ಚಿನ್ನ, ಸೈಟ್ ವಿವಾದಕ್ಕೆ ತಾಯಿಯನ್ನೆ ಹೊಡೆದು ಕೊಂದ ಪುತ್ರ!

Nov 6, 2025 - 21:57
 0  716
ಚಿನ್ನ, ಸೈಟ್ ವಿವಾದಕ್ಕೆ ತಾಯಿಯನ್ನೆ ಹೊಡೆದು ಕೊಂದ ಪುತ್ರ!
Photo credit:Tv09 (ಫೋಟೋ: ಕೊಲೆಯಾದ ತಾಯಿ,ಬಂಧಿತ ಮಗ)

ಹುಬ್ಬಳ್ಳಿ, ನ.06: ಹುಬ್ಬಳ್ಳಿಯ ಬ್ರಹ್ಮಗಿರಿ ಕಾಲೋನಿಯಲ್ಲಿ ಮಗನೊಬ್ಬ ತನ್ನ ಹೆತ್ತ ತಾಯಿಯನ್ನೇ ಕ್ರೂರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಚಿನ್ನ ಹಾಗೂ ಸೈಟ್ ವಿಚಾರದ ವೈಮನಸ್ಸಿನಿಂದ ನಿವೃತ್ತ ಸರ್ಕಾರಿ ನೌಕರ ಅಶೋಕ್ ಮುಳಗುಂದ ತನ್ನ ತಾಯಿ ನಿಂಗವ್ವ ಮುಳಗುಂದ (78) ಅವರನ್ನು ಕೊಲೆಮಾಡಿದ್ದಾನೆ ಎನ್ನಲಾಗಿದೆ. ವಿದ್ಯಾನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

 ಮೃತರನ್ನು 78 ವರ್ಷದ ನಿಂಗವ್ವ ಮುಳಗುಂದ ಎಂದು ಗುರುತಿಸಲಾಗಿದೆ. ತಮ್ಮ ಪತಿ ಮಲ್ಲಪ್ಪ ಅವರೊಂದಿಗೆ ನಿಂಗವ್ವ ಬ್ರಹ್ಮಗಿರಿ ಕಾಲೋನಿಯಲ್ಲಿ ವಾಸವಾಗಿದ್ದರು. ನವೆಂಬರ್ 4ರ ರಾತ್ರಿ ನಿಂಗವ್ವ ಮನೆ ಒಳಗೆ ಮಲಗಿದ್ದ ವೇಳೆ, ಹಿಂಬಾಗಿಲು ದಾಟಿ ಒಳನುಗ್ಗಿದ ಪುತ್ರ ಅಶೋಕ್ ಕಟ್ಟಿಗೆಯ ಮಣೆಯಿಂದ ತಾಯಿಯ ತಲೆಗೆ ಹೊಡೆದು ಕೊಲೆಮಾಡಿದ್ದಾನೆ. ನಂತರ ಬೆಳಗ್ಗೆ ತಾವೇ ವಿದ್ಯಾನಗರ ಠಾಣೆಗೆ ಕರೆ ಮಾಡಿ, “ಯಾರೋ ಕೊಲೆ ಮಾಡಿ ಪರಾರಿಯಾಗಿದ್ದಾರೆ” ಎಂದು ಸುಳ್ಳು ಮಾಹಿತಿ ನೀಡಿದ್ದಾನೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಪೊಲೀಸರು, ಶ್ವಾನ ದಳ, ಬೆರಳಚ್ಚು ತಜ್ಞರು ಹಾಗೂ ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಾಥಮಿಕವಾಗಿ ದರೋಡೆ ಉದ್ದೇಶದ ಕೊಲೆ ಎಂದು ಶಂಕಿಸಲಾಗಿದ್ದರೂ, ನಂತರದ ವಿಚಾರಣೆಯಲ್ಲಿ ಅಶೋಕ್‌ನ ಸಹೋದರಿಯರು ಸಹೋದರನ ಮೇಲೆಯೇ ಅನುಮಾನ ವ್ಯಕ್ತಪಡಿಸಿದ ಪರಿಣಾಮ ಸತ್ಯ ಬಯಲಾಯಿತು.

ವಿಚಾರಣೆಯಲ್ಲಿ ಅಶೋಕ್ ತಾನೇ ತಾಯಿಯನ್ನು ಕೊಲೆಮಾಡಿದ ವಿಚಾರ ಒಪ್ಪಿಕೊಂಡಿದ್ದಾನೆ. “ತಾಯಿ ತನ್ನ ಮೈಮೇಲಿದ್ದ 30 ಗ್ರಾಂ ಚಿನ್ನವನ್ನು ಹೆಣ್ಣು ಮಕ್ಕಳಿಗೆ ನೀಡಿದ್ದರು. ಇತ್ತೀಚೆಗೆ ಸೈಟ್ ಸಹ ಅವರ ಹೆಸರಿನಲ್ಲಿ ಕೊಡಲು ಮುಂದಾಗಿದ್ದರು. ಅದಕ್ಕೆ ಕೋಪದಿಂದ ಈ ಕೃತ್ಯ ಎಸಗಿದೆ” ಎಂದು ಅಶೋಕ್ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಂಗವ್ವ ಅವರಿಗೆ ನಾಲ್ವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗ ಇದ್ದರು. ತಾಯಿ ಕೊಟ್ಟ ಚಿನ್ನ ಮತ್ತು ಸೈಟ್ ವಿಚಾರದಲ್ಲಿ ಅಶೋಕ್ ಆಗಾಗ ಹಲ್ಲೆ ಮಾಡಿ, ಧಮ್ಕಿ ಹಾಕುತ್ತಿದ್ದನೆಂಬುದು ಕುಟುಂಬದ ಮೂಲಗಳು ತಿಳಿಸಿದೆ. ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0