ತಂದೆ-ತಾಯಿಯ ರಕ್ಷಣೆಗೆ ಕಾಲೇಜು ಬಿಟ್ಟು ಬಂದಿದ್ದ ಮಗನ ಹತ್ಯೆ : ಕುಟುಂಬದ ಆಸ್ತಿ ಕಲಹಕ್ಕೆ ಮಗನೇ ಬಲಿ!

ತಂದೆ-ತಾಯಿಯ ರಕ್ಷಣೆಗೆ ಕಾಲೇಜು ಬಿಟ್ಟು ಬಂದಿದ್ದ ಮಗನ ಹತ್ಯೆ :  ಕುಟುಂಬದ ಆಸ್ತಿ ಕಲಹಕ್ಕೆ ಮಗನೇ ಬಲಿ!

ಬಾಗಲಕೋಟೆ: ಆಸ್ತಿಗಾಗಿ ನಡೆದ ಕುಟುಂಬ ಕಲಹ ಕೊಲೆಯ ವರೆಗೆ ತಲುಪಿದ ಹೃದಯವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ. 

ತಂದೆ-ತಾಯಿಗೆ ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಕಾಲೇಜು ಬಿಟ್ಟು ಅವರ ರಕ್ಷಣೆಗೆ ಮನೆ ಸೇರಿದ್ದ ಯುವಕ ವಿಶ್ವನಾಥ ಮರೆಮ್ಮನವರ (26) ಸಂಬಂಧಿಕರ ಕೈಯಲ್ಲಿ ಬಲಿಯಾಗಿದ್ದಾನೆ.

ಪೂರ್ವಜರಿಂದ ಬಂದ ಸುಮಾರು 10 ಎಕರೆ ಕೃಷಿ ಜಮೀನು ಹಂಚಿಕೆ ವಿಚಾರದಲ್ಲಿ ವಿಶ್ವನಾಥನ ತಂದೆ ಹನಮಂತ ಹಾಗೂ ಅವರ ಸಹೋದರಿ ಯಮನವ್ವಳ ನಡುವೆ ಕಳೆದ ಏಳು ತಿಂಗಳಿಂದ ಗಲಾಟೆ ತೀವ್ರಗೊಂಡಿತ್ತು. ಯಮನವ್ವಳಿಗೆ ಒಂದೂವರೆ ಎಕರೆ ಬರೆದುಕೊಡಲಾಗಿದ್ದರೂ, ತವರು ಆಸ್ತಿಯಲ್ಲಿ ಇನ್ನೂ ಪಾಲು ನೀಡಬೇಕು ಎಂದು ಆಗಾಗ ವಾಗ್ವಾದ ಸೃಷ್ಟಿಸುತ್ತಿದ್ದರು. ಇತ್ತೀಚೆಗೆ ಹನಮಂತ ಅವರು ಹೊಲ ಹದಗೊಳಿಸಲು ಪ್ರಾರಂಭಿಸಿದ್ದ ವೇಳೆ ಮತ್ತೆ ಕಲಹ ಉಲ್ಬಣಗೊಂಡಿತ್ತು.

ವಿಶ್ವನಾಥ ತನ್ನ ಸಹೋದರನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ರಸ್ತೆ ಬದಿಯ ಬುಟ್ಟಿಯ ವಿಚಾರವಾಗಿ ಮತ್ತೊಮ್ಮೆ ವಾಗ್ವಾದ ಉಂಟಾಯಿತು. ಕ್ಷಣಾರ್ಧದಲ್ಲಿ ಮಾತಿನ ಚಕಮಕಿ ಹಲ್ಲೆಗೆ ತಿರುಗಿ, ಯಮನವ್ವ ಸಂಬಂಧಿಸಿಗಳಾದ ಬಸಪ್ಪ, ಪ್ರಕಾಶ್, ಗಣೇಶ, ರಂಗಪ್ಪ, ಕುಮಾರ, ಯಲ್ಲಪ್ಪ ಬಸಪ್ಪಯಂಕಪ್ಪ ಸೇರಿ ಲೋಹದ ರಾಡ್‌ನಿಂದ ವಿಶ್ವನಾಥನ ತಲೆಯ ಮೇಲೆ ಭೀಕರ ಹಲ್ಲೆ ನಡೆಸಿದರು. ತೀವ್ರ ಗಾಯಗೊಂಡ ವಿಶ್ವನಾಥರನ್ನು ತಕ್ಷಣ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.

ವಿಶ್ವನಾಥ ಬಿಕಾಂ ಪದವಿ ಮುಗಿಸಿದ್ದರು. ಕೃಷಿ ಕ್ಷೇತ್ರದತ್ತ ವಿಶೇಷ ಆಸಕ್ತಿಯಿತ್ತು. ತಂದೆ-ತಾಯಿಗೆ ಜೀವ ಬೆದರಿಕೆ ಇದ್ದುದರಿಂದ ಶಿಕ್ಷಣ ಮೊಟಕುಗೊಳಿಸಿ ಮನೆ ಸೇರಿ ಕೃಷಿಯಲ್ಲಿ ತೊಡಗಿದ್ದರು. ಅವರ ಸಾವಿನಿಂದ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.

ಬೀಳಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಒಟ್ಟು 24 ಮಂದಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಇಬ್ಬರನ್ನು ಬಂಧಿಸಿರುವ ಪೊಲೀಸರು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.