ವಿರಾಜಪೇಟೆ;ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಕೋರ್ ಕಮಿಟಿ ಸಭೆ
ವಿರಾಜಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆಯುವ ವಿರಾಜಪೇಟೆ ತಾಲೂಕು ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಕೋರ್ ಕಮಿಟಿ ಸಭೆ ವಿರಾಜಪೇಟೆ ಶಿಕ್ಷಕರ ಭವನದಲ್ಲಿ ನಡೆಯಿತು.
ಶೌರ್ಯ ಕಾರ್ಯಕ್ರಮ ಯೋಜನಾಧಿಕಾರಿ ಶ್ರೀ ಜೈವಂತ್ ಪಟಗಾರ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಕಳೆದ 6 ವರ್ಷಗಳಿಂದ ಶೌರ್ಯ ವಿಪತ್ತು ನಿರ್ವಹಣಾ ಘಟಕವು ಆರಂಭವಾಗಿ ಇಂದಿಗೆ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಹ ಕೆಲಸವಾಗಿದೆ, ರಾಜ್ಯದ 89 ತಾಲೂಕುಗಳನ್ನು ಅತಿಸೂಕ್ಷ÷್ಮ ಪ್ರದೇಶಗಳೆಂದು ಗುರುತಿಸಲಾಗಿದ್ದು, ಅವುಗಳಲ್ಲಿ ವಿರಾಜಪೇಟೆ ತಾಲೂಕು ಕೂಡ ಒಂದಾಗಿದೆ, ಮುಂದಿನ ದಿನಗಳಲ್ಲಿ ಅನಿರೀಕ್ಷಿತ ವಿಪತ್ತುಗಳಿಗೆ ತಕ್ಷಣ ಸ್ಪಂದಿಸಲು ಸ್ವಯಂ ಸೇವಕರು ಸಜ್ಜಾಗಬೇಕು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನಾಧಿಕಾರಿ ಹರೀಶ್ ಪ್ರಾಸ್ತಾವಿಕವಾಗಿ ಮಾತನಾಡಿ ವಿರಾಜಪೇಟೆ ತಾಲೂಕಿನಲ್ಲಿ ಶೌರ್ಯ ಕಾರ್ಯಕ್ರಮ 5 ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ತಾಲೂಕಿನ ಶೌರ್ಯ ಘಟಕಗಳು ರಾಜ್ಯದ ಅತ್ಯುತ್ತಮ ಸಾಧಕ ಘಟಕಗಳಲ್ಲಿ ಒಂದಾಗಬೇಕು ಎಂದರು.
ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಮಾತನಾಡಿ, ಘಟಕಗಳು ಸಮರ್ಪಕವಾಗಿ ನಡೆಯಲು ಅತ್ಯುತ್ತಮವಾದ ಯೊಜನೆಯನ್ನು ರೂಪಿಸಿಕೊಳ್ಳಬೇಕು, ಉತ್ತಮ ಶ್ರಮದಾನಗಳನ್ನು ಕೈಗೊಳ್ಳಬೇಕು, ಅತ್ಯುತ್ತಮವಾದ ಸಂವಹನ ಕಲೆಯನ್ನು ಹೊಂದಿರಬೇಕು, ಕಾರ್ಯ ಚಟುವಟಿಕೆಗಳ ಉತ್ತಮ ದಾಖಲೀಕರಣವನ್ನು ಮಾಡಬೇಕು, ಪೂರಕವಾದ ಬಜೆಟ್ ಹಾಕಿಕೊಂಡಲ್ಲಿ ನಮ್ಮ ಘಟಕಗಳು ಅತ್ಯುತ್ತಮವಾಗಿ ರೂಪುಗೊಳ್ಳಲು ಸಾಧ್ಯ ಎಂದರು.
ಇದೇ ಸಂದರ್ಭ ವಿರಾಜಪೇಟೆ ತಾಲೂಕಿನಲ್ಲಿ ನೂತನವಾಗಿ 15 ಜನರ ತುರ್ತು ಸ್ಪಂದನ ಘಟಕ ರಚನೆ ಮಾಡಿ ಜವಾಬ್ದಾರಿ ಹಸ್ತಾಂತರಿಸಲಾಯಿತು.
ಸಭೆಯಲ್ಲಿ ಜನಜಾಗೃತಿ ಮೇಲ್ವಿಚಾರಕರಾದ ನಿತೇಶ್ ಕೆ, ಆಡಳಿತ ಪ್ರಬಂಧಕರಾದ ಕು. ಮಮತಾ, ವಲಯ ಮೇಲ್ವಿಚಾರಕರಾದ ಧನೇಶ್, ಪುಷ್ಪಲತಾ, ವಿರಾಜಪೇಟೆ ತಾಲೂಕಿನ ಮೇಲ್ವಿಚಾರಕರು, ಸಂಯೋಜಕರು, ಘಟಕ ಪ್ರತಿನಿಧಿಗಳು ಉಪಸ್ಥಿತರಿದ್ದರು.
