ಸೋಮವಾರಪೇಟೆ;ಯೋಧ ನವೀನ್ ಅಂತ್ಯಕ್ರಿಯೆ

ಸೋಮವಾರಪೇಟೆ;ಯೋಧ ನವೀನ್ ಅಂತ್ಯಕ್ರಿಯೆ

ಸೋಮವಾರಪೇಟೆ, ಏ. 6: ಕಳೆದ ತಾ. 4ರಂದು ಜಮ್ಮು ಮತ್ತು ಕಾಶ್ಮೀರಾದ ಪುಲ್ವಾಮಾದಲ್ಲಿ ರಕ್ಷಣಾ ಕರ್ತವ್ಯದಲ್ಲಿದ್ದಾಗಲೇ ರೈಫಲ್‌ ನಿಂದ ಗುಂಡು ಹಾರಿಸಿಕೊಂಡು ಅತ್ಮಹತ್ಯೆಗೆ ಶರಣಾದ ಸಿ.ಆರ್.ಪಿ.ಎಫ್. ಯೋಧ ಕೆ.ಜೆ. ನವೀನ್ ಅವರ ಅಂತ್ಯಕ್ರಿಯೆ ಬುಧವಾರ ಸ್ವಗ್ರಾಮದಲ್ಲಿ ಸರ್ಕಾರಿ ಗೌರವ ಹಾಗೂ ನೂರಾರು ಮಂದಿಯ ಅಶ್ರುತರ್ಪಣದೊಂದಿಗೆ ನೆರವೇರಿತು.

ಮೃತ ನವೀನ್ ಅವರ ಪಾರ್ಥಿವ ಶರೀರ ರಾತ್ರಿ 1.30ರ ಸುಮಾರಿಗೆ ಸ್ವಗ್ರಾಮಕ್ಕೆ ಆಗಮಿಸಿತು. ಪುಲ್ವಾಮಾದ ತಾರ್ ಪ್ರದೇಶದ 160ನೇ ಬೆಟಾಲಿಯನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿರಿಯಾಪಟ್ಟಣ ಮೂಲದ ಯೋಧ ಬವಸರಾಜ್ ಅವರು ಪಾರ್ಥಿವ ಶರೀರದೊಂದಿಗೆ ಶ್ರೀನಗರದಿಂದ ಆಗಮಿಸಿದ್ದು, ಬೆಂಗಳೂರು ಯಲಹಂಕದಲ್ಲಿರುವ ಸಿಆ‌ರ್ ಪಿಎಫ್ ಕೇಂದ್ರ ಕಚೇರಿಯಿಂದ 6 ಮಂದಿ ಯೋಧರು ಯಡವಾರೆಗೆ ಆಗಮಿಸಿದರು.

 ಮೃತದೇಹ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ರೋಧನ ಮುಗಿಲುಮುಟ್ಟಿತು. ಇಂದು ಬೆಳಿಗ್ಗೆ ಮನೆ ಮುಂಭಾಗ ಮೃತ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಕುಟುಂಬಸ್ಥರ ಸಹಿತ ನೂರಾರು ಮಂದಿ ಸಾರ್ವಜನಿಕರು ಆಗಮಿಸಿ ಅಂತಿಮ ದರ್ಶನ ಪಡೆದರು.

ಶಾಸಕ ಡಾ. ಮಂತರ್ ಗೌಡ ಅವರು ಆಗಮಿಸಿದ ಸಂದರ್ಭ ನವೀನ್ ಅವರ ತಾಯಿ ವಿಶಾಲಾಕ್ಷಿ ಅವರು 'ದೇಶ ಸೇವೆ ಮಾಡಿ ಮಗ ಸುಸ್ತಾಗಿ ಮಲಗಿದ್ದಾನೆ ನೋಡಿ ಸರ್' ಎಂದು ರೋಧಿಸಿದ ಸಂದರ್ಭ ಎಲ್ಲರ ಕಣ್ಣಾಲಿಗಳು ಮತ್ತೊಮ್ಮೆ ನೀರಾದವು. ಜಿಲ್ಲಾ ಸಶಸ್ತ್ರ ಪಡೆಯಿಂದ ಗೌರವವಂದನೆ ನಡೆಯಿತು. ಸಿ.ಆರ್.ಪಿ.ಎಫ್.ನ ಅಸಿಸ್ಟೆಂಟ್ ಕಮಾಂಡರ್ ಯೋಗೇಂದ್ರ ಸೈನ್ ಅವರು ಮೃತದೇಹಕ್ಕೆ ನಮನ ಸಲ್ಲಿಸಿದರು. ಸಿಆರ್‌ಪಿಎಫ್ ಯೋಧ ಬಸವರಾಜು ಅವರು ರಾಷ್ಟ್ರಧ್ವಜವನ್ನು ಮೃತ ನವೀನ್ ಅವರ ಪತ್ನಿ ಸುನೀತಾ ಹಾಗೂ ಮಕ್ಕಳಿಗೆ ಹಸ್ತಾಂತರಿಸಿದರು.

ಮೂರು ಸುತ್ತು ಕುಶಾಲತೋಪು ಸಿಡಿಸಿದ ನಂತರ ಅರೆಭಾಷೆ ಗೌಡ ಸಂಪ್ರದಾಯದಂತೆ ಪೂಜೆ ಸಲ್ಲಿಸಿ, ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ತಾಲೂಕು ಆಡಳಿತದ ಪರವಾಗಿ ತಹಶೀಲ್ದಾರ್ ಕೃಷ್ಣಮೂರ್ತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಕುಮಾರ್, ಸಿ.ಆರ್.ಪಿ.ಎಫ್.ನ ಮಾಜೀ ಯೋಧರ ಒಕ್ಕೂಟದ ಪದಾಧಿಕಾರಿಗಳು ಗೌರವ ನಮನ ಸಲ್ಲಿಸಿದರು. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಖತೀಜಾ‌,ಮತ್ತು ಸಿಬ್ಬಂದಿಗಳು ‌ಇದ್ದರು.