ಓಣಂ ಹಬ್ಬದ ಹತ್ತು ದಿನದ ಆಚರಣೆಯ ವಿಶೇಷತೆ
ವಿಶೇಷ ಲೇಖನ:ಶಾರದಾ ಕಣ್ಣನ್
ಓಣಂ ಎಂಬುದು ಭಾರತೀಯ ಪಂಚಾಂಗದ ಶ್ರಾವಣ ಮಾಸದಲ್ಲಿ ಬರುವ ಹಬ್ಬವಾಗಿದೆ. ಅಥಂ ದಿನದಿಂದ ಪ್ರಾರಂಭವಾಗುವ ಈ ಆಚರಣೆಯು ತಿರುವೋಣಂ ದಿನದಂದು ಮುಕ್ತಾಯಗೊಳ್ಳುತ್ತದೆ. ಚಂದ್ರನು ಆಕಾಶದಲ್ಲಿ ಸಂಚರಿಸುವಾಗ ಕ್ರಮಿಸುವ ನಕ್ಷತ್ರಗಳ ಅನುಕ್ರಮದ ಪ್ರಕಾರ ಪ್ರತಿ ದಿನ ಒಂದೊಂದು ನಕ್ಷತ್ರದ ಹೆಸರಿನಿಂದ ಆ ದಿನಗಳನ್ನು ಕರೆಯಲಾಗುತ್ತದೆ.
ಮೊದಲನೇ ದಿನ ಅಥಂ
ಓಣಂ ಹಬ್ಬದ ಅಧಿಕೃತ ಆರಂಭ. ಮನೆಯ ಮುಂದೆ ಹೂವಿನ ರಂಗೋಲಿ (ಪೂಕೋಲಂ) ಹಾಕುವುದು ಈ ದಿನದಿಂದ ಪ್ರಾರಂಭವಾಗುತ್ತದೆ. ಮೊದಲ ದಿನ ಕೇವಲ ಹಳದಿ ಬಣ್ಣದ ಹೂಗಳನ್ನು ಬಳಸಿ ಸಣ್ಣದಾಗಿ ರಂಗೋಲಿ ಹಾಕಲಾಗುತ್ತದೆ. ಈ ಹೂವಿನ ರಂಗೋಲಿಯು ಸ್ವಾಗತ ಮತ್ತು ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ. ಈ ದಿನ ಮಹಾಬಲಿ ರಾಜನು ಪಾತಾಳ ಲೋಕದಿಂದ ಭೂಮಿಗೆ ತನ್ನ ಪಯಣವನ್ನು ಪ್ರಾರಂಭಿಸುತ್ತಾನೆ ಎಂಬ ನಂಬಿಕೆ ಇದೆ.
ಎರಡನೇ ದಿನ ಚಿತ್ತಿರ
ಈ ದಿನ ಮನೆ ಮತ್ತು ಪರಿಸರವನ್ನು ಸ್ವಚ್ಛಗೊಳಿಸಲಾಗುತ್ತದೆ. ಹೂವಿನ ರಂಗೋಲಿಗೆ ಮತ್ತಷ್ಟು ಹೊಸ ವಿನ್ಯಾಸ ಮತ್ತು ಹೆಚ್ಚುವರಿ ಹೂಗಳ ಪದರಗಳನ್ನು ಸೇರಿಸಲಾಗುತ್ತದೆ.
ಮೂರನೇ ದಿನ ಚೋದಿ
ಈ ದಿನದಿಂದ ಹಬ್ಬಕ್ಕಾಗಿ ಕುಟುಂಬದ ಸದಸ್ಯರಿಗೆ ಹೊಸ ಬಟ್ಟೆಗಳು (ಓಣಕ್ಕೋಡಿ), ಆಭರಣಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಪ್ರಾರಂಭಿಸುತ್ತಾರೆ. ಪುರುಷರು ಸಾಮಾನ್ಯವಾಗಿ ಪಂಚೆ (ಮುಂಡು) ಧರಿಸುತ್ತಾರೆ. ಆದರೆ ಮಹಿಳೆಯರು ಕಸವು ಸೀರೆಗಳನ್ನು ಅಂದರೆ ಚಿನ್ನದ ಅಂಚುಗಳನ್ನು ಹೊಂದಿರುವ ಬಿಳಿ ಸೀರೆಗಳನ್ನು ಧರಿಸುತ್ತಾರೆ. ಇದು ಕೇರಳದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಂಕೇತಿಸುತ್ತದೆ.
