ಬಿ.ಪಿ.ಎಲ್ ಪಡಿತರ ಕಾರ್ಡ್ ಪಡೆಯಲು 1.25 ಲಕ್ಷದ ಒಳಗೆ ಆದಾಯ ಹೊಂದಿರುವವರು ಮಾತ್ರ ಬಡವರು ಎಂದು ನಿಯಮ ಜಾರಿ ಮಾಡಿರುವುದು ನಾಗರಿಕ ಸೇವೆಯ ಪರಿಕಲ್ಪನೆಗೆ ವಿರುದ್ಧ;SDPI ಆರೋಪ
ಮಡಿಕೇರಿ: ವಿಶೇಷ ಆರ್ಥಿಕ ದುರ್ಬಲ ವರ್ಗದ ಆರ್ಥಿಕ ಮಿತಿ ೮ ಲಕ್ಷಕ್ಕೆ ನಿಗದಿಪಡಿಸಿರುವ ಸರ್ಕಾರ ಬಿ.ಪಿ.ಎಲ್ ಪಡಿತರ ಕಾರ್ಡ್ ಪಡೆಯಲು ೧.೨೫ ಲಕ್ಷದ ಒಳಗೆ ಆದಾಯ ಹೊಂದಿರುವವರು ಮಾತ್ರ ಬಡವರು ಎಂದು ನಿಯಮ ಜಾರಿ ಮಾಡಿರುವುದು ನಾಗರಿಕ ಸೇವೆಯ ಪರಿಕಲ್ಪನೆಗೆ ವಿರುದ್ಧವಾಗಿದೆ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಅಮಿನ್ ಮೊಯಿಸಿನ್ ಹೇಳಿದರು.
ನಾಗರಿಕ ಸೇವೆ, ಬಡತನ ನಿರ್ಮೂಲನೆ, ಆಹಾರ, ಆರೋಗ್ಯ ಭದ್ರತೆ, ಶಿಕ್ಷಣ, ಉದ್ಯೋಗಕ್ಕೆ ಉತ್ತೇಜನೆ ಪ್ರತಿ ಸರ್ಕಾರದ ಜವಾಬ್ದಾರಿಯಾಗಿದೆ. ಜತೆಗೆ ಕಲ್ಯಾಣ ರಾಜ್ಯದ ಪರಿಕಲ್ಪನೆಗೆ ಒತ್ತುಕೊಟ್ಟು ನಾಗರಿಕ ಸೇವೆಗೆ ಸರ್ಕಾರಗಳು ಮುತುವರ್ಜಿ ವಹಿಸಬೇಕು. ಆದರೆ, ವಿಶೇಷ ಆರ್ಥಿಕ ದುರ್ಬಲ ವರ್ಗದ ಆರ್ಥಿಕ ಮಿತಿ ೮ ಲಕ್ಷಕ್ಕೆ ನಿಗದಿಪಡಿಸಿರುವ ಸರ್ಕಾರ ಬಿ.ಪಿ.ಎಲ್ ಪಡಿತರ ಕಾರ್ಡ್ ಪಡೆಯಲು ೧.೨೫ ಲಕ್ಷದ ಒಳಗೆ ಆದಾಯ ಹೊಂದಿರುವವರು ಮಾತ್ರ ಬಡವರು ಎಂದು ನಿಯಮ ಜಾರಿ ಮಾಡಿರುವುದು ನಾಗರಿಕ ಸೇವೆಯ ಪರಿಕಲ್ಪನೆಗೆ ವಿರುದ್ಧವಾಗಿದೆ.
ಉಚಿತ ಗ್ಯಾರಂಟಿ ಯೋಜನೆಯನ್ನು ನೆಪವಾಗಿಟ್ಟುಕೊಂಡು ಅರ್ಹ ಬಿ.ಪಿ.ಎಲ್ ಕಾರ್ಡ್‌ಗಳನ್ನು ಆದಾಯ ತೆರಿಗೆ ಸಲ್ಲಿಕೆಯ ನೆಪವನ್ನು ಮುಂದಿಟ್ಟುಕೊಂಡು ಬಡವರ ಬಿ.ಪಿ.ಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ೪,೫೦೦ ಬಿ.ಪಿ.ಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಿದೆ. ಈ ಪ್ರಕ್ರಿಯೆ ಮುಂದುವರಿಸುತ್ತಿರುವುದು ಸರಿಯಲ್ಲ. ರದ್ದುಗೊಳಿಸಿದ ಬಿ.ಪಿ.ಎಲ್ ಕಾರ್ಡ್‌ಗಳನ್ನು ಮರಳಿ ನೀಡಬೇಕು ಎಂದು ಆಗ್ರಹಿಸಿದರು.
