ರಾಜ್ಯ ಕಾಂಗ್ರೆಸ್ ಸರಕಾರ ಹಿಂದಿನಿಂದಲೂ ಶೋಷಿತ ವರ್ಗದವರ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿದೆ: ಶಾಸಕ ಎಎಸ್ ಪೊನ್ನಣ್ಣ

ರಾಜ್ಯ ಕಾಂಗ್ರೆಸ್ ಸರಕಾರ ಹಿಂದಿನಿಂದಲೂ ಶೋಷಿತ ವರ್ಗದವರ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿದೆ: ಶಾಸಕ ಎಎಸ್ ಪೊನ್ನಣ್ಣ

ವಿರಾಜಪೇಟೆ:ಇತ್ತೀಚೆಗೆ ಮುಕ್ತಾಯಗೊಂಡಗ ವಿಧಾನಸಭಾ ಅಧಿವೇಶನದಲ್ಲಿ, ಪರಿಶಿಷ್ಟ ಜಾತಿಯವರ ಒಳ ಮೀಸಲಾತಿಯನ್ನು ಪರಿಷ್ಕರಿಸಿ ಎಲ್ಲರಿಗೂ ಅನುಕೂಲ ಆಗುವಂತೆ ಕಾನೂನು ರೂಪಿಸಿ ಜಾರಿ ಮಾಡಿದ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮವನ್ನು ವಿರಾಜಪೇಟೆಯಲ್ಲಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 3 ಬ್ಲಾಕ್ ಗಳಲ್ಲಿನ ಸಮುದಾಯದ ಪ್ರಮುಖರು ಹಮ್ಮಿಕೊಂಡಿದ್ದರು. ವಿರಾಜಪೇಟೆಯ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೆರೆದಿದ್ದ ಸಾವಿರಕ್ಕೂ ಅಧಿಕ ಸಮುದಾಯ ಬಾಂಧವರ ಸಮ್ಮುಖದಲ್ಲಿ, ಕರ್ನಾಟಕ ರಾಜ್ಯ ಕಾಂಗ್ರೆಸ್ ಸರಕಾರದ ಪರವಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣರವರನ್ನು ಸಮುದಾಯದ ಮುಖಂಡರು ಕೃತಜ್ಞತಾ ಪೂರ್ವಕವಾಗಿ ಅಭಿನಂದಿಸಿದರು.

 ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕರು, ಕರ್ನಾಟಕ ರಾಜ್ಯ ಕಾಂಗ್ರೆಸ್ ಸರಕಾರವು ಈ ಹಿಂದಿನಿಂದಲೂ ಶೋಷಿತ ವರ್ಗದವರ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿದೆ. ಅದರ ಒಂದು ಭಾಗವಾಗಿ ಜನರ ಒಳಿತಿಗಾಗಿ ಒಳ ಮೀಸಲಾತಿ ಕಾಯ್ದೆಯಲ್ಲಿ ತಿದ್ದುಪಡಿ ತಂದು ಎಲ್ಲರಿಗೂ ಅನುಕೂಲ ಆಗುವಂತೆ ಕ್ರಮ ಕೈಗೊಂಡಿದೆ. ಸಮುದಾಯ ಬಾಂಧವರಿಗೆ ಮತ್ತಷ್ಟು ಸವಲತ್ತುಗಳನ್ನು ಕಲ್ಪಿಸಿಕೊಡಲು ಸರಕಾರ ಹಾಗೂ ತಾನು ಬದ್ಧರಾಗಿದ್ದು, ನಾಡಿನ ಎಲ್ಲಾ ಬಾಂಧವರು ತಮ್ಮ ಬೆಂಬಲ ನೀಡಿದಲ್ಲಿ ಇದು ಸುಲಭ ಸಾಧ್ಯವಾಗಲಿದೆ ಎಂದು ಕರೆ ನೀಡಿದರು. ಸಮುದಾಯದ ಪ್ರಮುಖರು ಶಾಸಕರನ್ನು ಅಭಿನಂದಿಸುತ್ತ ಮಾತನಾಡಿ, ಹಿಂದೆಂದೂ ಕಾಣದ ಅಭಿವೃದ್ಧಿಯನ್ನು ಕ್ಷೇತ್ರ ಹಾಗೂ ಸಮುದಾಯದ ಜನತೆ ಎ ಎಸ್ ಪೊನ್ನಣ್ಣ ರವರ ಅವಧಿಯಲ್ಲಿ ಕಾಣುತ್ತಿದೆ. ಸಮುದಾಯದ ಎಲ್ಲರೂ ಪೊನ್ನಣ್ಣನವರಿಗೆ ಬೆಂಬಲಿಸುವಂತಾಗಲು ಹಾಗೂ ವಿರಾಜಪೇಟೆ ಶಾಸಕರ ಕೈ ಬಲಪಡಿಸಲು ತಾವು ಸದಾ ಸಿದ್ಧ ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಸರ್ಕಾರದ ಒಳ ಮೀಸಲಾತಿ ಜಾರಿಗೆ ಅತ್ಯಂತ ಸಂತೋಷ ವ್ಯಕ್ತಪಡಿಸಿದ ಪ್ರಮುಖರು, ಶಾಸಕರಾದ ಎ.ಎಸ್ ಪೊನ್ನಣ್ಣ ರವರ ಮೂಲಕ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಅಭಿನಂದನೆ ಹಾಗೂ ಧನ್ಯವಾದಗಳನ್ನು ಸಲ್ಲಿಸಿದರು.

ಶಾಸಕ ಪೊನ್ನಣ್ಣರವರಿಗೆ ಸನ್ಮಾನ:

ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪ್ರತಿ ವಲಯ ಕಾಂಗ್ರೆಸ್ ವತಿಯಿಂದ ಮಾನ್ಯ ಶಾಸಕರನ್ನು ಆತ್ಮೀಯವಾಗಿ ಸನ್ಮಾನಿಸಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಮಾಜಿ ಅಧ್ಯಕ್ಷರಾದ ಸತೀಶ್ ಕುಮಾರ್ ವಿ.ಕೆ, ದಲಿತ ಮುಖಂಡರಾದ ಪರಶುರಾಮ, ವಿರಾಜಪೇಟೆ ತಾಲೂಕು ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರಾದ ಮಹದೇವ ಎಚ್.ಎಂ, ವಿರಾಜಪೇಟೆ ತಾಲೂಕು ಡಿಎಸ್ಎಸ್ ಅಧ್ಯಕ್ಷರಾದ ಕುಮಾರ್, ದಲಿತ ನಾಯಕರಾದ ಶಿವಣ್ಣ ತಿತಿಮತಿ, ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾ ಅಧ್ಯಕ್ಷರಾದ ಕಾವೇರಿ, ವಿರಜಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಜಾನ್ಸನ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಜಮ್ಮಡ ಸೋಮಣ್ಣ, ಕೆಡಿಪಿ ಸದಸ್ಯರಾದ ಗಣೇಶ್, ಪಳನಿ ಸ್ವಾಮಿ ಸಿದ್ದಾಪುರ, ಗ್ರಾಮ ಪಂಚಾಯಿತಿ ಸದಸ್ಯರು, ಗ್ಯಾರಂಟಿ ಅನುಷ್ಠಾನ ಸದಸ್ಯರು ರಘು, ಗೋಪಾಲ್ ಹಾಗೂ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.