ಜ.2ರಿಂದ 08ರವರೆಗೆ ಕುಶಾಲನಗರದಲ್ಲಿ ವಾಸವಿ ಸಪ್ತಾಹ ಕಾರ್ಯಕ್ರಮ

ಜ.2ರಿಂದ 08ರವರೆಗೆ ಕುಶಾಲನಗರದಲ್ಲಿ ವಾಸವಿ ಸಪ್ತಾಹ ಕಾರ್ಯಕ್ರಮ

ಮಡಿಕೇರಿ: ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್, ಆರ್ಯವೈಶ್ಯ ಮಂಡಳಿ ವತಿಯಿಂದ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಅಂಗವಾಗಿ ವಾಸವಿ ಸಪ್ತಾಹ ಕಾರ್ಯಕ್ರಮ ಜ.2ರಿಂದ 8ರವರೆಗೆ ಕುಶಾಲನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಮತ್ತು ಆರ್ಯವೈಶ್ಯ ಮಂಡಳಿಯ ಅಧ್ಯಕ್ಷರಾದ ಬಿ.ಆರ್.ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.

ಸ್ವತಂತ್ರ ಪೂರ್ವ 1947ರಲ್ಲಿ ಶ್ರೀ ಮೈಲಾರ ಶೆಟ್ಟರ ಅಧ್ಯಕ್ಷತೆಯಲ್ಲಿ ಪ್ರತಿಷ್ಠಾಪನೆಗೊಂಡ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನವು ಹಲವು ಅಧ್ಯಕ್ಷರುಗಳ ಅಧ್ಯಕ್ಷತೆಯಲ್ಲಿ ಅಭಿವೃದ್ಧಿ ಗೊಂಡಿದೆ. 2014ರಲ್ಲಿ ಈಗಿನ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ಪುನರ್ ಪ್ರತಿಷ್ಠಾಪನೆಗೊಂಡ ದೇವಸ್ಥಾನದಲ್ಲಿ 12 ವರ್ಷಗಳಿಗೊಮ್ಮೆ ಧಾರ್ಮಿಕ ಪದ್ಧತಿಯಂತೆ ಆಚರಿಸಬೇಕಾದಂತ ಧಾರ್ಮಿಕ ಕಾರ್ಯಕ್ರಮಗಳು, ಪೂಜಾ ಕಾರ್ಯಕ್ರಮಗಳು, ಕುಂಭಾಭಿಷೇಕ, ಬ್ರಹ್ಮ ಕಳಶೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಕುಶಾಲನಗರದ ರಥ ಬೀದಿಯ ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ದಿನಾಂಕ ಜ.29 ರಿಂದ 2 ರವರೆಗೆ 5 ದಿನಗಳು ಜರುಗಲಿದೆ. ವಾಸವಿ ಸಪ್ತಾಹ 2026 ಕಾರ್ಯಕ್ರಮ 7 ದಿನಗಳು ನಮ್ಮ ಸಂಸ್ಥೆಯ ಆಶ್ರಯದಲ್ಲಿ ಕುಶಾಲನಗರದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

2ರ ಶುಕ್ರವಾರ ಬೆಳಿಗ್ಗೆ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಿಸುವ ನಿಮಿತ್ತಾ ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತದ ಪ್ರಾಯೋಜಕತ್ವದಲ್ಲಿ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ, ಕುಶಾಲನಗರ ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘ, ಸೈನಿಕ ಶಾಲೆ, ಮಾಜಿ ಸೈನಿಕರ ಸಂಘ, ಛೇಂಬರ್ ಆಫ್ ಕಾಮರ್ಸ್, ಕುಶಾಲನಗರ ಸೇರಿದಂತೆ ವಿವಿಧ ಸ್ಥಳೀಯ ಸಂಘ ಸಂಸ್ಥೆಗಳ ಪಾಲ್ಗೊಳ್ಳುವಿಕೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರವನ್ನು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ(ಜಿಲ್ಲಾ ಆಸ್ಪತ್ರೆ) ಮಡಿಕೇರಿ, ಕೊಡಗು ಜಿಲ್ಲಾ ರಕ್ತನಿಧಿ ಕೇಂದ್ರ ಮಡಿಕೇರಿ ವಾಸವಿ ಯುವಜನ ಚಾರಿಟೇಬಲ್ ಟ್ರಸ್ಟ್ ಮತ್ತು ವಾಸವಿ ಯುವಜನ ಸಂಘದ ಸಹಯೋಗದೊಂದಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಕನ್ನಿಕಾ ಕನ್ವೆನ್ಷನ್ ಸೆಂಟರ್, ಹೋಟೆಲ್ ಕನ್ನಿಕಾ ಇಂಟರ್ನ್ಯಾಷನಲ್ ಐಬಿ ರಸ್ತೆ ಕುಶಾಲನಗರದಲ್ಲಿ ಬೆಳಿಗ್ಗೆ 9:30 ರಿಂದ ಪ್ರಾರಂಭಗೊAಡು ಸಂಜೆ 4.00 ಗಂಟೆಗೆ ಮುಕ್ತಾಯವಾಗಲಿದೆ ಎಂದು ತಿಳಿಸಿದರು.