೨೦೨೬-೨೭ರ ಕರ್ನಾಟಕದ ಬಜೆಟ್‌ನಲ್ಲಿ ಕೊಡಗಿನ ಅಭಿವೃದ್ಧಿಗೆ ರೂ.೫೦೦ ಕೋಟಿಗಳ ವಿಶೇಷ ಪ್ಯಾಕೆಜ್ ಘೋಷಣೆ ಮಾಡಬೇಕು. ಪ್ರವಾಸೋದ್ಯಮದ ಅಭಿವೃದ್ಧಿಗೆಂದು ರೂ.೨.೫೦೦ ಕೋಟಿ ಬಿಡುಗಡೆಗೊಳಿಸಬೇಕು. ಕೊಡಗಿಗೆ ಅತೀ ಅಗತ್ಯವಾಗಿರುವ ರೈಲು ಸಂಪರ್ಕವನ್ನು ಕೇಂದ್ರ ಹಾಗೂ ರಾಜ್ಯದ ಪ್ರತಿಷ್ಠೆಯ ಕಿತ್ತಾಟದಿಂದ ಕೈ ಬಿಡಲಾಗಿದೆ.
ಈ ಬಜೆಟ್‌ನಲ್ಲಿ ಕೊಡಗಿಗೆ ರೈಲು ಸಂಪರ್ಕಕ್ಕಾಗಿ ಬೇಕಿರುವ ಅನುದಾನವನ್ನು ಕರ್ನಾಟಕ ಸರ್ಕಾರ ಮೀಸಲಿಟ್ಟು ಪ್ರಕ್ರಿಯೆ ಪ್ರಾರಂಭಿಸಬೇಕಾಗಿ ಕೇಂದ್ರದ ಎಲ್ಲಾ ಸಹಕಾರಕ್ಕೆ ಕೊಡಗಿನ ಲೋಕಸಭಾ ಸದಸ್ಯರು ಪ್ರಯತ್ನಿಸಬೇಕು. ತುರ್ತು ಆರೋಗ್ಯ ಸೇವೆಗಾಗಿ ಏರ್ ಆಂಬ್ಯುಲೆನ್ಸ್ ನೀಡಬೇಕು. ಜಿಲ್ಲೆಯಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗಾಗಿ ಅನುದಾನ ಮೀಸಲಿಡಬೇಕು. ವನ್ಯಜೀವಿ ಹಾಗೂ ಮಾನವ ಸಂಘರ್ಷಣೆಯಿಂದಾಗಿ ಪ್ರಾಣಹಾನಿ ಹಾಗೂ ಕೃಷಿನಷ್ಟ ಸಂರಕ್ಷಿಸಲು ವಿಶೇಷ ಅನುದಾನ ಹಾಗೂ ಶಾಶ್ವತ ಪರಿಹಾರ ಸೂತ್ರ ಕಂಡುಕೊಳ್ಳಬೇಕು. ಕಾವೇರಿ ನದಿ ಕಲ್ಮಷ ತಡೆಗಟ್ಟಲು ಯೋಜನೆ ರೂಪಿಸಬೇಕು. ರೈತರ ಭೂಮಿಯನ್ನು ಸಿ ಮತ್ತು ಡಿ ವೃತ್ತಿಗೆ ತಂದು ಸೆಕ್ಷನ್ ೪ರ ಅಡಿಯಲ್ಲಿ ಸರ್ವೆಗೆ ಮುಂದಾಗಿರುವ ಪ್ರಕ್ರಿಯೆಯನ್ನು ಕೈ ಬಿಟ್ಟು ಇದರಿಂದಾಗಿರುವ ಸಮಸ್ಯೆ ನಿವಾರಣೆ ಆಗುವವರೆಗೂ ನೊಂದ ರೈತರಿಗೆ ರೂ.೨೫೦೦೦/- ಮಾಸಿಕ ಮಾಶಾಸನ ಜಾರಿ ಮಾಡಬೇಕು. ಬಾಕಿ ಇರುವ ನಮೂನೆ ೫೦,೫೩,೫೭,೯೪ಸಿ ಹಾಗೂ ೯೪ಸಿಸಿ ತುರ್ತಾಗಿ ವಿಲೇಗೊಳಿಸಲು ಫಾಸ್ಟ್‌ಟ್ರಾಕ್ ಸಮಿತಿ ರಚಿಸಬೇಕು. ಮಡಿಕೇರಿ ನಗರ ನಿವೇಶನ ರಹಿತ ನಿವಾಸಿಗಳಿಗೆ ನಿವೇಶನ ಗುರುತಿಸಿ ವಸತಿ ಸೌಲ್ಯಭ್ಯ ಒದಗಿಸಬೇಕು. ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ರೂ.೧೫೦೦೦ ಕೋಟಿ ಮೀಸಲಿಡಬೇಕು. ಕಳೆದ ಎರಡು ವರ್ಷಗಳಲ್ಲಿ ಘೋಷಿತ ಹಲವಾರು ಯೋಜನೆಗಲು ಸಮರ್ಪಕವಾಗಿ ಜಾರಿಯಾಗದಿರುವುದು ಆತಂಕಕಾರಿಯಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಲಾದ ೧೩೪ ಭರವಸೆಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಸಮಗ್ರವಾಗಿ ಈಡೇರಿಸುವ ಮೂಲಕ ಸರ್ಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.
ಮಡಿಕೇರಿ ನಗರದಲ್ಲಿ ತಲೆದೋರಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ನಗರಸಭೆಯ ಆಡಳಿತ ವಿಫಲವಾಗಿದೆ.
ಮಡಿಕೇರಿ ನಗರದ ಬಹುತೇಕ ರಸ್ತೆಯ ಎರಡು ಬದಿಗಳಲ್ಲಿ ಅಮೃತ್ ೨.೦ ನೀರಿನ ಪೈಪ್ ಅಳವಡಿಸಲು ಅಗೆದಿದ್ದು ನಗರ ಪೂರ್ತಿ ದೂಳು ಆವರಿಸಿಕೊಂಡಿದೆ. ಹೆಚ್ಚಿನ ರಸ್ತೆಗಳು ಓಡಾಡದ ಸ್ಥಿತಿಯಲ್ಲಿದೆ. ಆಡಳಿತ ಪಕ್ಷ ಕಳೆದ ಹತ್ತು ತಿಂಗಳಿನಲ್ಲಿ ಕೇವಲ ೪ ಸಾಮಾನ್ಯ ಸಭೆಯನ್ನು ಕರೆಯಲಾಗಿ ೪ ಸ್ಥಾಯಿ ಸಮಿತಿ ರಚನೆಯಾಗಿ ೨ ತಿಂಗಳಾದರೂ ಒಂದೇ ಒಂದು ಸಭೆ ಕರೆಯಲಿಲ್ಲ. ಒಟ್ಟಾರೆ ಕಳೆದ ೫ ತಿಂಗಳ ಆಡಳಿತ ನಡೆಸಿದ ಬಿ.ಜೆ.ಪಿ ಪಕ್ಷ ನಗರ ಅಭಿವೃದ್ಧಿ ಪಡಿಸುವ ಸುವರ್ಣ ಅವಕಾಶವನ್ನು ಕಳೆದುಕೊಂಡಿದೆ. ತಮ್ಮ ಸ್ವಾರ್ಥತೆ, ಭಿನ್ನಭಿಪ್ರಾಯ, ಬಣ ರಾಜಕೀಯದಿಂದಾಗಿ ನಗರದ ಜನತೆ ತಮಗೆ ದಕ್ಕಬೇಕಾದ ಮೂಲ ಸೌಕರ್ಯದಿಂದ ವಂಚಿತರಾಗಿದ್ದಾರೆ. ಬಿ.ಜೆ.ಪಿಯ ಆಡಳಿತ ಅವಧಿಗಿಂತ ಹೆಚ್ಚಾಗಿ ಜಿಲ್ಲಾಧಿಕಾರಿಯ ಆಡಳಿತ ಅವಧಿ ಹೆಚ್ಚು ಅಭಿವೃದ್ಧಿ ಕಂಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ಪ್ರಮುಖರಾದ ಮನ್ಸೂರ್ ಅಲಿ, ಆಲಿ, ಮೇರಿ ವೇಗಸ್, ಜಲೀಲ್ ಇದ್ದರು.