ಸುಂಟಿಕೊಪ್ಪ | ಸೊಂಟ ನೋವೆಂದು ಕ್ಲಿನಿಕ್‌ಗೆ ಹೋದ ಯುವಕ ಮೃತ್ಯು!

ಸುಂಟಿಕೊಪ್ಪ | ಸೊಂಟ ನೋವೆಂದು ಕ್ಲಿನಿಕ್‌ಗೆ ಹೋದ ಯುವಕ ಮೃತ್ಯು!
ವಿನೋದ್

ಸುಂಟಿಕೊಪ್ಪ (ಕೊಡಗು), ನ.6: ಸೊಂಟ ನೋವು ಎಂದು ಖಾಸಗಿ ಕ್ಲಿನಿಕ್‌ಗೆ ಹೋದ ಯುವಕ ಸಾವನ್ನಪ್ಪಿದ ಘಟನೆ ಸುಂಟಿಕೊಪ್ಪದಲ್ಲಿ ನಡೆದಿದೆ.

ಮೃತರನ್ನು ವಿನೋದ್ (34) ಎಂದು ಗುರುತಿಸಲಾಗಿದೆ. ಸಂಜೆ ಗುರುವಾರ ಐದು ಗಂಟೆ ವೇಳೆಗೆ ವಿನೋದ್ ಸುಂಟಿಕೊಪ್ಪದಲ್ಲಿರುವ ಖಾಸಗಿ ಕ್ಲಿನಿಕ್ಗೆ ಸೊಂಟ ನೋವಿನ ಚಿಕಿತ್ಸೆಗೆ ತೆರಳಿದ್ದರು ಎನ್ನಲಾಗಿದೆ. ವೈದ್ಯರು ಎರಡು ಇಂಜೆಕ್ಷನ್‌ಗಳನ್ನು ನೀಡಿದ್ದರು.

ಆದರೆ ಮನೆಗೆ ಹಿಂತಿರುಗುತ್ತಿದ್ದಂತೆಯೇ ವಿನೋದ್ ಅಸ್ವಸ್ಥಗೊಂಡು ಇದಕ್ಕಿದ್ದಂತೆ ಕುಸಿದಿದ್ದಾರೆ. ತಕ್ಷಣವೇ ಕುಟುಂಬದವರು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಕರೆತಂದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ವಿನೋದ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆಯ ನಂತರ ಮೃತರ ಬಂಧುಗಳು ಕ್ಲಿನಿಕ್ ಎದುರು ಆಕ್ರೋಶ ವ್ಯಕ್ತಪಡಿಸಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂಬ ಆರೋಪ ಮಾಡಿದ್ದಾರೆ. ಇಂಜೆಕ್ಷನ್ ನೀಡುವ ವೇಳೆ ಔಷಧಿಯ ದೋಷ ಅಥವಾ ತಪ್ಪು ಚಿಕಿತ್ಸೆ ನೀಡಿರಬಹುದು ಎಂದು ಶಂಕಿಸಿದ್ದಾರೆ.

ಘಟನಾ ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿನೋದ್‌ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೊಡಗು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.