ಪೊಲೀಸ್ ವಸತಿ ಗೃಹದಲ್ಲಿ ನಡೆದಿದ್ದ ಕಳ್ಳತನ ಪ್ರಕರಣ:ವಸತಿ ಗೃಹಕ್ಕೆ ಕನ್ನ ಹಾಕಿದ್ದ ಆರೋಪಿ ಮಧ್ಯಪ್ರದೇಶದಲ್ಲಿ ಅರೆಸ್ಟ್!

ಪೊಲೀಸ್ ವಸತಿ ಗೃಹದಲ್ಲಿ ನಡೆದಿದ್ದ ಕಳ್ಳತನ ಪ್ರಕರಣ:ವಸತಿ ಗೃಹಕ್ಕೆ ಕನ್ನ ಹಾಕಿದ್ದ ಆರೋಪಿ ಮಧ್ಯಪ್ರದೇಶದಲ್ಲಿ ಅರೆಸ್ಟ್!

ಮಡಿಕೇರಿ: ಕಳೆದ ಕೆಲ ದಿನಗಳ ಹಿಂದೆ ನಗರದ ಪೊಲೀಸ್ ವಸತಿ ಗೃಹದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಇಬ್ಬರು ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಧ್ಯಪ್ರದೇಶದ ಆರೋಪಿ ಸುರೇಶ್ ಸೇಂಗರ್ ಹಾಗೂ ಆತನಿಗೆ ಸಹಕರಿಸಿದ ಮನೀಶ್ ಬಂಧಿತ ಆರೋಪಿಗಳು. ಜೂನ್ 17 ರಂದು ಮಡಿಕೇರಿಯ ಮೈತ್ರಿ ಹಾಲ್ ಬಳಿಯ ಪೊಲೀಸ್ ವಸತಿ ಗೃಹಗಳಿಗೆ ಕನ್ನ ಹಾಕಿದ್ದ ಖದೀಮರು ಸುಮಾರು ಎಂಟು ಮನೆಗಳ ಬೀಗ ಒಡೆದು 90 ಸಾವಿರ ನಗದು ಸೇರಿದಂತೆ ಚಿನ್ನ-ಬೆಳ್ಳಿ ಆಭರಣಗಳನ್ನು ಕದ್ದೊಯ್ದಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಪಿಎಸ್‌ಐ ಮಂಜುನಾಥ್ ಹಾಗೂ ಸಿಬ್ಬಂದಿಗಳಾದ ಯೋಗೇಶ್, ನಿರಂಜನ್, ಪ್ರಭಾಕರ್ ಮುನೀರ್ ಅವರುಗಳ ತಂಡವನ್ನು ರಚಿಸಿದ್ದರು. ಸಿಸಿ ಕ್ಯಾಮರ ದೃಶ್ಯಗಳ ಪರಿಶೀಲನೆ,ಪತ್ತೆ ಕಾರ್ಯ ನಡೆಸಿ ಕೊಡಗು, ಮಂಗಳೂರು, ಉಡುಪಿ, ಹಾಸನ, ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಗೋವಾದವರೆಗೂ ಕಳ್ಳರ ಜಾಡನ್ನು ತಂಡ ಬೆನ್ನತ್ತಿತ್ತು. ಅನಂತರ ಮಧ್ಯಪ್ರದೇಶದಲ್ಲಿ ಕಳ್ಳರು ಇರುವುದು ತಿಳಿದು ತನಿಖಾ ತಂಡ ಮಧ್ಯಪ್ರದೇಶದ ಧಾರ್ ಜಿಲ್ಲೆಗೆ ತೆರಳಿ ಪತ್ತೆ ಹಚ್ಚಿದೆ. ತನಿಖಾ ತಂಡ ಸುಮಾರು 25 ದಿನಗಳ ಕಾಲ ಮಧ್ಯಪ್ರದೇಶದ ಧಾರ್. ಇಂದೋರ್, ರಾಜ್ ಘರ್, ತಾಂಡ ಪ್ರದೇಶಗಳಲ್ಲಿ ಕಾರ್ಯಾಚರಣೆ ಮಾಡಿದ್ದು, ಈ ವೇಳೆ ಪ್ರಕರಣದ ಪ್ರಮುಖ ಆರೋಪಿ ಸುರೇಶ್ ಸೇಂಗರ್ ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಕರ್ನಾಟಕ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ ರಾಜ್ಯಗಳಲ್ಲಿ ಸುಮಾರು 20 ಕ್ಕೂ ಹೆಚ್ಚು ಕಳ್ಳತನಗಳನ್ನು ಮಾಡಿರುವುದು ಬೆಳಕಿಗೆ ಬಂದಿದೆ. ಅನಂತರ ಕಳ್ಳರ ಜಾಡು ಹಿಡಿದ ತನಿಖಾ ತಂಡ ಆರೋಪಿ ಸುರೇಶ್ ಸೇಂಗರ್ ಹಾಗೂ ಆತನಿಗೆ ಸಹಕರಿಸಿದ ಮನೀಶ್ ಎಂಬವರನ್ನು ಪಿರಿಯಾಪಟ್ಟಣದಲ್ಲಿ ಬಂಧಿಸಿದೆ.