ ಕಾಡಾನೆ ದಾಳಿ

ಸಿದ್ದಾಪುರ: ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ-ಬಾಣಂಗಾಲ ಸಮೀಪದ ಶಿಲ್ಪಿ ಎಸ್ಟೇಟ್‌ಗೆ ಕೆಲಸಕ್ಕೆ ತೆರಳುತ್ತಿದ್ದ ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಕಾರು ಜಖಂಗೊಂಡ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಎಸ್ಟೇಟ್ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಕಾರು ಬಾಡಗ-ಬಾಣಂಗಾಲ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಕಾಡಿನಿಂದ ಬಂದ ಕಾಡಾನೆ ವಾಹನದ ಮೇಲೆ ದಾಳಿ ನಡೆಸಿದೆ. ಆನೆಯು ಕಾರಿನ ಮುಂಭಾಗಕ್ಕೆ ಹಾಗೂ ಬದಿಗೆ ತಳ್ಳಿದ ಪರಿಣಾಮ ವಾಹನಕ್ಕೆ ಹಾನಿಯಾಗಿದೆ.

ಘಟನೆಯ ವೇಳೆ ಕಾರಿನಲ್ಲಿದ್ದ ಚಾಲಕ ಗೋಣಿಕೊಪ್ಪ ನಿವಾಸಿ ಸುಭಾಷ್ ಹಾಗೂ ಕಾರ್ಮಿಕರು ಆತಂಕಗೊಂಡರೂ ಸಮಯಪ್ರಜ್ಞೆ ಮೆರೆದಿದ್ದು, ವಾಹನದಿಂದ ಸುರಕ್ಷಿತವಾಗಿ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ಇತ್ತೀಚಿನ ದಿನಗಳಲ್ಲಿ ಮಾಲ್ದಾರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಕಾರ್ಮಿಕರು ಹಾಗೂ ಸಾರ್ವಜನಿಕರು ಭಯದ ವಾತಾವರಣದಲ್ಲಿ ಸಂಚರಿಸುವಂತಾಗಿದೆ. ಕಾಡಾನೆಗಳ ಚಲನವಲನವನ್ನು ನಿಯಂತ್ರಿಸಿ, ಜನರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 1
Angry Angry 0
Sad Sad 0
Wow Wow 1