ನಾಲ್ಕನೇ ದಿನ ವಿಶಾಕಂ
ಹಬ್ಬದ ತಯಾರಿ ಮತ್ತು ಮಾರುಕಟ್ಟೆಯ ಸಂಭ್ರಮ ಈ ದಿನದಂದು ನಡೆಯುತ್ತದೆ. ಹಬ್ಬದ ಪ್ರಮುಖ ಅಡುಗೆಯಾದ ಓಣಂ ಸದ್ಯ ಕ್ಕೆ ಬೇಕಾಗುವ ಸಾಮಗ್ರಿಗಳ ತಯಾರಿಯನ್ನು ಈ ದಿನದಿಂದಲೇ ಆರಂಭಿಸಲಾಗುತ್ತದೆ. ಮಾರುಕಟ್ಟೆಯಲ್ಲಿ ತಾಜಾ ತರಕಾರಿಗಳ ಮಾರಾಟ ಜೋರಾಗಿರುತ್ತದೆ.
ಐದನೇ ದಿನ ಅನಿಯಂ
ಕೇರಳದ ಪ್ರಸಿದ್ಧ ಹಾವು ದೋಣಿ ಓಟವು (ವಲ್ಲಂಕಳಿ, ಬೋಟ್ ರೇಸ್) ಈ ಸಮಯದಲ್ಲಿ ಸಂಭ್ರಮದಿಂದ ಜರುಗುತ್ತದೆ. ಇದು ಓಣಂನ ಪ್ರಮುಖ ಆಕರ್ಷಣೆಯಾಗಿರುವುದರಿಂದ ಈ ಆಟವನ್ನು ನೋಡಲು ವಿದೇಶದಿಂದ ಕೂಡ ಜನರು ಆಗಮಿಸುತ್ತಾರೆ.
ಆರನೇ ದಿನ ತೃಕ್ಕೇಟ
ಈ ದಿನದಂದು ಕುಟುಂಬಗಳ ಸಮ್ಮಿಲನ ನಡೆಯುತ್ತದೆ. ಜನರು ತಮ್ಮ ಮನೆತನದ (ಪೂರ್ವಜರ) ಮನೆಗೆ ಬೇಟಿ ನೀಡಿ ಸಂಬಂಧಿಕರು ಮತ್ತು ಹಿರಿಯರೊಂದಿಗೆ ಸಮಯ ಕಳೆಯುತ್ತಾರೆ ಹಾಗೂ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.
ಏಳನೇ ದಿನ ಮೂಲಂ
ಸಾಂಸ್ಕೃತಿಕ ಕಲಾ ಪ್ರಕಾರಗಳು ಈ ದಿನದಿಂದ ಆರಂಭವಾಗುತ್ತದೆ. ದೇವಾಲಯಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಾಂಪ್ರದಾಯಿಕ ಪುಲಿಕಳಿ (ಹುಲಿ ವೇಷ ಹಾಕಿ ನೃತ್ಯ ಮಾಡುವಂತದ್ದು), ಕೈಕೊಟ್ಟಿ ಕಳಿ(ಕೈ ತಟ್ಟಿ ಆಡುವ ನೃತ್ಯ/ಚಪ್ಪಾಳೆ ನೃತ್ಯ) ಪ್ರಾರಂಭವಾಗುತ್ತದೆ. ಪೂಕೋಲಂ ನ ವಿನ್ಯಾಸವು ದೊಡ್ಡದಾಗುತ್ತದೆ.
