ಮಡಿಕೇರಿ ದಸರೆಗೆ ಬರುವ ಹೊರರಾಜ್ಯದ ವಾಹನಗಳಿಗೆ ತೆರಿಗೆ ವಿನಾಯಿತಿಗೆ ಪ್ರವಾಸೋದ್ಯಮಿಗಳ ಆಗ್ರಹ
ಕುಶಾಲನಗರ :ನಾಡಹಬ್ಬ ಮಡಿಕೇರಿ ದಸರಾ ಮಹೋತ್ಸವ 2025 ರ ಆಚರಣೆ ಸಂಬಂಧ ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಆಗಮಿಸುವ ಅಂತರರಾಜ್ಯ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಕ್ರಮ ಕೈಗೊಂಡು ಕೊಡಗಿನ ಪ್ರವಾಸೋದ್ಯಮಕ್ಕೆ ಸಹಕಾರ ನೀಡಬೇಕೆಂದು ಜಿಲ್ಲೆಯ ಪ್ರವಾಸೋದ್ಯಮಿಗಳ ಪರವಾಗಿ ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ವಿಲೇಜ್ ನ ವ್ಯವಸ್ಥಾಪಕ ನಿರ್ದೇಶಕ ರಾದ ಅಬ್ದುಲ್ ಸಲಾಂ ಕೊಡಗು ಮೈಸೂರು ಸಂಸದ ಯದುವೀರ್ ಅವರನ್ನು ಒತ್ತಾಯಿಸಿದ್ದಾರೆ.
ನಾಡಹಬ್ಬ ಮಡಿಕೇರಿ ದಸರಾ ಮಹೋತ್ಸವವು ಮುಂಬರುವ 2025 ರ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 02 ರವರೆಗೆ ನಡೆಯುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಗೆ ದಸರಾ ಅಂಗವಾಗಿ ಹೊರರಾಜ್ಯಗಳಿಂದ ನೂರಾರು ಸಂಖ್ಯೆಯಲ್ಲಿ ವಾಹನಗಳೊಂದಿಗೆ ಅಸಂಖ್ಯಾತ ಪ್ರವಾಸಿಗರು ಆಗಮಿಸುತ್ತಾರೆ. ಆದ್ದರಿಂದ 2019 ರಲ್ಲಿ ಕೊಡಗು ಹಾಗೂ ಮೈಸೂರು ಜಿಲ್ಲಾಧಿಕಾರಿಗಳು ಹಾಗೂ ದಸರಾ ವಿಶೇಷ ಕರ್ತವ್ಯಾಧಿಕಾರಿಗಳು ಹೊರಡಿಸಿದ್ದಂತಹ ಆದೇಶದ ಪ್ರಕಾರ ಈ ಬಾರಿಯೂ ದಸರಾ ಅಂಗವಾಗಿ ಹೊರರಾಜ್ಯಗಳಿಂದ ಮೈಸೂರು, ಮಂಡ್ಯ,ಚಾಮರಾಜನಗರ ಜಿಲ್ಲೆಗಳ ಜೊತೆಗೆ ಕೊಡಗು ಜಿಲ್ಲೆಗೆ ಆಗಮಿಸುವ ಪ್ರವಾಸಿ ವಾಹನಗಳಿಗೆ ಸಾರ್ವಜನಿಕ ಹಿತದೃಷ್ಟಿಯಿಂದ ಕರ್ನಾಟಕ ಮೋಟಾರ್ ವಾಹನ ತೆರಿಗೆ ಅಧಿನಿಯಮ 1957 ರ ಕಲಂ 16 ( 1 ) ರಡಿಯಲ್ಲಿ ತೆರಿಗೆ ಪಾವತಿಯಿಂದ ವಿನಾಯಿತಿ ಕೊಡಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ. ಮೈಸೂರು, ಕೊಡಗು ಹೊರರಾಜ್ಯಗಳ ಗಡಿ ಪ್ರದೇಶಗಳಾದ ಕಾರಣ ಹೊರ ರಾಜ್ಯದ ಪ್ರವಾಸಿಗರಿಗೆ ದಸರಾ ಮಹೋತ್ಸವಕ್ಕೆ ಬರಲು ಅನುಕೂಲವಾಗುತ್ತದೆ. ಇದರಿಂದ ಕೊಡಗಿನ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿರುವ ಬಹಳಷ್ಟು ವ್ಯಾಪಾರಿಗಳಿಗೆ ಆರ್ಥಿಕವಾಗಿ ಸಹಕಾರಿಯಾಗುತ್ತದೆ. ಆದ್ದರಿಂದ ತಾವುಗಳು ಈ ಗಮನ ಹರಿಸಿ ನಮಗೆ ಸಹಾಯ ಸಹಕಾರ ನೀಡಬೇಕೆಂದು ಸಲಾಂ ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.