ಹರಕೆಯ ತಗಡು ಬಿಚ್ಚಿಟ್ಟ ಕೊಲೆಯ ರಹಸ್ಯ: ದೊಣ್ಣೆಯಿಂದ ಥಳಿಸಿ ಪತ್ನಿಯ ಕೊಲೆ ಮಾಡಿದ್ದ ಪತಿ

Oct 15, 2025 - 11:26
Oct 15, 2025 - 12:49
 0  1.6k
ಹರಕೆಯ ತಗಡು ಬಿಚ್ಚಿಟ್ಟ ಕೊಲೆಯ ರಹಸ್ಯ: ದೊಣ್ಣೆಯಿಂದ ಥಳಿಸಿ ಪತ್ನಿಯ ಕೊಲೆ ಮಾಡಿದ್ದ ಪತಿ
Photo credit: TV09

ಚಿಕ್ಕಮಗಳೂರು, ಅ.15: ಒಂದೂವರೆ ತಿಂಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಗೃಹಿಣಿಯೊಬ್ಬರ ಪ್ರಕರಣ ಕೊಲೆ ಎಂದು ಬಯಲಾಗಿದೆ. ದೇವರ ಮರಕ್ಕೆ ಹೊಡೆದಿದ್ದ ಹರಕೆಯ ತಗಡಿನ ಮೂಲಕ ಈ ಭೀಕರ ಘಟನೆಯ ಸತ್ಯ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಆಲಘಟ್ಟ ಗ್ರಾಮದ ಭಾರತಿ (28) ನಾಪತ್ತೆಯಾಗಿದ್ದ ಗೃಹಿಣಿ. ಪತ್ನಿ ತವರು ಮನೆಯಿಂದ ₹2 ಲಕ್ಷ ರೂಪಾಯಿ ತರಲಿಲ್ಲ ಎಂಬ ಕಾರಣಕ್ಕೆ ಪತಿ ವಿಜಯ್‌ನೊಂದಿಗೆ ವಾಗ್ವಾದ ನಡೆದಿತ್ತು. ವಾಗ್ವಾದದ ವೇಳೆ ಕೋಪಗೊಂಡ ವಿಜಯ್ ದೊಣ್ಣೆಯಿಂದ ಹೊಡೆದ ಪರಿಣಾಮ ಭಾರತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರ ಬಂಧನದ ಭಯದಿಂದ ವಿಜಯ್ ತನ್ನ ತಂದೆ ಗೋವಿಂದಪ್ಪನ ಸಹಾಯದಿಂದ ಪತ್ನಿಯ ಶವವನ್ನು ತೋಟದಲ್ಲಿದ್ದ ಕೊಳವೆ ಬಾವಿಯಲ್ಲಿ ಹೂತುಹಾಕಿದ. ಬಳಿಕ, ಪತ್ನಿ ನಾಪತ್ತೆಯಾಗಿದ್ದಾಳೆ ಎಂಬ ನಾಟಕವಾಡಿ ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಹರಕೆಯ ತಗಡೇ ಬಿಚ್ಚಿಟ್ಟ ಸತ್ಯ ಭಾರತಿಯ ಅಣ್ಣ ಮಾರುತಿಗೆ ತಂಗಿಯ ನಾಪತ್ತೆ ಕುರಿತು ಶಂಕೆ ಇದ್ದು, ಹುಡುಕಾಟ ಮುಂದುವರಿಸುತ್ತಿದ್ದರು. ಈ ನಡುವೆ ವಿಜಯ್ ಅವರನ್ನು ಪೂಜೆಗಾಗಿ ಚಟ್ನಪಾಳ್ಯದ ಚೌಡೇಶ್ವರಿ ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ಮರಕ್ಕೆ ಹೊಡೆದಿದ್ದ ಹರಕೆಯ ತಗಡಿನಲ್ಲಿ “ನಾನು ನನ್ನ ಹೆಂಡತಿ ಭಾರತಿಯನ್ನ ಕೊಂದಿದ್ದೇನೆ, ಅವಳು ಪ್ರೇತವಾಗಿ ಕಾಡಬಾರದು” ಎಂಬ ಬರಹ ಕಂಡುಬಂದಿದೆ.

ಈ ದೃಶ್ಯ ಕಂಡ ಮಾರುತಿ ತಕ್ಷಣ ಕಡೂರು ಠಾಣೆಯ ಇನ್ಸ್‌ಪೆಕ್ಟರ್ ರಫೀಕ್ ಅವರಿಗೆ ಮಾಹಿತಿ ನೀಡಿದ್ದಾರೆ. ತನಿಖೆಗೆ ಮುಂದಾದ ಪೊಲೀಸರು ವಿಜಯ್, ಅವನ ತಂದೆ ಗೋವಿಂದಪ್ಪ ಮತ್ತು ತಾಯಿ ತಾಯಮ್ಮರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಸತ್ಯ ಬಹಿರಂಗವಾಗಿದೆ.

 ಹಣಕ್ಕಾಗಿ ಪತ್ನಿ ಬಲಿ ವಿಜಯ್ ತನ್ನ ಕಾರಿನ ಸಾಲ ತೀರಿಸಲು ಪತ್ನಿಯಿಂದ ₹2 ಲಕ್ಷ ತರಬೇಕೆಂದು ಒತ್ತಾಯಿಸಿದ್ದ. ಹಣ ತರದ ಕಾರಣದಿಂದಲೇ ಈ ಭೀಕರ ಹತ್ಯೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ನಂತರ ಪೂಜೆ, ಹೋಮ, ಬಲಿ ಮುಂತಾದ ಆಚರಣೆಗಳ ಮೂಲಕ ಪಾಪ ಪರಿಹಾರಕ್ಕೆ ಯತ್ನಿಸಿದ ಕುಟುಂಬ ಕೊನೆಗೆ ಪೊಲೀಸರ ಬಲೆಗೆ ಸಿಕ್ಕಿದೆ.

 ಈ ಪ್ರಕರಣದಲ್ಲಿ ಗಂಡ ವಿಜಯ್, ತಂದೆ ಗೋವಿಂದಪ್ಪ ಹಾಗೂ ತಾಯಿ ತಾಯಮ್ಮರನ್ನು ಪೊಲೀಸರು ಬಂಧಿಸಿದ್ದು, ಮುಂದಿನ ತನಿಖೆ ಮುಂದುವರಿದಿದೆ.

What's Your Reaction?

Like Like 3
Dislike Dislike 1
Love Love 1
Funny Funny 0
Angry Angry 1
Sad Sad 1
Wow Wow 3