ವಿರಾಜಪೇಟೆ; ಮುತ್ತೂಟ್ ಮಿನಿ ಫೈನಾನ್ಸ್ ಮ್ಯಾನೇಜರ್ ನಿಂದ ಗ್ರಾಹಕರಿಗೆ ಮೋಸ

May 14, 2026 - 13:02
May 14, 2026 - 14:12
 0  3.2k
ವಿರಾಜಪೇಟೆ; ಮುತ್ತೂಟ್ ಮಿನಿ ಫೈನಾನ್ಸ್ ಮ್ಯಾನೇಜರ್ ನಿಂದ ಗ್ರಾಹಕರಿಗೆ ಮೋಸ

ವಿರಾಜಪೇಟೆ:ವಿರಾಜಪೇಟೆಯ ಮುತ್ತೂಟ್ ಮಿನಿ ಫೈನಾನ್ಸ್ನಲ್ಲಿ ಈ ಹಿಂದೆ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಕುಪ್ಪಣಮಾಡ ಬಿದ್ದಪ್ಪ ಎಂಬುವವರು 80.22 ಗ್ರಾಂ ಚಿನ್ನವನ್ನು ಸ್ಥಳೀಯ ಗ್ರಾಹಕರು ಅಡವಿಟ್ಟಿದ್ದನ್ನು ಗ್ರಾಹಕರಿಗೆ ನೀಡದೆ ತಾನೇ ಬಿಡಿಸಿಕೊಂಡು ಮೋಸ ಮಾಡಿ ನಂತರ ಅಧಿಕ ಬಡ್ಡಿ ನೀಡಿದರೆ ಮಾತ್ರವೇ ಗ್ರಾಹಕರಿಗೆ ನೀಡುವುದಾಗಿ ಸತಾಯಿಸಿದ ಬಗ್ಗೆ ಗ್ರಾಹಕರಿಗೂ ಹಾಗೂ ಫೈನಾನ್ಸ್ನವರಿಗೆ ನಂಬಿಕೆ ದ್ರೋಹ ಮಾಡಿದ ಸಂಬಂಧ ವಿರಾಜಪೇಟೆ ಠಾಣೆಯಲ್ಲಿ ಕ್ರಿಮಿನಲ್ ಮೊಕದಮ್ಮೆ ದಾಖಲಾಗಿದೆ.

 ಕೆದಮುಳ್ಳುರು ನಿವಾಸಿ ಮರಿಯಾ ಅನಿಸ್ ಅವರು ವಿರಾಜಪೇಟೆಯ ಮುತ್ತೂಟ್ ಮಿನಿ ಫೈನಾನ್ಸ್ನಲ್ಲಿ 2022ರ ಫೆಬ್ರವರಿ ತಿಂಗಳಿನಲ್ಲಿ ರೂ 2,18,600-ಗಳಿಗೆ ತನ್ನ ಗಂಡನ ಹೆಸರಿನಲ್ಲಿ ಚಿನ್ನದ ಮಾಂಗಲ್ಯ ಸರ, ಉಂಗುರಗಳು, ಕಿವಿಯೋಲೆ, ನೆಕ್ಲೆಸ್‌ಗಳನ್ನು ಅಡವಿಟ್ಟಿದ್ದು ಕಾರಣಾಂತರಗಳಿಂದ ಚಿನ್ನಾಭರಣಗಳನ್ನು ಬಿಡಿಸಿಕೊಳ್ಳಲು ಆಗಿರಲಿಲ್ಲ.

 ನಂತರ ಹರಾಜು ನೋಟಿಸ್ ಬಂದಾಗ ಮುತ್ತೂಟ್ ಮಿನಿ ಫೈನಾನ್ಸ್ಗೆ ಹೋಗಿ ಆಭರಣಗಳನ್ನು ಹರಾಜು ಮಾಡಬೇಡಿ ಎಂದು ಕೇಳಿಕೊಂಡಾಗ ತಕ್ಷಣ ಮ್ಯಾನೇಜರ್ ಬಿದ್ದಪ್ಪನವರು ಮಾತನಾಡಿ ನೀವು ನನ್ನ ಮಗಳಿದ್ದಂತೆ, ನಾನು ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿ ವಾಪಸು ಕಳುಹಿಸಿದ್ದರು.

ಆದರೆ ದಿನಾಂಕ 1.3.2023 ರಂದು ಮ್ಯಾನೇಜರ್ ಬಿದ್ದಪ್ಪನವರು ಇವರುಗಳಿಗೆ ತಿಳಿಸದೆ ಹಾಗೂ ಇವರಿಂದ ಯಾವುದೇ ಸಹಿಯನ್ನು ಪಡೆಯದೆ ತಾವೇ ಸಾಲವನ್ನು ಕ್ಲಿಯರ್ ಮಾಡಿ 80.22 ಗ್ರಾಂ ಚಿನ್ನವನ್ನು ಫೈನಾನ್ಸ್ನವರಿಗೂ ತಿಳಿಸದೆ ಕಳವು ಮಾಡಿಕೊಂಡು ತಮ್ಮ ಮನೆಗೆ ತೆಗೆದುಕೊಂಡು ಹೋಗಿದ್ದಾರೆ.

ಈ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. ಹಾಗೂ ಚಿನ್ನವನ್ನು ಕೇಳಿದಾಗ ಸತಾಯಿಸುತ್ತಿದ್ದರು. ಆರು ಲಕ್ಷ ಬಡ್ಡಿ ನೀಡಿದರೆ ಮಾತ್ರವೇ ಚಿನ್ನವನ್ನು ನೀಡುವುದಾಗಿ ಸತಾಯಿಸುತ್ತಿದ್ದರು ಎಂದು ಆರೋಪಿಸಿ ಈ ಸಂಬಂಧ ನೊಂದ ಮಹಿಳೆ ಹಾಗೂ ಕುಟುಂಬಸ್ಥರು ನ್ಯಾಯಕ್ಕಾಗಿ ವಿರಾಜಪೇಟೆ ಠಾಣೆಯಲ್ಲಿ ಪೋಲಿಸ್ ಪುಕಾರು ನೀಡಿದ್ದು ಮೋಸ ಮಾಡಿದ ಹಾಗೂ ನಂಬಿಕೆ ದ್ರೋಹದ ಪ್ರಕರಣ ದಾಖಲಾಗಿದೆ.

What's Your Reaction?

Like Like 6
Dislike Dislike 0
Love Love 4
Funny Funny 2
Angry Angry 0
Sad Sad 2
Wow Wow 1