ಉಡುಪಿ | ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್‌ಗಳಿಗೆ ವಂಚನೆ; ಐವರ ಬಂಧನ

Nov 11, 2025 - 13:59
 0  1.1k
ಉಡುಪಿ | ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್‌ಗಳಿಗೆ ವಂಚನೆ; ಐವರ ಬಂಧನ
Photo credit: Etv bharath

ಉಡುಪಿ: ಬ್ಯಾಂಕ್‌ಗಳಲ್ಲಿ ನಕಲಿ ಚಿನ್ನಾಭರಣಗಳನ್ನು ಅಸಲಿ ಎಂದು ನಂಬಿಸಿ ಅಡಮಾನ ಇಟ್ಟು ಸಾಲ ಪಡೆದು ವಂಚನೆ ನಡೆಸಿದ ಐವರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಅಂಬಪಾಡಿ ಕಪ್ಪಟ್ಟು ನಿವಾಸಿ ಪುನೀತ್ ಆನಂದ ಕೋಟ್ಯಾನ್, ತೆಂಕನಿಡಿಯೂರು ಲಕ್ಷ್ಮೀನಗರ ನಿವಾಸಿ ಸುದೀಪ್, ಏಣಗುಡ್ಡೆಯ ರಂಜನ್ ಕುಮಾರ್, ಪೆರ್ಡೂರಿನ ಸರ್ವಜಿತ್ ಹೆಚ್.ಕೆ., ಹಾಗೂ ಮಹಾರಾಷ್ಟ್ರದ ಪುಣೆ ಮೂಲದ ರಾಜೇಶ್ ದಿಲೀಪ್ ಪಾಟೀಲ್ ಎಂದು ಪೊಲೀಸರು ಗುರುತಿಸಿದ್ದಾರೆ.

ಅಕ್ಟೋಬರ್‌ 30, 2025ರಂದು ಕರ್ನಾಟಕ ಬ್ಯಾಂಕ್‌ ಕಟ್ಟಿಂಗೇರಿ ಶಾಖಾ ವ್ಯವಸ್ಥಾಪಕರ ದೂರು ಮೇರೆಗೆ ಶಿರ್ವ ಪೊಲೀಸ್‌ ಠಾಣೆಯಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.

ಬಿ.ಎನ್.ಎಸ್.–2023ರ ಕಲಂ 316(2), 318(4), 3(5) ಅಡಿಯಲ್ಲಿ ದಾಖಲಾಗಿರುವ ಈ ಪ್ರಕರಣಗಳಲ್ಲಿ, ಆರೋಪಿಗಳು ನಕಲಿ ಚಿನ್ನಾಭರಣಗಳನ್ನು ಅಸಲಿ ಎಂದು ತೋರಿಸಿ ಅಡಮಾನ ಇಟ್ಟು ಸಾಲ ಪಡೆದು ಬ್ಯಾಂಕ್‌ಗೆ ವಂಚನೆ ಮಾಡಿದ್ದರು ಎಂದು ಆರೋಪಿಸಲಾಗಿದೆ. 

ಜಿಲ್ಲೆಯಲ್ಲಿ ಇತ್ತೀಚೆಗೆ ಇಂತಹ ನಕಲಿ ಚಿನ್ನ ಅಡಮಾನ ಪ್ರಕರಣಗಳು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ, ಉಡುಪಿ ವೃತ್ತ ನಿರೀಕ್ಷಕ ಕಾಪು ಅವರ ನೇತೃತ್ವದಲ್ಲಿ ಮೂರು ವಿಶೇಷ ತನಿಖಾ ತಂಡಗಳನ್ನು ರಚಿಸಲಾಯಿತು. ಈ ತಂಡಗಳು ಬೆಂಗಳೂರು, ಗೋವಾ, ಮುಂಬೈ ಹಾಗೂ ದೆಹಲಿಯವರೆಗೆ ವಿಸ್ತರಿಸಿದ ಹುಡುಕಾಟ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದವು.

ಪೊಲೀಸರು ಆರೋಪಿಗಳಿಂದ ₹4.30 ಲಕ್ಷ ನಗದು, ನಕಲಿ ಹಾಲ್ಮಾರ್ಕ್ ಮಾಡಲು ಬಳಸಿದ ಲೇಸರ್‌ ಯಂತ್ರ ಹಾಗೂ ಕಂಪ್ಯೂಟರ್‌ ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.

ತನಿಖೆಯ ವೇಳೆ, ಆರೋಪಿಗಳು ಬ್ರಹ್ಮಾವರ, ಹಿರಿಯಡ್ಕ ಹಾಗೂ ಉಡುಪಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಗಳಲ್ಲಿಯೂ ಇದೇ ರೀತಿಯ ವಂಚನೆಗಳಲ್ಲಿ ತೊಡಗಿಸಿಕೊಂಡಿರುವುದು ಪತ್ತೆಯಾಗಿದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 2
Wow Wow 0