ಎಂಟನೇ ದಿನ ಪೂರಡಂ
ಓಣತ್ತಪ್ಪನ್ ಪ್ರತಿಷ್ಠಾಪನೆ ಈ ದಿನದಂದು ನಡೆಯುತ್ತದೆ. ಮಣ್ಣಿನಿಂದ ಮಾಡಿದ ಮಹಾಬಲಿ ಮತ್ತು ವಾಮನನ ವಿಗ್ರಹಗಳನ್ನು ಪೂಕೋಲಂ ನ ಮಧ್ಯದಲ್ಲಿ ಇಟ್ಟು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಗಣೇಶ ಚತುರ್ಥಿ ಉತ್ಸವದಂದು ಹಿಂದೂಗಳು ಮಣ್ಣಿನ ಗಣೇಶ ಮೂರ್ತಿಗಳನ್ನು ಸ್ಥಾಪಿಸುವ ರೀತಿಯಲ್ಲಿ ಓಣಂ ಸಮಯದಲ್ಲಿ ಹಿಂದೂ ಕೇರಳೀಯರು ಓಣತ್ತಪ್ಪನ್ ನ (ವಾಮನ ಸ್ವರೂಪದಲ್ಲಿರುವ ವಿಷ್ಣು) ಮಣ್ಣಿನ ಮೂರ್ತಿಯೊಂದನ್ನು ತಮ್ಮ ತಮ್ಮ ಮನೆಗಳಲ್ಲಿ ಸ್ಥಾಪಿಸಿ ಪೂಜಿಸುತ್ತಾರೆ.
ಒಂಬತ್ತನೇ ದಿನ ಉತ್ರಾಡಂ
ಪ್ರಮುಖ ಆಚರಣೆಯ ಹಿಂದಿನ ದಿನ. ಇದನ್ನು ಒಂಬತ್ತನೇ ಓಣಂ ಎಂದು ಕರೆಯಲಾಗುತ್ತದೆ. ಈ ದಿನ ಮಹಾಬಲಿ ರಾಜನು ಕೇರಳಕ್ಕೆ ಆಗಮಿಸುತ್ತಾನೆ ಎಂದು ನಂಬಲಾಗುತ್ತದೆ. ಮಾರನೇ ದಿನದ ಭವ್ಯ ಊಟಕ್ಕೆ ಬೇಕಾದ ತಾಜಾ ತರಕಾರಿಗಳನ್ನು ಸಂಪೂರ್ಣವಾಗಿ ಈ ದಿನ ಖರೀದಿಸಲಾಗುತ್ತದೆ.
ಹತ್ತನೇ ದಿನ ತಿರುವೋಣಂ
ಓಣಂ ಹಬ್ಬದ ಅತೀ ಪ್ರಮುಖ ಮತ್ತು ಮುಖ್ಯ ದಿನ. ಮನೆಗಳ ಮುಂದೆ ಅತೀ ದೊಡ್ಡ ಮತ್ತು ಸುಂದರವಾದ ಪೂಕೋಲಂ ಹಾಕುವುದು, ಬೆಳಿಗ್ಗೆ ಹೊಸಬಟ್ಟೆ (ಓಣಕ್ಕೋಡಿ) ಧರಿಸುವುದು, ಬಾಳೆ ಎಲೆಯಲ್ಲಿ ೨೬ಕ್ಕೂ ಹೆಚ್ಚು ಬಗೆಯ ವಿಭಿನ್ನ ಸಸ್ಯಹಾರಿ ಪದಾರ್ಥಗಳಿರುವ ಭವ್ಯವಾದ ಓಣಂ ಸದ್ಯವನ್ನು ಸವಿಯುವುದು. ಪಾಯಾಸವಿಲ್ಲದೆ ಈ ಊಟ ಪೂರ್ಣಗೊಳ್ಳುವುದಿಲ್ಲ. ಈ ಸದ್ಯವು ಸಮೃದ್ಧಿ ಮತ್ತು ಹಂಚಿಕೆಯನ್ನು ವ್ಯಕ್ತಪಡಿಸುತ್ತದೆ. ಹೊಸ ಬೆಳೆಗಳನ್ನು ತಂದು ಈ ದಿನ ಆಹಾರ ತಯಾರಿಸುತ್ತಾರೆ.
