ದೀಪಾವಳಿ ಬೋನಸ್ ಕಡಿಮೆ ನೀಡಿದ್ದಕ್ಕೆ ಟೋಲ್ ತೆರೆದಿಟ್ಟು ಪ್ರತಿಭಟಿಸಿದ ಸಿಬ್ಬಂದಿ : ಟೋಲ್ ಕಟ್ಟದೇ ಉಚಿತವಾಗಿ ಸಾಗಿದ ವಾಹನಗಳು!

ದೀಪಾವಳಿ ಬೋನಸ್ ಕಡಿಮೆ ನೀಡಿದ್ದಕ್ಕೆ ಟೋಲ್ ತೆರೆದಿಟ್ಟು ಪ್ರತಿಭಟಿಸಿದ ಸಿಬ್ಬಂದಿ : ಟೋಲ್ ಕಟ್ಟದೇ ಉಚಿತವಾಗಿ ಸಾಗಿದ ವಾಹನಗಳು!
Photo credit: INDIA TODAY

ಹೊಸದಿಲ್ಲಿ, ಅ. 21: ದೀಪಾವಳಿ ಬೋನಸ್ ಕಡಿಮೆಯಾಗಿ ನೀಡಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಫತೇಹಾಬಾದ್‌ನ ಆಗ್ರಾ–ಲಕ್ಕೋ ಎಕ್ಸ್‌ಪ್ರೆಸ್‌ವೇಯ ಟೋಲ್ ಪ್ಲಾಝಾದಲ್ಲಿ ಸೋಮವಾರ ಬೆಳಿಗ್ಗೆ ಅಸಮಾಧಾನಗೊಂಡ ಸಿಬ್ಬಂದಿಗಳು ಕೆಲಸವನ್ನು ಬಹಿಷ್ಕರಿಸಿ ಬೂತ್‌ಗಳನ್ನು ತೆರೆದಿಟ್ಟ ಪರಿಣಾಮ, ಸಾವಿರಾರು ವಾಹನಗಳು ಟೋಲ್ ಪಾವತಿಸದೆ ಸಂಚರಿಸಿದವು.

ಸ್ಥಳೀಯ ಮೂಲಗಳ ಪ್ರಕಾರ, ಫತೇಹಾಬಾದ್‌ನ ಟೋಲ್ ಪ್ಲಾಝಾವನ್ನು ನಿರ್ವಹಿಸುತ್ತಿರುವ ಶ್ರೀ ಸೈನ್ ಅಂಡ್ ದಾತಾರ್ ಕಂಪೆನಿ ನೌಕರರಿಗೆ ದೀಪಾವಳಿ ಬೋನಸ್‌ ಆಗಿ ಕೇವಲ ₹1,100 ನೀಡಿತ್ತು. ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ನೌಕರರು ತಕ್ಷಣ ಕೆಲಸವನ್ನು ನಿಲ್ಲಿಸಿ ಟೋಲ್ ತೆರೆದಿಟ್ಟರು.

ಪ್ರತಿಭಟನೆಯ ಪರಿಣಾಮವಾಗಿ ಟೋಲ್ ಕಾರ್ಯಾಚರಣೆ ಸ್ಥಗಿತಗೊಂಡಿತು. ಸಾವಿರಾರು ವಾಹನಗಳು ಯಾವುದೇ ಶುಲ್ಕ ಪಾವತಿಸದೆ ಎಕ್ಸ್‌ಪ್ರೆಸ್‌ವೇ ಮೂಲಕ ಸಂಚರಿಸಿದವು. ಆಡಳಿತ ಮಂಡಳಿಯು ಇತರ ಟೋಲ್ ಪ್ಲಾಝಾಗಳಿಂದ ಸಿಬ್ಬಂದಿಯನ್ನು ಕರೆಸಿ ಕಾರ್ಯಾಚರಣೆ ಪುನರಾರಂಭಿಸಲು ಪ್ರಯತ್ನಿಸಿದರೂ, ಪ್ರತಿಭಟನಾನಿರತ ನೌಕರರು ಬದಲಿ ಸಿಬ್ಬಂದಿಯನ್ನು ಕೆಲಸ ಮಾಡದಂತೆ ತಡೆದರು.

ಘಟನೆಯ ಕುರಿತು ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ನಂತರ ಕಂಪೆನಿಯ ಅಧಿಕಾರಿಗಳು ಮತ್ತು ನೌಕರರ ನಡುವೆ ಮಾತುಕತೆ ನಡೆದಿದ್ದು, ಶೇಕಡಾ 10ರಷ್ಟು ವೇತನ ಹೆಚ್ಚಳದ ಭರವಸೆ ನೀಡಲಾಯಿತು. ಭರವಸೆ ಸ್ವೀಕರಿಸಿದ ನಂತರ ನೌಕರರು ಪ್ರತಿಭಟನೆಯನ್ನು ಹಿಂತೆಗೆದು ತಮ್ಮ ಕರ್ತವ್ಯಕ್ಕೆ ಮರಳಿದರು.

ಆ ವೇಳೆಗಾಗಲೇ ಸಾವಿರಾರು ವಾಹನಗಳು ಟೋಲ್ ಪಾವತಿಸದೇ ಉಚಿತವಾಗಿ ಸಂಚರಿಸಿದ್ದವು.