ವಿರಾಜಪೇಟೆ: ಪುರಸಭೆಯಾಗಿ ಮೇಲ್ದರ್ಜೆಗೇರಿದರೂ ಕೂಡ ಸಮಸ್ಯೆಗಳಿಗೆ ಸ್ಪಂದನೆ ಇಲ್ಲ: ಸಿಪಿಐ(ಎಂ) ಆರೋಪ
ವಿರಾಜಪೇಟೆ:ವಿರಾಜಪೇಟೆ ಪಟ್ಟಣ ಪಂಚಾಯಿತಿ ಸುಮಾರು ಎರಡು ವರ್ಷಗಳಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದ್ದರೂ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಹಲವು ಬಾರಿ ಪುರಸಭೆಯ ಆಡಳಿತದಲ್ಲಿರುವವರಿಗೆ ಮನವಿಯನ್ನು ಕೊಟ್ಟರೂ ಫಲಕಾರಿಯಾಗದೆ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ) ವಿರಾಜಪೇಟೆ ಶಾಖಾ ಕಾರ್ಯದರ್ಶಿ ಕೆ.ಎಸ್. ರಮೇಶ್(ಶಾಜಿ) ಆರೋಪಿಸಿದರು.
ಸಿಪಿಐ(ಎಂ) ಕಛೇರಿಯಲ್ಲಿ ಕರೆಯಲಾಗಿದ್ದ ಗೋಷ್ಟಿಯಲ್ಲಿ ಮಾತನಾಡಿದ ರಮೇಶ್, ಪುರಸಭೆಯಾದರೂ ಪುರಸಭೆ ಮಟ್ಟದಲ್ಲಿ ಆಗಬೇಕಾದ ಯಾವುದೇ ಕೆಲಸಗಳು ಆಗುತ್ತಿಲ್ಲ. ಈ ವ್ಯಾಪ್ತಿಯ ವಾರ್ಡುಗಳ ಸಂಖ್ಯೆಯು 18 ವಾರ್ಡುಗಳಿಂದ 22 ವಾರ್ಡುಗಳಿಗೆ ಹೆಚ್ಚಿಸಿದ್ದರು ಅದಕ್ಕೆ ಬೇಕಾದ ಅನುದಾನಗಳ ಕೊರತೆ ಸರಕಾರದಿಂದ ಬಿಡುಗಡೆಯಾಗದೆ ಯಾವುದೇ ಅಭಿವೃದ್ದಿಯಾಗುತ್ತಿಲ್ಲ. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಾಸಕರು ದೊಡ್ಡಟ್ಟಿ ಚೌಕಿಯಲ್ಲಿ ಗುದ್ದಲಿ ಪೂಜೆ ಮಾಡುವ ಸಂದರ್ಭದಲ್ಲಿ ಪುರಸಭೆ ಅಭಿವೃದ್ಧಿಗಾಗಿ ಸುಮಾರು 5 ಕೋಟಿಗಳಷ್ಟು ಹಣವನ್ನು ತರಲಾಗಿದೆ ಎಂದು ಹೇಳಿಕೆಯನ್ನು ನೀಡಿದ್ದರು. ಆದರೆ ಈ ಹಣ ಯಾವ ಅಭಿವೃದ್ಧಿ ಯೋಜನೆಗೆ ಉಪಯೋಗಿಸುತ್ತಾರೆ ಎಂದು ಸಾರ್ವಜನಿಕರಲ್ಲಿ ಗೊಂದಲವಿದೆ. ಅನುದಾನದ ಕೊರತೆಯಿಂದಾಗಿ ಪುರಸಭಾ ವ್ಯಾಪ್ತಿಯಲ್ಲಿ ಸಿಬ್ಬಂದಿಗಳ ನೇಮಕಾತಿಗಳು ನಡೆಯುತ್ತಿಲ್ಲ ಹಾಗೂ ಈ ಅವಧಿಯಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಭ್ರಷ್ಟಾಚಾರದ ಕೂಗುಗಳು ಕೇಳಿ ಬರುತ್ತಿದೆ. ಪುರಸಭಾ ವ್ಯಾಪ್ತಿಯ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿದರು. ಬೆಟ್ಟದ ನಿವಾಸಿಗಳಿಗೆ ಶಾಶ್ವತವಾಗಿ ಮನೆ ನಿವೇಶನ ಕೊಡಲು ಪುರಸಭೆ ವ್ಯಾಪ್ತಿಗಳಲ್ಲಿ ಪ್ರಭಾವಿಗಳಿಂದ ಸರಕಾರಿ ಭೂಮಿಯ ಒತ್ತುವರಿಯಾಗಿರುವುದನ್ನು ಹಿಂಪಡೆದುಕೊಂಡು ಈ ಪುರಸಭೆ ವ್ಯಾಪ್ತಿಯ ನಿವೇಶನ ರಹಿತರಿಗೆ ಹಂಚಬೇಕು ಮತ್ತು ಅಪಾಯದಂಚಿನಲ್ಲಿ ಬದುಕುತ್ತಿರುವ ಬೆಟ್ಟ ಪ್ರದೇಶದ ನಿವಾಸಿಗಳಿಗೆ ಪುರಸಭೆ ವ್ಯಾಪ್ತಿಯಲ್ಲಿಯೇ ಮನೆ, ನಿವೇಶನವನ್ನು ಕೊಡಬೇಕು, ಕಾರಣ ಬೆಟ್ಟ ಪ್ರದೇಶದಲ್ಲಿ ವಾಸಿಸುತ್ತಿರುವವರಲ್ಲಿ ಬಹುತೇಕ ಮಂದಿ ಕಟ್ಟಡ ಕಾರ್ಮಿಕರಾಗಿರುತ್ತಾರೆ ಅವರು ವಿರಾಜಪೇಟೆ ನಗರವನ್ನು ಅವಲಂಬಿಸಿ ಬದುಕು ಕಟ್ಟಿಕೊಂಡಿರುತ್ತಾರೆ ಎಂದರು.
ಸಿಪಿಐ(ಎA) ಜಿಲ್ಲಾ ಸಂಘಟನಾ ಸಮಿತಿ ಸದಸ್ಯರಾದ ಎ.ಸಿ. ಸಾಬು ಮಾತನಾಡಿ ವಿರಾಜಪೇಟೆಯಲ್ಲಿ ರಾಜ ಕಾಲುವೆ ಎಂದು ಕರೆಯಲ್ಪಡುವ ತೋಡು ಅತಿಕ್ರಮಿಸಲ್ಪಟ್ಟಿದೆ. ಈ ತೋಡಿನ ಮೇಲೆ ಮನೆಗಳನ್ನು ಕಟ್ಟಲಾಗಿದೆ, ಅದಕ್ಕೆ ತಮ್ಮ ಶೌಚಾಲಯದ ನೀರನ್ನು ನೇರವಾಗಿ ಬಿಡಲಾಗುತ್ತದೆ. ಈ ತೋಡನ್ನು ಒತ್ತುವರಿ ಮಾಡಿಕೊಂಡಿರುವವರಿಂದ ತೆರವುಗೊಳಿಸಬೇಕು. ಮುಖ್ಯವಾಗಿ ಉಸ್ತುವಾರಿ ಸಚಿವರ ಆದೇಶವನ್ನು ಅಧಿಕಾರಿಗಳು ಹಣ ಮತ್ತು ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗದೆ ಕಾನೂನು ರೀತಿಯಲ್ಲಿ ಸರ್ವೇ ಮಾಡಬೇಕು. ಪುರಸಭೆ ವ್ಯಾಪ್ತಿಯ ರಸ್ತೆಗಳಲ್ಲಿ ಪಾದಚಾರಿಗಳಿಗೆ, ವಾಹನ ಚಾಲಕರುಗಳಿಗೆ, ಆಟೋ ಚಾಲಕರಿಗೆ ದ್ವಿಚಕ್ರ ವಾಹನ ಚಾಲಕರಿಗೆ ಓಡಾಡಲು ಮುಖ್ಯ ರಸ್ತೆಗಳನ್ನು ಒಳಗೊಂಡು ಎಲ್ಲಾ ವಾರ್ಡುಗಳ ಒಳ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಆದಷ್ಟು ಬೇಗನೆ ಗುಂಡಿ ಮುಚ್ಚಿ ಓಡಾಡುವ ರೀತಿಯಲ್ಲಿ ಆಗಬೇಕಾಗಿದೆ. ಪುರಸಭೆ ವ್ಯಾಪ್ತಿಯ ಎಲ್ಲಾ ವಾರ್ಡುಗಳ ಚರಂಡಿಗಳನ್ನು ಸೂಕ್ತ ನಿರ್ವಹಣೆ ಮಾಡಬೇಕು. ಚರಂಡಿಯಿಲ್ಲದ ಕಡೆ ಸೂಕ್ತ ರೀತಿಯಲ್ಲಿ ಚರಂಡಿ ನಿರ್ಮಾಣ ಮಾಡಬೇಕು ಎಂದರು. ಪುರಸಭೆ ವ್ಯಾಪ್ತಿಯ ಎರಡು ಕೆರೆಗಳಾದ ಛತ್ರಕೆರೆ ಮತ್ತು ಗೌರಿಕೆರೆ ಸುಂದರಗೊಳಿಸಲು ಮತ್ತು ಉದ್ಯಾನಕ್ಕಾಗಿ ಕೋಟಿ ರೂ ಅನುದಾನ ಒದಗಿಸಲಾಗಿದೆ. ಇವುಗಳಿಗೆ ಇಷ್ಟೊಂದು ಮೊತ್ತದ ಅಗತ್ಯವೇ ಎನ್ನುವುದು ಪರಿಶೀಲಿಸಬೇಕಾಗಿದೆ. ಜನಸಾಮಾನ್ಯ ತಮ್ಮ ದುಡಿಮೆಯ ದೊಡ್ಡ ಭಾಗವನ್ನು ತೆರಿಗೆಯ ರೂಪದಲ್ಲಿ ಸರಕಾರಕ್ಕೆ ಕೊಡುತ್ತಾರೆ, ಇದನ್ನು ಕಬಳಿಸಿ ಸ್ವಂತ ಲಾಭಕ್ಕೆ ಉಪಯೋಗಿಸಿಕೊಳ್ಳುವ ಯೋಜನೆಯ ಬಗ್ಗೆ ಶಾಸಕರು ಮಧ್ಯಪ್ರವೇಶ ಮಾಡಬೇಕಾಗಿದೆ ಎಂದು ಒತ್ತಾಯಿಸಿದರು. ಜಲಜೀವನ್ ಮಿಷನ್ ಯೋಜನೆ ಅನುಷ್ಠಾನಕ್ಕಾಗಿ ಪೈಪುಗಳನ್ನು ಅಳವಡಿಸಲು ಎಲ್ಲಾ ವಾರ್ಡ್ಗಳಲ್ಲಿ ಕಾಂಕ್ರೀಟ್ ರಸ್ತೆಗಳನ್ನು ಆಗೆದು ಪೈಪುಗಳನ್ನು ಅಳವಡಿಸಿದ್ದ ನಂತರ ಸರಿಯಾಗಿ ಮುಚ್ಚದಿರುವುದರಿಂದ ಜನಸಾಮಾನ್ಯರು ಅನುಭವಿಸುತ್ತಿರುವ ಸಮಸ್ಯೆಗಳಿಂದ ಮುಕ್ತಿಗೊಳಿಸಬೇಕಾಗಿದೆ. ಇದರಿಂದ ಜನಸಾಮಾನ್ಯರಿಗೆ ದೊಡ್ಡ ರೀತಿಯಲ್ಲಿ ಕಿರುಕುಳವಾಗಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದೆ ಎಂದು ಆರೋಪಿಸಿದರು. ರಸ್ತೆ ಅಗಲೀಕರಣದ ಬಗ್ಗೆ ಕಳೆದ ಆಡಳಿತದ ಅವಧಿಯಲ್ಲಿ ವಿರೋಧ ಪಕ್ಷದಲ್ಲಿದ್ದವರು ಈಗ ಆಡಳಿತದಲ್ಲಿ ಇದ್ದಾರೆ. ಅವತ್ತು ಇಟ್ಟ ಬೇಡಿಕೆಗಳನ್ನು ಈ ಅಧಿಕಾರದ ಅವಧಿಯಲ್ಲಿ ಜಾರಿಗೊಳಿಸಬೇಕಾಗಿದೆ. ದೊಡ್ಡಟ್ಟಿ ಚೌಕಿಯಿಂದ ಗೋಣಿಕೊಪ್ಪ ರಸ್ತೆಯ ಮುಖ್ಯಬೀದಿಯಲ್ಲಿ ಗಾಡಿಗಳನ್ನು ನಿಲ್ಲಿಸಿ ಜನಸಾಮಾನ್ಯರ ಓಡಾಟಕ್ಕೆ ಸಮಸ್ಯೆ ಆಗಿದೆ. ಫುಟ್ಪಾತ್ ಇಲ್ಲದಂತಾಗಿದೆ ಗಡಿಯಾರ ಕಂಬದಿAದ ಖಾಸಗಿ ಬಸ್ ನಿಲ್ದಾಣಕ್ಕೆ ಹೋಗುವ ಫುಟ್ಪಾತ್‌ಗಳಲ್ಲಿ ಸ್ಲಾಬ್ ಮುರಿದುಹೋಗಿದೆ ಎಂದರು. ವಿರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್‌ಗಳ ಕೊರತೆ, ಮುಖ್ಯವಾಗಿ ಮಹಿಳಾ ತಜ್ಞರು, ಮೂಳೆ ತಜ್ಞರುಗಳನ್ನು ಸೇರಿ ಹಲವು ತಜ್ಞರುಗಳ ಕೊರತೆ ಇದೆ. ಇರುವ ಡಾಕ್ಟರ್‌ಗಳು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ ಮತ್ತು ಔಷಧಿಗಳನ್ನು ಬಹುತೇಕ ಸಂದರ್ಭಗಳಲ್ಲಿ ಖಾಸಗಿ ಮೆಡಿಕಲ್ಲುಗಳಿಗೆ ಬರೆದು ಕೊಡುತ್ತಾರೆ. ಇದರಿಂದ ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ದೊಡ್ಡಟ್ಟಿ ಚೌಕಿಯಲ್ಲಿ ಶೌಚಾಲಯ ಕೆಲಸವು ಕಳೆದ ಒಂದು ವರ್ಷಗಳಿಂದ ಸ್ಥಗಿತಗೊಂಡ ಕಾರಣ ಆ ಕೆಲಸ ಪೂರ್ಣವಾಗದೆ ಶೌಚಾಲಯ ಪ್ರದೇಶವನ್ನು ಸಾರ್ವಜನಿಕರು ಉಪಯೋಗಿಸುವುದರೊಂದಿಗೆ ಆ ಪ್ರದೇಶ ಪೂರ್ತಿ ದುರ್ನಾಥವಾಗುತ್ತಿದೆ ಪುರಸಭೆ ಆಡಳಿತ ಆದಷ್ಟು ಬೇಗನೆ ಶೌಚಾಲಯದ ಕೆಲಸವನ್ನು ಪೂರ್ಣಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಸಹಾಯವಾಗುವ ರೀತಿಯಲ್ಲಿ ಕೆಲಸವನ್ನು ಪೂರ್ಣಗೊಳಿಸಬೇಕಾಗಿದೆ ಎಂದು ಒತ್ತಾಯಿಸಿದರು. ಪುರಸಭೆ ವ್ಯಾಪ್ತಿಯ ಸಮಸ್ಯೆಗಳನ್ನು ಆದಷ್ಟು ಬೇಗನೆ ಪರಿಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜನಸಾಮಾನ್ಯರನ್ನು ಸಂಘ ಸಂಸ್ಥೆಗಳ ಸಹಾಯದಿಂದ ಸಿಪಿಐ(ಎಂ) ಪಕ್ಷದ ವಿರಾಜಪೇಟೆ ಶಾಖೆ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಸದಸ್ಯರಾದ ಕೆ.ಕೆ. ಹರಿದಾಸ್ ಮಾತನಾಡಿ ಪುರಸಭೆಯ ಆಡಳಿತದ ಅವಧಿಯಲ್ಲಿ ಈ ಎಲ್ಲಾ ಸಮಸ್ಯೆಗಳ ನಿವಾರಣೆ ಮಾಡಬೇಕು. ಮಳೆಗಾಲದ ಮೊದಲು ಯಾವುದೇ ತಯಾರಿಗಳು ಆಗದೇ ಇರುವ ಕಾರಣ ದೊಡ್ಡ ರೀತಿ ಸಮಸ್ಯೆಗಳು ಆಗುತ್ತಿದೆ ಎಂದರು. ಈ ಸಂದರ್ಭ ನಗರ ಶಾಖೆಯ ಸದಸ್ಯರಾದ ಕೆ.ಎ. ಖಾಸಿಂ, ಪಿ. ಖಾಲಿದ್, ಸಿ.ಎ. ಹಮೀದ್ ಉಪಸ್ಥಿತರಿದ್ದರು.