ಮಲಯಾಳಂನಲ್ಲೊಂದು ಗಾದೆಯಿದೆ "ಕಾಣಂ ವಿಟ್ಟುಂ ಓಣಂ ಉಣ್ಣಂ" ಎಂದು ಇದರರ್ಥ ನಮ್ಮ ಸರ್ವವನ್ನೇ ಅಂದರೆ ನಮ್ಮಲ್ಲಿರುವ ಆಸ್ತಿ ಅಥವಾ ಬೆಲೆಬಾಳುವ ವಸ್ತುವನ್ನು ಮಾರಿಯಾದರೂ ಸರಿ ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿ ಹಬ್ಬದ ಭೋಜನವನ್ನು ಮಾಡಬೇಕು ಎಂಬುದು. ಈ ಅಂಶವೇ ಓಣಂ ನ ಮಹತ್ವವನ್ನು ಸಾರಿ ಹೇಳುತ್ತದೆ.
ಈ ದಿನದಂದು ಆಚರಿಸಲಾಗುವ ಓಣಥಲ್ಲು ಎಂಬುದು ಸಾಂಪ್ರದಾಯಿಕ ಸಮರ ಕಲೆಯಾಗಿದೆ. ನಿಜವಾದ ಯುದ್ಧ ಭೂಮಿಯಲ್ಲಿ ನಾವು ಯುದ್ಧವನ್ನು ಮಾಡುತ್ತಿರುವಂತೆ ಪುರುಷರು ಯುದ್ಧ ಕಲೆಯನ್ನು ತೋರಿಸುತ್ತಾರೆ. ಈ ಸಂದರ್ಭದಲ್ಲಿ ಗಲಾಟೆ ಮತ್ತು ಕೆಟ್ಟ ಪದಗಳ ಬಳಕೆಯು ನಿಷಿದ್ಧ ಎನ್ನಲಾಗುತ್ತದೆ.
ತಿರುವೋಣಂ ನಂತರವೂ ಸಹ ಅವಿಟ್ಟಮ್ (ಮೂರನೇ ಓಣಂ) ದಿನದಂದು ರಾಜ ಮಹಾಬಲಿ ತನ್ನ ಪ್ರಜೆಗಳನ್ನು ಬೇಟಿಯಾಗಿ ಮತ್ತೆ ಪುನಃ ಪಾತಾಳ ಲೋಕಕ್ಕೆ ಹಿಂತಿರುಗುವ ದಿನ ಎಂದು ನಂಬಲಾಗುತ್ತದೆ. ಮತ್ತು ಚತಯಂ (ನಾಲ್ಕನೇ ಓಣಂ) ದಿನದಂದು ಕೆಲವು ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆಯುತ್ತವೆ. ಪೂಕೋಲಂ ನಲ್ಲಿರುವ ಮಣ್ಣಿನ ವಿಗ್ರಹವನ್ನು ನೀರಿಗೆ ವಿಸರ್ಜಿಸುವ ಮೂಲಕ ಓಣಂ ಆಚರಣೆಗಳಿಗೆ ಅಧಿಕೃತ ತೆರೆ ಬೀಳುತ್ತದೆ. ಈ ದಿನ ಕೇರಳದ ಮಹಾನ್ ಸಾಮಾಜಿಕ ಸುಧಾರಕ ಮತ್ತು ಸಂತ ಶ್ರೀ ನಾರಾಯಣ ಗುರುಗಳ ಜಯಂತಿ. ಇದನ್ನು ಕೇರಳದಲ್ಲಿ ಬಹಳ ವಿಜೃಂಭಣೆಯಿಂದ ಉತ್ಸವವಾಗಿ ಆಚರಿಸಲಾಗುತ್ತದೆ.
ಹೀಗೆ ಓಣಂ ಕೇರಳದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯ ಆತ್ಮವನ್ನು ಪ್ರತಿಬಿಂಬಿಸುವ ಹಬ್ಬವಾಗಿದೆ. ಇದು ತನ್ನದೇ ಆದ ವಿಶಿಷ್ಟ ಹೆಸರು ಮತ್ತು ಸಂಪ್ರದಾಯಗಳನ್ನು ಹೊಂದಿದೆ. ಓಣಂ ನ ಹತ್ತು ದಿನಗಳು ಪ್ರಕೃತಿ, ಕುಟುಂಬ ಮತ್ತು ಸಮುದಾಯದೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದೆ. ಈ ಹಬ್ಬವು ಸಮೃದ್ಧಿ, ಸಮಾನತೆ ಮತ್ತು ಒಗ್ಗಟ್ಟಿನ ಸಂದೇಶಕ್ಕೆ ಹೆಸರುವಾಸಿಯಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
