ಕೊಡಗಿನಲ್ಲಿ ಸರ್ಕಾರ ಮೋಡ ಬಿತ್ತನೆ ಮಾಡಬಾರದು:ಬಿಜೆಪಿ ಮಂಡಲ ಕೃಷಿ ಮೋರ್ಚಾ ಒತ್ತಾಯ

Aug 25, 2026 - 14:00
 0  131
ಕೊಡಗಿನಲ್ಲಿ ಸರ್ಕಾರ ಮೋಡ ಬಿತ್ತನೆ ಮಾಡಬಾರದು:ಬಿಜೆಪಿ ಮಂಡಲ ಕೃಷಿ ಮೋರ್ಚಾ ಒತ್ತಾಯ

ಸೋಮವಾರಪೇಟೆ:ಕೊಡಗಿನಲ್ಲಿ ಮೋಡಬಿತ್ತನೆ ಮಾಡಿದರೆ ಕೃಷಿ ಫಸಲಿನ ಮೇಲೆ ದುಷ್ಪರಿಣಾಮ ಬೀರಲಿದ್ದು, ಸರ್ಕಾರ ಮೋಡಬಿತ್ತನೆ ಮಾಡಬಾರದು ಎಂದು ಬಿಜೆಪಿ ಮಂಡಲ ಕೃಷಿಮೋರ್ಚಾ ಒತ್ತಾಯಿಸಿದೆ.

ಮೋಡ ಬಿತ್ತನೆಯಿಂದ ಸುರಿಯುವ ಮಳೆ ನೀರು ಕೆಮಿಕಲ್ ಮಿಶ್ರಿತವಾಗಿರುವ ಆತಂಕ ಜಿಲ್ಲೆಯ ರೈತರಲ್ಲಿ ಮೂಡಿದೆ. ರೈತರೆ ಕಾಫಿ, ಕಾಳುಮೆಣಸು ಬೆಳೆಯುತ್ತಿದ್ದು, ಬೆಳೆ ಹಾನಿಯ ಆತಂಕ ಎದುರಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಎಂ.ಬಿ.ಅಭಿಮನ್ಯು ಕುಮಾರ್ ಹೇಳಿದರು. 

ಹವಾಮಾನ ಏರುಪೇರು ಆದರೆ, ಕಾಫಿ ಫಸಲು ಹಾನಿಯಾಗುತ್ತದೆ. ಆಗಸ್ಟ್ ತಿಂಗಳಲ್ಲಿ ವಿಪರೀತ ಮಳೆಯಾದರೆ ಕಾಫಿ ಗಿಡಗಳಿಗೆ ಕೊಳೆರೋಗ ವ್ಯಾಪಿಸಿ ಕಾಫಿ ಉದುರುತ್ತದೆ. ಹೊರರಾಜ್ಯಗಳಿಗೆ ಉಪಯೋಗ ಮಾಡಿಕೊಡಲು ಕೊಡಗಿನಲ್ಲಿ ಮೋಡ ಬಿತ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ ಅಭಿಮನ್ಯುಕುಮಾರ್, ಸರ್ಕಾರಕ್ಕೆ ಕೊಡಗಿಗೆ ಒಂದು ಮಂತ್ರಿ ಸ್ಥಾನ ಕೊಡಲು ಸಾಧ್ಯವಿಲ್ಲ. ಅಭಿವೃದ್ಧಿಗೆ ಪೂರಕವಾಗಿ ಅನುದಾನ ಕೊಡುವುದಿಲ್ಲ. ಆದರೆ ಕೊಡಗಿನಲ್ಲಿ ಮೋಡಬಿತ್ತನೆ ಮಾಡಿ, ಅಣೆಕಟ್ಟುಗಳನ್ನು ತುಂಬಿಸುವ ಪ್ರಯತ್ನಕ್ಕೆ ಮುಂದಾಗುವುದು ಖಂಡನೀಯ ಎಂದು ಹೇಳಿದರು. ಜಿಲ್ಲೆಯ ಶಾಸಕದ್ವಯರು ಮೋಡಬಿತ್ತನೆಗೆ ಒಪ್ಪಿಗೆ ಸೂಚಿಸಬಾರದು ಎಂದು ಮನವಿ ಮಾಡಿದರು. 

ಕೃಷಿಮೋರ್ಚಾ ಮಂಡಲ ಅಧ್ಯಕ್ಷ ಮಚ್ಚಂಡ ಪ್ರಕಾಶ್ ಮಾತನಾಡಿ, ಕೊಡಗಿನಲ್ಲಿ ಕಳೆದ ಮೂರು ವರ್ಷಗಳಿಂದ ಅಕಾಲಿಕ ಮಳೆಯಿಂದ ನಿರಂತರವಾಗಿ ಕಾಫಿ, ಕಾಳುಮೆಣಸು ಇತರ ತೋಟಗಾರಿಕಾ ಬೆಳೆಗಳ ಫಸಲು ಹಾನಿಯಾಗುತ್ತಿದೆ. ಬೆಳೆಹಾನಿಗೆ ಯಾವುದೇ ಪರಿಹಾರ ನೀಡದೆ, ಸರ್ಕಾರ ರೈತವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಉತ್ತರ ಕರ್ನಾಟಕದಲ್ಲಿ ಮೋಡಬಿತ್ತನೆ ಮಾಡಿದರೆ ನಮ್ಮ ಅಭ್ಯಂತರವಿಲ್ಲ. ಆದರೆ ಕೊಡಗಿನಲ್ಲಿ ಮೋಡಬಿತ್ತನೆ ಬೇಡ ಎಂದು ಹೇಳಿದರು.

 ಬಿಜೆಪಿ ಸರ್ಕಾರವಿದ್ದಾಗ ಹೆಕ್ಟೇರ್‌ಗೆ 50 ಸಾವಿರ ರೂ.ಗಳ ಬೆಳೆಹಾನಿ ಪರಿಹಾರವನ್ನು ನೀಡಿತ್ತು. ಗ್ಯಾರೆಂಟಿ ಹೆಸರಿನಲ್ಲಿ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ರೈತರಿಗೆ ಸೂಕ್ತ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ದೂರಿದರು.

ಗೋಷ್ಠಿಯಲ್ಲಿ ಮೋರ್ಚಾದ ಉಪಾಧ್ಯಕ್ಷ ರಕ್ಷಿತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರತ್‌ಚಂದ್ರ, ಕಾರ್ಯದರ್ಶಿ ವಿನೋದ್ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0