ಪ್ರೇಯಸಿಯೊಂದಿಗೆ ಸಂಬಂಧದ ಶಂಕೆ: ಗೆಳೆಯನನ್ನು ಬೆತ್ತಲೆಗೊಳಿಸಿ ಬರ್ಬರ ಹತ್ಯೆ : ಎರಡು ತಿಂಗಳ ಬಳಿಕ ಆರೋಪಿ ಬಂಧನ

Dec 26, 2025 - 13:59
 0  1.5k
ಪ್ರೇಯಸಿಯೊಂದಿಗೆ ಸಂಬಂಧದ ಶಂಕೆ: ಗೆಳೆಯನನ್ನು ಬೆತ್ತಲೆಗೊಳಿಸಿ ಬರ್ಬರ ಹತ್ಯೆ :  ಎರಡು ತಿಂಗಳ ಬಳಿಕ ಆರೋಪಿ ಬಂಧನ
Photo credit: Etv bharath

ಬೆಳಗಾವಿ: ಪ್ರೇಯಸಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯಿಂದ ಗೆಳೆಯನನ್ನು ಅರೆಬೆತ್ತಲೆಗೊಳಿಸಿ ಕ್ರೂರವಾಗಿ ಹತ್ಯೆ ಮಾಡಿದ್ದ ಪ್ರಕರಣವನ್ನು ಎರಡು ತಿಂಗಳ ಬಳಿಕ ಪೊಲೀಸರು ಬೇಧಿಸಿದ್ದಾರೆ. ಅಕ್ಟೋಬರ್‌ 22ರಂದು ಗೋಕಾಕ್ ತಾಲೂಕಿನ ಘಟಪ್ರಭಾದಲ್ಲಿ ನಡೆದಿದ್ದ ತುಕಾರಾಮ್ ಶಿಂಘೆ ಕೊಲೆ ಪ್ರಕರಣದ ಆರೋಪಿ ಪ್ರದೀಪ್ ನಾಯಕನನ್ನು ಘಟಪ್ರಭಾ ಪೊಲೀಸರು ಬಂಧಿಸಿದ್ದಾರೆ.

ಅಥಣಿ ತಾಲೂಕಿನ ಮಹೇಶವಾಡಿ ಗ್ರಾಮದ ನಿವಾಸಿ ತುಕಾರಾಮ್ ಶಿಂಘೆ ಹತ್ಯೆಯಾದ ಯುವಕ. ಚಿಕ್ಕೋಡಿ ಪಟ್ಟಣದ ನಿವಾಸಿ ಪ್ರದೀಪ್ ನಾಯಕ ಬಂಧಿತ ಆರೋಪಿ. ಕೊಲೆಗೂ ಮುನ್ನ ತುಕಾರಾಮ್ ಜೊತೆ ಪ್ರದೀಪ್ ಸಂಚರಿಸುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಆರಂಭದಲ್ಲಿ ಮೃತದೇಹದ ಗುರುತು ಪತ್ತೆಯಾಗಿರಲಿಲ್ಲ. ಬಳಿಕ ಕೈಯಲ್ಲಿದ್ದ ಮಚ್ಚೆ ಹಾಗೂ ಬೆರಳಚ್ಚು ಆಧಾರದಲ್ಲಿ ಪೊಲೀಸರು ಮೃತನ ಗುರುತನ್ನು ದೃಢಪಡಿಸಿದ್ದರು.

ತುಕಾರಾಮ್ ರೈಲ್ವೆ ನಿಲ್ದಾಣಗಳಲ್ಲಿ ಖಾಲಿ ಬಾಟಲಿ ಸಂಗ್ರಹಿಸಿ ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದನು. ಈ ನಡುವೆ ಕೆಲ ಕಳ್ಳತನ ಪ್ರಕರಣಗಳಲ್ಲೂ ಆತ ಭಾಗಿಯಾಗಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಪ್ರದೀಪ್, ತುಕಾರಾಮ್ ಹಾಗೂ ಮಹಾರಾಷ್ಟ್ರ ಮೂಲದ ಆರೀಫ್ ಮೂವರು ಸ್ನೇಹಿತರು. ತುಕಾರಾಮ್ ಘಟಪ್ರಭಾದಲ್ಲಿ ಕೆಲಸ ಮಾಡುತ್ತಿದ್ದರೆ, ಪ್ರದೀಪ್ ಮಹಾರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದ.