ಜ.3ರ ಶನಿವಾರದಂದು ಆರ್ಯವೈಶ್ಯ ಮಹಿಳಾ ಮಂಡಳಿಯ ಸಹಕಾರದೊಂದಿಗೆ ಬೆಳಿಗ್ಗೆ ಸಮುದಾಯ ಆರೋಗ್ಯ ಕೇಂದ್ರ ಕುಶಾಲನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮ, ಮಧ್ಯಾಹ್ನ ಕೂಡಿಗೆಯ ಶಕ್ತಿ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿದೆ. ಸಂಜೆ ಕಾವೇರಿ ಮಹಾ ಆರತಿ ಬಳಗದ ಸಹಯೋಗದೊಂದಿಗೆ ವಿವಿಧ ಸಂಘ ಸಂಸ್ಥೆಗಳು ಸೇರಿ ಕಾವೇರಿ ನದಿಗೆ ಕುಶಾಲನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಳಿಯ ಕಾವೇರಿ ನದಿಯ ತಟದಲ್ಲಿ 181ನೇ ಮಹಾ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆಯ ಹಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಮತ್ತು ಕ್ಷೇತ್ರದ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರAಜನ್ ರವರಗಳ ಉಪಸ್ಥಿತಿಯಲ್ಲಿ ಕುಶಾಲನಗರದ ಸಮಸ್ತ ಭಜನಾ ಮಂಡಳಿಯ ವತಿಯಿಂದ ವಂದೇ ಮಾತರಂ ರಾಷ್ಟ್ರೀಯ ಗೀತೆಯ 150ನೇ ವರ್ಷದ ಅಂಗವಾಗಿ ಎಲ್ಲರೂ ಒಟ್ಟಾಗಿ ಒಂದೇ ಮಾತರಂ ಗೀತೆಯನ್ನು ಮತ್ತು ಭಜನಾ ಗೀತೆಯನ್ನು ಹಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕುಶಾಲನಗರದ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಜ.4ರಂದು ರಾಜ್ಯಮಟ್ಟದ ವಾಸವಿ ಬ್ಯಾಡ್ಮಿಂಟನ್ ಪಂದ್ಯಾವಳಿ ಕುಶಾಲನಗರದ ಜಂಪ್ ಸ್ಮ್ಯಾಶ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಜ.5ರ ಸೋಮವಾರದಂದು 114 ವರ್ಷಗಳ ಕಾಲ ನಮ್ಮೊಂದಿಗಿದ್ದ ಸಾಲುಮರದ ತಿಮ್ಮಕ್ಕ ರವರ ಸ್ಮರಣೆಯಲ್ಲಿ 114 ಗಿಡಗಳನ್ನು ನೆಡುವ ಮೂಲಕ ಲಕ್ಷ ವೃಕ್ಷ ಗಿಡ ನೆಡುವ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಗುತ್ತದೆ. ಜ.6ರ ಮಂಗಳವಾರದAದು ವಾಸವಿ ಯುವತಿಯರ ಸಂಘದ ಸಹಯೋಗದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯೂರಿಟಿ ಮತ್ತು ಸ್ವಯಂ ರಕ್ಷಣೆ ಜಾಗೃತಿ ಮೂಡಿಸುವ ಶಿಬಿರಗಳನ್ನು ಏರ್ಪಡಿಸಲಾಗಿದೆ. ಜ.7ರ ಬುಧವಾರ ಯುವಕರಿಗೆ ಕಾರ್ಯಾಗಾರವನ್ನು ನಗರದ ಪಾಲ್ಯಂ ಎಮರಾಲ್ಡ್ನಲ್ಲಿ ಹಮ್ಮಿಕೊಳ್ಳಲಾಗಿದೆ. ಜ.8ರ ಭಾಷಣ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆಯನ್ನು ಆಯ್ದ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಬಿ.ಅಮೃತ್ ರಾಜ್, ಟ್ರಸ್ಟ್ ಮತ್ತು ಆರ್ಯವೈಶ್ಯ ಮಂಡಳಿಯ ಕಾರ್ಯದರ್ಶಿ ಕೆ.ಪ್ರವೀಣ್, ಖಜಾಂಚಿ ಪಿ.ಎಸ್.ಪ್ರಶಾಂತ್, ವಾಸವಿ ಸಪ್ತಾಹ ಕಾರ್ಯಕ್ರಮದ ಯೋಜನಾ ನಿರ್ದೇಶಕ ಎ.ಎಸ್.ಕುಮಾರ್ ಇದ್ದರು.