ವಿಜಯನಗರ | ಚಿನ್ನಾಭರಣ ವ್ಯಾಪಾರಿಯ ಅಪಹರಣ; 5 ಕೋಟಿ ರೂ.ಗೆ ಬೇಡಿಕೆ

ವಿಜಯನಗರ | ಚಿನ್ನಾಭರಣ ವ್ಯಾಪಾರಿಯ ಅಪಹರಣ; 5 ಕೋಟಿ ರೂ.ಗೆ ಬೇಡಿಕೆ
ಫೋಟೋ: ಮಂಜುನಾಥ್ ಶೇಜವಾಡಕರ್

ಹೂವಿನಹಡಗಲಿ, ಅ.11: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲಿ ಚಿನ್ನಾಭರಣ ವ್ಯಾಪಾರಿಯಾಗಿರುವ ವ್ಯಕ್ತಿಯ ಅಪಹರಣ ಪ್ರಕರಣದಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ದುಷ್ಕರ್ಮಿಗಳು ಅಪಹರಿಸಿದ ವ್ಯಕ್ತಿಯನ್ನು ಬಿಡುಗಡೆ ಮಾಡಲು 5 ಕೋಟಿ ರೂಪಾಯಿ ಹಣ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರ ಪ್ರಕಾರ, ಮಂಜುನಾಥ ಶೇಜವಾಡಕರ್ (58) ಎಂಬವರು ಶುಕ್ರವಾರ ಬೆಳಗ್ಗೆ ಮೈಲಾರ ರಸ್ತೆಯ ಮೂಲಕ ವಾಯು ವಿಹಾರಕ್ಕೆ ತೆರಳಿದ್ದರು. ಆದರೆ ಬೆಳಿಗ್ಗೆ 8 ಗಂಟೆಯಾದರೂ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ಆರಂಭಿಸಿದರು. ಇದೇ ವೇಳೆ ದುಷ್ಕರ್ಮಿಗಳು ಮಂಜುನಾಥ ಅವರ ಮೊಬೈಲ್‌ನಿಂದಲೇ ಅವರ ಅಕ್ಕ, ದಾವಣಗೆರೆಯ ವೈದ್ಯೆ ಡಾ. ಮಂಜುಳಾ ಶೇಜವಾಡಕರ್ ಅವರಿಗೆ ವಾಟ್ಸ್ಆಪ್ ಕರೆ ಮಾಡಿ, “ವಾಯು ವಿಹಾರಕ್ಕೆ ಹೋದ ನನ್ನನ್ನು ಕಾರಿನಲ್ಲಿ ಬಂದವರು ಅಪಹರಿಸಿದ್ದಾರೆ, ಕಟ್ಟಿ ಹಾಕಿದ್ದಾರೆ. ಅವರು 5 ಕೋಟಿ ರೂಪಾಯಿ ಕೊಡಬೇಕು ಎಂದು ಹೇಳಿದ್ದಾರೆ,” ಎಂದು ತಿಳಿಸಿದರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆ ಬಳಿಕ ಅಪಹರಣಕಾರನೊಬ್ಬ ಫೋನ್ ಕಿತ್ತುಕೊಂಡು, “ನಮಗೆ ಇವರೊಂದಿಗೆ ಯಾವುದೇ ವೈಮನಸ್ಸಿಲ್ಲ. ನಮಗೆ ಬೇಕಾದಷ್ಟು ಹಣ ಕೊಟ್ಟರೆ ಬಿಡುತ್ತೇವೆ,” ಎಂದು ಹೇಳಿದ್ದಾನೆ.

 ಅದಕ್ಕೆ ಡಾ. ಮಂಜುಳಾ “ಅಷ್ಟೊಂದು ಹಣ ನೀಡಲು ಸಾಧ್ಯವಿಲ್ಲ, ಒಂದು ಲಕ್ಷ ಕೊಡಬಹುದು” ಎಂದಾಗ, ಅಪಹರಣಕಾರ “ನಾವು ಕೇಳಿದಷ್ಟು ಹಣ ನೀಡದಿದ್ದರೆ ನಿಮ್ಮ ತಮ್ಮನ ಬಾಡಿಯೂ ಸಿಗುವುದಿಲ್ಲ” ಎಂದು ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.

ಈ ಆಡಿಯೋ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಿಂದೆ ಚಿನ್ನಾಭರಣ ವ್ಯಾಪಾರಿಯಾಗಿದ್ದ ಮಂಜುನಾಥ ಶೇಜವಾಡಕರ್ ಅವರು ಇತ್ತೀಚಿನ ವರ್ಷಗಳಲ್ಲಿ ವ್ಯಾಪಾರದಿಂದ ಹಿಂದೆ ಸರಿದು ನಿವೃತ್ತ ಜೀವನ ನಡೆಸುತ್ತಿದ್ದರು.

 ಘಟನೆಯ ಕುರಿತು ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಂಜುನಾಥರನ್ನು ಸುರಕ್ಷಿತವಾಗಿ ರಕ್ಷಿಸಲು ಹಾಗೂ ಅಪಹರಣಕಾರರನ್ನು ಪತ್ತೆಹಚ್ಚಲು ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಎಸ್‌. ಜಾಹ್ನವಿ ಅವರು ಶುಕ್ರವಾರ ರಾತ್ರಿ ಸ್ಥಳಕ್ಕೆ ಭೇಟಿ ನೀಡಿ ತನಿಖೆಯ ಪ್ರಗತಿ ಪರಿಶೀಲಿಸಿದ್ದು, ಅಧಿಕಾರಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿದ್ದಾರೆ.