ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ | ಅ.30ರವರೆಗೆ ಆನ್ಲೈನ್ ಸಮೀಕ್ಷೆ ಮುಂದುವರಿಕೆ ; ಇಂದು ಸಂಜೆಯವರೆಗೆ ಶಿಕ್ಷಕರಿಗೆ ಹೊಣೆ
ಬೆಂಗಳೂರು, ಅ.18: ರಾಜ್ಯದಾದ್ಯಂತ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಂತಿಮ ಹಂತ ತಲುಪಿದ್ದು, ಅಕ್ಟೋಬರ್ 19ರ ಸಂಜೆಯವರೆಗೆ ಶಿಕ್ಷಕರು ಸಮೀಕ್ಷಾ ಕಾರ್ಯ ನಿರ್ವಹಿಸಲಿದ್ದಾರೆ. ಬಳಿಕ ಅವರನ್ನು ಸಮೀಕ್ಷಾ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸ್ಪಷ್ಟಪಡಿಸಿದೆ.
ಸಮೀಕ್ಷೆಯಲ್ಲಿ ಪಾಲ್ಗೊಳ್ಳದ ಸಾರ್ವಜನಿಕರಿಗೆ ಅಕ್ಟೋಬರ್ 30ರ ವರೆಗೆ ಆನ್ಲೈನ್ ಮೂಲಕ ಸ್ವಯಂ ಪಾಲ್ಗೊಳ್ಳುವ ಅವಕಾಶ ನೀಡಲಾಗಿದೆ ಎಂದು ಆಯೋಗದ ಸದಸ್ಯ-ಕಾರ್ಯದರ್ಶಿ ಕೆ.ಎ. ದಯಾನಂದ್ ತಿಳಿಸಿದ್ದಾರೆ. “ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಬಾಕಿ ಉಳಿದಿರುವ ಕಾರ್ಯಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ಕರ್ನಾಟಕ ಸರ್ಕಾರದ ಸಚಿವಾಲಯದ ನೌಕರರ ಸಂಘ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದು, ಸಮೀಕ್ಷಾ ಕರ್ತವ್ಯದಲ್ಲಿರುವ ಸಚಿವಾಲಯದ ನೌಕರರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ವಿನಂತಿಸಿದೆ. ಸಂಘದ ಪ್ರಕಾರ, 1,600ಕ್ಕೂ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿಗಳು ಯಾವುದೇ ರಜೆ ಅಥವಾ ವಿಶ್ರಾಂತಿ ಪಡೆಯದೆ, ಕಳೆದ 15 ದಿನಗಳಿಂದ ಬೆಂಗಳೂರಿನ ಮನೆಮನೆಗೆ ತೆರಳಿ ಗಣತಿ ಕಾರ್ಯದಲ್ಲಿ ತೊಡಗಿದ್ದಾರೆ. “ಅಕ್ಟೋಬರ್ 18ರೊಳಗೆ ಸಮೀಕ್ಷೆ ಮುಗಿಯಬೇಕಾಗಿದ್ದರೂ, ಅಧಿಕೃತ ಆದೇಶ ಬಾರದ ಕಾರಣ ನೌಕರರು ಇನ್ನೂ ಕರ್ತವ್ಯದಲ್ಲಿದ್ದಾರೆ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಹಿಂದುಳಿದ ವರ್ಗಗಳ ಆಯೋಗದ ವರದಿ ಪ್ರಕಾರ, ರಾಜ್ಯದಲ್ಲಿ ಒಟ್ಟು 5,29,63,614 ಜನರ ಸಮೀಕ್ಷೆ ಪೂರ್ಣಗೊಂಡಿದ್ದು, ಬೆಂಗಳೂರನ್ನು ಹೊರತುಪಡಿಸಿ 96.35 ಶೇಕಡಾ ಪ್ರಗತಿ ಸಾಧಿಸಲಾಗಿದೆ. ಒಟ್ಟಾರೆ 1,42,74,031 ಮನೆಗಳ ಸಮೀಕ್ಷೆ ಮುಗಿದಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 17,84,312 ಮನೆಗಳ ಸಮೀಕ್ಷೆ ಪೂರ್ಣಗೊಂಡಿದ್ದು, ಶೇಕಡಾ 39.76 ಆಗಿದೆ. ಬೆಂಗಳೂರಿನಲ್ಲಿ ಒಟ್ಟು 55,17,989 ಜನರ ಮಾಹಿತಿ ಸಂಗ್ರಹಣೆ ಪೂರ್ಣಗೊಂಡಿದೆ ಎಂದು ಹಿಂದುಳಿದ ವರ್ಗಗಳ ಆಯೋಗ ತಿಳಿಸಿದೆ.