State News

ಪತ್ನಿ ಜತೆ ಅನೈತಿಕ ಸಂಬಂಧ ಶಂಕೆ: ತಮ್ಮನನ್ನೇ ಕೊಲೆ ಮಾಡಿ ಮುಚ್ಚಿ ಹಾಕಿದ ಅಣ್ಣ

admincoorgdaily

ಪತ್ನಿ ಜತೆ ಅನೈತಿಕ ಸಂಬಂಧ ಶಂಕೆ: ತಮ್ಮನನ್ನೇ ಕೊಲೆ ಮಾಡಿ ಮುಚ್ಚಿ ಹಾಕಿದ ಅಣ್ಣ

ಶಿವಮೊಗ್ಗ: ಪತ್ನಿ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯಿಂದ ಅಣ್ಣನೊಬ್ಬ ತನ್ನ ತಮ್ಮನನ್ನು ಕೊಲೆ ಮಾಡಿ ಶವವನ್ನು ಹೂತುಹಾಕಿದ ಘಟನೆ ಸೊರಬ ತಾಲ್ಲೂಕಿನ ಜೇಡಗೇರಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಆನವಟ್ಟಿ ಹೋಬಳಿ ಕಾನುಕೊಪ್ಪ ಹೊಸೂರು ಗ್ರಾಮದ ರಾಮಚಂದ್ರ (30) ಕೊಲೆಯಾದ ವ್ಯಕ್ತಿ. ಈ ಪ್ರಕರಣದಲ್ಲಿ ಆತನ ಹಿರಿಯ ಸಹೋದರ ಮಾಲತೇಶ್ ಆರೋಪಿಯಾಗಿದ್ದಾನೆ.

ರಾಮಚಂದ್ರ ಸೆಪ್ಟೆಂಬರ್ 8ರಂದು ಮನೆಯಿಂದ ನಾಪತ್ತೆಯಾಗಿದ್ದ. ಕೆಲ ದಿನಗಳ ಬಳಿಕ ಆತನ ತಾಯಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಆರಂಭದಲ್ಲಿ ಕಾಣೆಯಾದ ಪ್ರಕರಣವಾಗಿ ದಾಖಲಿಸಿಕೊಂಡ ಪೊಲೀಸರು, ತನಿಖೆ ವೇಳೆ ಉಂಟಾದ ಸಂಶಯಗಳ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸಿದರು. ಈ ಸಂದರ್ಭದಲ್ಲಿ ರಾಮಚಂದ್ರನ ಸಹೋದರ ಮಾಲತೇಶ್‌ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ರಾಮಚಂದ್ರ ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯೇ ಕೊಲೆಗೆ ಕಾರಣವಾಗಿದೆ. ಆರೋಪಿ ಮಾಲತೇಶ್ ಜೇಡಗೇರಿ ಗ್ರಾಮದಲ್ಲಿರುವ ವ್ಯಕ್ತಿಯೊಬ್ಬರಿಗೆ ಸೇರಿದ ತೋಟದಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದ. ಅಲ್ಲಿಗೆ ರಾಮಚಂದ್ರನನ್ನು ಕರೆಸಿಕೊಂಡು ಮದ್ಯಪಾನ ಮಾಡಿಸಿ, ಕೈಕಾಲು ಕಟ್ಟಿದ ಬಳಿಕ ಕೊಲೆ ಮಾಡಿ, ಮುಂಚಿತವಾಗಿ ತೋಡಿದ್ದ ಗುಂಡಿಯಲ್ಲಿ ಶವವನ್ನು ಹೂತುಹಾಕಿದ್ದಾನೆ ಎನ್ನಲಾಗಿದೆ.

ಮಂಗಳವಾರ ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.