ವಿರಾಜಪೇಟೆ: ಪತ್ನಿಯೊಂದಿಗೆ ಜಗಳವಾಡಿ ಮನೆ ಬಿಟ್ಟಿದ್ದ ವ್ಯಕ್ತಿ ಕಾಫಿತೋಟದಲ್ಲಿ ಶವವಾಗಿ‌ ಪತ್ತೆ

ವಿರಾಜಪೇಟೆ: ಪತ್ನಿಯೊಂದಿಗೆ ಜಗಳವಾಡಿ ಮನೆ ಬಿಟ್ಟಿದ್ದ ವ್ಯಕ್ತಿ ಕಾಫಿತೋಟದಲ್ಲಿ ಶವವಾಗಿ‌ ಪತ್ತೆ
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

 ವಿರಾಜಪೇಟೆ: ಕ್ಷುಲ್ಲಕ ಕಾರಣಕ್ಕೆ ಪತ್ನಿಯೊಂದಿಗೆ ಜಗಳವಾಗಿ ಮನೆಬಿಟ್ಟು ಕಾಣೆಯಾಗಿದ್ದ ವ್ಯಕ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ವಿರಾಜಪೇಟೆ ಬಾಳುಗೋಡು ಗ್ರಾಮದಲ್ಲಿ ನಡೆದಿದೆ.

ವಿರಾಜಪೇಟೆ ತಾಲ್ಲೂಕಿನ ಆರ್ಜಿ ಪಂಚಾಯತಿ ವ್ಯಾಪ್ತಿಯ ಬಾಳುಗೋಡು ಗ್ರಾಮದ ನಿವಾಸಿಯಾಗಿದ್ದ ದಿವಂಗತ ಪಡಿಯಂಡ ಪೊನ್ನಪ್ಪ ಅವರ ಪುತ್ರ ಪಿ.ಪಿ. ಲೋಕೇಶ್ ಅಲಿಯಾಸ್ ಕಾರ್ಯಪ್ಪ (45) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಘಟನೆ ವಿವರ:

ಮೃತ ಲೋಕೇಶ್ ಬಾಳುಗೋಡು ಗ್ರಾಮದ ಇತಿಹಾಸದ ಪ್ರಸಿದ್ದಿ ಪಡೆದ ಕಂಡಿಮಕ್ಕಿ ತ್ರಿಮೂರ್ತಿ ದೇವಾಲಯದ ತಕ್ಕರಾಗಿ ಕರ್ತವ್ಯ ನಿರ್ವಹಿಸುತಿದ್ದ. ಇದಾದ ಬಳಿಕ ಸ್ಥಾನವನ್ನು ತ್ಯಜಿಸಿದ್ದರು ಎನ್ನಲಾಗಿದೆ. ಲೀಲಾವತಿ ಎಂಬುವವರೊಂದಿಗೆ ವಿವಾಹವಾಗಿದ್ದು ಎರಡು ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ. ಮಕ್ಕಳು ಈರ್ವರು ವಿರಾಜಪೇಟೆ ನಗರದ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ಪತಿ ಮತ್ತು ಪತ್ನಿ ಈರ್ವರಲ್ಲಿ ಆಗಿಂದಾಗ್ಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗುತ್ತಿತ್ತು. ಮದ್ಯದ ಅಮಲಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮನೆಯಲ್ಲಿ ಹೇಳುತಿದ್ದರು. ಎಂದು ಪತ್ನಿ ಹೇಳುತ್ತಾರೆ.

 ದಿನಾಂಕ 29-09-2025 ರಂದು ಸಂಜೆ ಮನೆಬಿಟ್ಟು ಕಾಣೆಯಾಗುತ್ತಾರೆ. ಮನೆಮಂದಿ ಮತ್ತು ಗ್ರಾಮಸ್ಥರು ಊರಿನ ಎಲ್ಲಾ ಭಾಗದಲ್ಲಿ ಹುಡುಕಾಟ ನಡೆಸುತ್ತಾರೆ. ಕಾಣೆಯಾದ ವ್ಯಕ್ತಿ ದೊರಕದಿದ್ದಾಗ ತಾ. 03-10-2025 ರಂದು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪತ್ನಿ ಲೀಲಾವತಿ ಅವರು ಪತಿ ಕಾಣೆಯಾಗಿರುವ ಬಗ್ಗೆ ದೂರು ನೀಡಿರುತ್ತಾರೆ.

ಇಂದು ಸುಮಾರು 11 ಗಂಟೆಯ ವೇಳೆಗೆ ಮೂರಿರ ನಂಜಪ್ಪ ಎಂಬುವವರ ತೋಟ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಲೋಕೇಶ್ ಮೃತದೇಹ ಪತ್ತೆಯಾಗಿದೆ. ಮೃತದೇಹವು ಕೊಳೆತ ಸ್ಥಿತಿಯಲ್ಲಿದ್ದು ಗ್ರಾಮಸ್ಥರು ಮತ್ತು ಮನೆಯ ಮಂದಿ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆ ಶವಗಾರಕ್ಕೆ ದಾಖಲಿಸಿರುತ್ತಾರೆ.ಪತ್ನಿ ಲೀಲಾವತಿ ಅವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 194 ಬಿ.ಎನ್.ಎಸ್. ಕಾಯ್ದೆಯ ಅನ್ವಯ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

 ವರದಿ:ಕಿಶೋರ್ ಕುಮಾರ್ ಶೆಟ್ಟಿ