ಪ್ರದೀಪ್ ಪ್ರೀತಿಸುತ್ತಿದ್ದ ಯುವತಿಯೊಂದಿಗೆ ತುಕಾರಾಮ್ ಸಂಬಂಧ ಬೆಳೆಸಿದ್ದಾನೆ ಎಂಬ ಮಾಹಿತಿ ಸ್ನೇಹಿತರ ಮೂಲಕ ತಿಳಿದ ನಂತರ, ಪ್ರದೀಪ್ ಕೊಲೆಗೆ ಸಂಚು ರೂಪಿಸಿದ್ದಾನೆ. ಕೊಲೆಗೆ ಮುನ್ನ ಆರೀಫ್ ಜೊತೆ ಬಾರ್‌ನಲ್ಲಿ ಪಾರ್ಟಿ ಮಾಡಿದ ಬಳಿಕ, ಪ್ರೇಯಸಿಯ ಎದುರೇ ತುಕಾರಾಮ್‌ನ್ನು ಅರೆಬೆತ್ತಲೆಗೊಳಿಸಿ ಹತ್ಯೆ ನಡೆಸಿದ್ದಾನೆ. ಈ ವಿಷಯ ಯಾರಿಗೂ ತಿಳಿಸದಂತೆ ಪ್ರೇಯಸಿಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವಕನ ಹತ್ಯೆ ಪ್ರಕರಣದಲ್ಲಿ ಆರೀಫ್‌ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಪ್ರದೀಪ್ ನಾಯಕನ ಮೇಲೆಯೇ ಶಂಕೆ ವ್ಯಕ್ತಪಡಿಸಿ ಆರೀಫ್ ಮಾಹಿತಿ ನೀಡಿದ್ದಾನೆ. ನಂತರ ಆರೀಫ್‌ನ್ನು ಬಿಡುಗಡೆ ಮಾಡಿ, ಪ್ರದೀಪ್ ಕುರಿತು ಸುಳಿವು ಸಿಕ್ಕರೆ ತಿಳಿಸುವಂತೆ ಪೊಲೀಸರು ಸೂಚಿಸಿದ್ದರು. ಪುಣೆ ಸಮೀಪದ ನೀರಾ ರೈಲ್ವೆ ನಿಲ್ದಾಣದಲ್ಲಿ ಪ್ರದೀಪ್ ಬಾಟಲಿ ಸಂಗ್ರಹಿಸುತ್ತಿರುವುದನ್ನು ಕಂಡ ಆರೀಫ್ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ರೈಲಿನಲ್ಲಿ ಪಲಾಯನಕ್ಕೆ ಯತ್ನಿಸಿದ ಪ್ರದೀಪ್, ಪೊಲೀಸರನ್ನು ಕಂಡು ಚಲಿಸುವ ರೈಲಿನಿಂದ ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಔಟ್‌ಪೋಸ್ಟ್ ಪೊಲೀಸರ ನೆರವಿನಿಂದ ಆರೋಪಿಯನ್ನು ಬಂಧಿಸುವಲ್ಲಿ ಘಟಪ್ರಭಾ ಪೊಲೀಸರು ಯಶಸ್ವಿಯಾಗಿದ್ದಾರೆ.

ತೀವ್ರ ವಿಚಾರಣೆಯಲ್ಲಿ ಪ್ರದೀಪ್ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೆ, 2022ರಲ್ಲಿ ಹುಬ್ಬಳ್ಳಿಯಲ್ಲಿ ಬುಲ್ಲಿ ಮಹಾದೇವ ಎಂಬವರನ್ನು ಕೊಲೆ ಮಾಡಿ ಚರಂಡಿಗೆ ಎಸೆದ ಪ್ರಕರಣವನ್ನೂ ತಾನೇ ನಡೆಸಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ. ಆ ಪ್ರಕರಣದಲ್ಲಿ ಸುಳಿವು ಸಿಗದ ಕಾರಣ ಹುಬ್ಬಳ್ಳಿ ರೈಲ್ವೆ ಪೊಲೀಸರು ಪ್ರಕರಣವನ್ನು ಮುಚ್ಚಿದ್ದರು. ತುಕಾರಾಮ್ ಕೊಲೆ ಪ್ರಕರಣದ ವಿಚಾರಣೆ ಬಳಿಕ ಪ್ರದೀಪ್‌ನ್ನು ಹುಬ್ಬಳ್ಳಿ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ. ಬಸರಗಿ ತಿಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 1
Sad Sad 0
Wow Wow 1