ಉಂಡ ಮನೆಗೇ ದಂಪತಿಯಿಂದ ದ್ರೋಹ: ಉದ್ಯಮಿ ಮನೆಯಲ್ಲಿ 979 ಗ್ರಾಂ ಚಿನ್ನ ಕಳವು
ಬೆಂಗಳೂರು, ಜ.2: ಉದ್ಯಮಿಯೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿಯೇ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದುಕೊಂಡು ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ. ಹೊಸ ವರ್ಷದ ಆಚರಣೆಗೆಂದು ಉದ್ಯಮಿ ಕುಟುಂಬ ಬೇರೆ ರಾಜ್ಯಕ್ಕೆ ತೆರಳಿದ್ದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಈ ಕಳ್ಳತನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿ.30ರಂದು ಸದಾಶಿವನಗರದಲ್ಲಿರುವ ಉದ್ಯಮಿ ಅಭಿಷೇಕ್ ಅವರ ನಿವಾಸದಲ್ಲಿ ಈ ಘಟನೆ ನಡೆದಿದೆ. ಸುಮಾರು 1.37 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಹಾಗೂ ವಾಚ್‌ಗಳು ಕಳವಾಗಿವೆ. ಇದರಲ್ಲಿ 979 ಗ್ರಾಂ ಚಿನ್ನಾಭರಣಗಳ ಮೌಲ್ಯ ಸುಮಾರು 1.27 ಕೋಟಿ ರೂಪಾಯಿ ಆಗಿದ್ದು, ಉಳಿದಂತೆ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ವಾಚ್‌ಗಳು ಕಳವಾಗಿವೆ ಎಂದು ಅಂದಾಜಿಸಲಾಗಿದೆ.
ಮನೆಯ ಕೆಲಸಗಾರರಾದ ಹಾಜಿರಾ ಬೇಗಂ ಹಾಗೂ ಆಕೆಯ ಪತಿ ಶಾಹೀರ್ ಆರೋಪಿಗಳಾಗಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಈ ದಂಪತಿ 2022ರಿಂದ 2024ರವರೆಗೆ ಉದ್ಯಮಿಯ ಮನೆಯಲ್ಲಿ ಕೆಲಸ ಮಾಡಿದ್ದರು. ನಂತರ ಕೆಲಸ ಬಿಟ್ಟಿದ್ದ ಅವರು 2025ರ ಡಿ.27ರಂದು ಮತ್ತೆ ಕೆಲಸಕ್ಕೆ ಸೇರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಹೊಸ ವರ್ಷದ ಆಚರಣೆಗೆಂದು ಡಿ.30ರಂದು ಕುಟುಂಬ ಕೊಯಮತ್ತೂರಿಗೆ ತೆರಳುವ ವೇಳೆ, ಮನೆಯ ಕೀಲಿಯನ್ನು ಅತ್ತೆಗೆ ನೀಡುವಂತೆ ಹೇಳಿ ಹಾಜಿರಾ ಬಳಿ ಒಪ್ಪಿಸಲಾಗಿತ್ತು. ಆದರೆ ಸಂಜೆಯಾದರೂ ಕೀಲಿಯನ್ನು ಹಸ್ತಾಂತರಿಸದೇ ಇರುವುದರಿಂದ ಕುಟುಂಬಸ್ಥರು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದರು. ಈ ವೇಳೆ ದಂಪತಿಯ ಮೊಬೈಲ್‌ಗಳು ಸ್ವಿಚ್‌ಆಫ್ ಆಗಿದ್ದವು.
ಅನುಮಾನಗೊಂಡ ಕುಟುಂಬಸ್ಥರು ಚಾಲಕರ ಮೂಲಕ ಮನೆ ಪರಿಶೀಲನೆ ನಡೆಸಿದಾಗ, ಕಪಾಟುಗಳು ತೆರೆದಿರುವುದು ಕಂಡುಬಂದಿದೆ. ಬಳಿಕ ನಡೆಸಿದ ಪರಿಶೀಲನೆಯಲ್ಲಿ 979 ಗ್ರಾಂ ಚಿನ್ನಾಭರಣಗಳು ಹಾಗೂ ವಾಚ್‌ಗಳು ಕಳವಾಗಿರುವುದು ದೃಢಪಟ್ಟಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.
What's Your Reaction?
Like
1
Dislike
0
Love
1
Funny
1
Angry
0
Sad
3
Wow
0
