ಸೋಮವಾರಪೇಟೆ:ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆ: ನಿಗದಿತ ಸಮಯದಲ್ಲಿ ಸಭೆ ನಡೆಸಿ ಪರಿಹಾರ ಒದಗಿಸಲು ಒತ್ತಾಯ

ಸೋಮವಾರಪೇಟೆ:ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆ:  ನಿಗದಿತ ಸಮಯದಲ್ಲಿ ಸಭೆ ನಡೆಸಿ ಪರಿಹಾರ ಒದಗಿಸಲು ಒತ್ತಾಯ

ಸೋಮವಾರಪೇಟೆ:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿಯ ತ್ರೈಮಾಸಿಕ ಸಭೆ ಗುರುವಾರ ತಾಲೂಕು ತಹಶೀಲ್ದಾರ್ ಕೃಷ್ಣಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರಪೇಟೆಯ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಸಭೆಯಲ್ಲಿ ಕಳೆದ ಒಂದು ವರ್ಷದಲ್ಲಿ ಸಭೆ ನಡೆಸದೆ ವಿಳಂಬವಾದ ಹಿನ್ನೆಲೆಯಲ್ಲಿ ದಲಿತ ಮುಖಂಡರು ಗಂಭೀರ ಆಕ್ಷೇಪ ವ್ಯಕ್ತಪಡಿಸಿದರು.

ದಲಿತ ಮುಖಂಡ ಎಚ್.ಎಂ. ಸೋಮಪ್ಪ ಮಾತನಾಡಿಣ "ಮೂರು ಬಾರಿ ಸಭೆ ಮುಂದೂಡಿದ ನಂತರ ಈಗ ತಡವಾಗಿ ಸಭೆ ನಡೆಯುತ್ತಿದೆ. ಇದು ಕಾಟಚಾರದ ಸಭೆಯಂತೆ ಇರಬಾರದು. ಸಭೆ ನಿಗದಿತ ಸಮಯದಲ್ಲಿ ನಡೆಯಬೇಕು ಹಾಗೂ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು," ಎಂದು ಒತ್ತಾಯಿಸಿದರು. ಗೈರಾದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವ ನಿರ್ಣಯವನ್ನು ಸಮಿತಿ ತೆಗೆದುಕೊಂಡಿತು.

 ಸಮಿತಿ ಸದಸ್ಯ ಬಿ.ಜಯಂದ್ರ ಮಾತನಾಡಿ, "ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಕೇವಲ ಕಾಗದದ ಮೇಲೆ ಉಳಿಯಬಾರದು. ಅವುಗಳನ್ನು ಕಾರ್ಯರೂಪಕ್ಕೆ ತರದಿದ್ದರೆ ಭವಿಷ್ಯದಲ್ಲಿ ಸಭೆ ನಡೆಸುವುದು ಅರ್ಥವಿಲ್ಲ," ಎಂದು ಕಠಿಣವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ವಿಲಂಬ:

ಕಾಗಡಿ ಕಟ್ಟೆ ಗ್ರಾಮದಲ್ಲಿ 117 ಕುಟುಂಬಗಳು ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಮನೆ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದರೂ ಫಲವಿಲ್ಲದೆ ಉಳಿದಿದೆ. ದೊಡ್ಡ ಭೂಮಿಯುಳ್ಳವರು ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ಸ್ಮಶಾನಕ್ಕೂ ಸ್ಥಳವಿಲ್ಲದ ಸ್ಥಿತಿ ಎದುರಾಗಿದೆ. ಕಂದಾಯ ಇಲಾಖೆಯ 1-5 ದಾಖಲಾತಿ ಸರಿಯಾಗಿ ನಡೆಯುತ್ತಿಲ್ಲ ಎಂಬ ದೂರಿನೊಂದಿಗೆ, ಈಗ ಕಾನೂನು ಸರಳೀಕರಿಸಿಕೊಂಡಿರುವುದರಿಂದ ಮುಂದಿನ ದಿನಗಳಲ್ಲಿ ವಿಲೇವಾರಿ ಕಾರ್ಯ ನಡೆದಿತು ಎಂದು ತಹಶೀಲ್ದಾರ್ ತಿಳಿಸಿದರು.

ಸುರಕ್ಷಿತ ಜಾತಿ ಪ್ರಮಾಣ ಪತ್ರ ದುರುಪಯೋಗ: 

ಕೊಡ್ಲಿಪೇಟೆಯಲ್ಲಿ ಇತರ ಜಾತಿಯವರಿಗೆ ಸುಳ್ಳುವಾಗಿ ಬಲಿಷ್ಠ ಜಾತಿ ಪ್ರಮಾಣ ಪತ್ರ ನೀಡಿರುವ ಪ್ರಕರಣವನ್ನು ದೇವರಾಜ್ ಬೆಳಕಿಗೆ ತಂದರು. ಇದರ ಮೂಲಕ ಕೆಲವು ಮಂದಿ ಸರ್ಕಾರಿ ಉದ್ಯೋಗ ಹಾಗೂ ಯೋಜನೆಗಳನ್ನು ಪಡೆಯುತ್ತಿದ್ದಾರೆ ಎಂಬ ಆರೋಪವಿದೆ. ತಹಶೀಲ್ದಾರ್ ಈ ಬಗ್ಗೆ ಮಾಹಿತಿ ಒದಗಿಸಿದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಸಮಿತಿಗೆ ದೂರು, ತನಿಖೆ ವಿಳಂಬ:

ಸೋಮವಾರಪೇಟೆಯ ಬಾಣವರ ರಸ್ತೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಐದು ಸೆಂಟ್ ಜಾಗ ಹಾಗೂ ಮನೆಯನ್ನು ಉಳ್ಳವರಿಂದ ಮೂಲ ದಾಖಲೆಗಳನ್ನು ತಿರುಚಿ ನಕಲಿ ದಾಖಲೆಗಳ ಮೂಲಕ ಕಬಳಿಸಲು ಮುಂದಾದ ಕುರಿತು 2019ರಲ್ಲಿ ಸಮಿತಿಗೆ ದೂರು ಬಂದಿದ್ದರೂ ತನಿಖೆ ಆಗಿಲ್ಲ ಎಂಬ ಬಗ್ಗೆ ಬಿ.ಈ. ಜಯಂದ್ರ ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಸತೀಶ್ ಅವರು ಮುಂದಿನ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಿದ್ದೇಗೌಡ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ದಲಿತ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.