ತ್ಯಾಗ ಬಲಿದಾನದ ಮೂಲಕ ಪಡೆದ ಸ್ವಾತಂತ್ರ್ಯ ಜೀವಂತವಾಗಿರಿಸುವ ಪ್ರಯತ್ನ ಮಾಡಬೇಕು: ಪೀಟರ್ ಬಿ.‌ಲೋಬೊ

ತ್ಯಾಗ ಬಲಿದಾನದ ಮೂಲಕ ಪಡೆದ ಸ್ವಾತಂತ್ರ್ಯ ಜೀವಂತವಾಗಿರಿಸುವ ಪ್ರಯತ್ನ ಮಾಡಬೇಕು: ಪೀಟರ್ ಬಿ.‌ಲೋಬೊ

ವಿರಾಜಪೇಟೆ: ಬ್ರಿಟಿಷರ ಕಪಿಮುಷ್ಠಿಯಿಂದ ದಾಸ್ಯ ಸಂಕೋಲೆಯಿಂದ ಬಿಡುಗಡೆಗೊಂಡ ದೇಶದ ಸ್ವಾತಂತ್ರ್ಯವು ಮನ ಮನದಲ್ಲಿ ಜೀವಂತವಾಗಿರಿಸುವ ಪ್ರಯತ್ನ ಮಾಡಬೇಕು ಎಂದು ಮಾಜಿ ಸೈನಿಕರಾದ ಪೀಟರ್ ಬಿ. ಲೋಬೊ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಸೆಂಟ್ ಮೇರಿಸ್ ಶಾಲಾ ಆವರಣದಲ್ಲಿ ಫಾತಿಮ ಮಾತೆಯ ದೇವಾಲಯದ ವತಿಯಿಂದ 79 ನೇ ಸ್ವಾತಂತ್ರ್ಯ ಉತ್ಸವ ,ಹಲವು ಸಾಂಸ್ಕೃತಿ, ದೇಶಭಕ್ತಿ ಗೀತಾ ಗಾಯನ ಹಾಗೂ ನೃತ್ಯ ಪ್ರದರ್ಶನಗಳ ಮೂಲಕ ವಿಜ್ರಂಭಣೆಯಿಂದ ಆಚರಿಸಲಾಯಿತು.

 ಕೆದಮುಳ್ಳೂರು ಗ್ರಾಮದ ಮಾಜಿ ಸೈನಿಕರಾದ ಪೀಟರ್ ಬಿ. ಲೋಬೋ ಅವರು ಧ್ವಜಾರೋಹಣ ನೆರೆವೇರೆಸಿದರು. ನಂತರ ಶಾಲಾ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪೀಟರ್ ಲೋಬೊ ಅವರು. 1857 ರಿಂದ ಸ್ವಾತಂತ್ರ್ಯ ಸಂಗ್ರಾಮ ಆರಂಭಗೊಂಡು 1947 ರಲ್ಲಿ ಬ್ರಿಟಿಷ್ ರ ಆಳ್ವಿಕೆಯು ಪತನಗೊಂಡು ಭಾರತದ ದೇಶ ಸ್ವಾತಂತ್ರ್ಯ ಪಡೆಯುವ ಮೂಲಕ ಹೋರಾಟದ ಫಲ ಸಕಾರಗೊಂಡಿತ್ತು.ಹೋರಾಟದಲ್ಲಿ ಸಾವಿರಾರು ಸಂಖ್ಯೆಯಲ್ಲಿ ತಮ್ಮ ಜೀವನ ತ್ಯಾಗ ಮಾಡಿ ಬಲಿದಾನಗೈದು ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ.ಅಪ್ರತಿಮ ಹೋರಾಟಗಾರ ಸಾಧನೆ ವೀರ ಪರಾಕ್ರಮಗಳ ದುರಂತ ಇತಿಹಾಸವನ್ನು ಎಂದಿಗೂ ನೆನಪಿಸಿಕೊಳ್ಳಬೇಕು. ಪೋಷಕರು ಉತ್ತಮ ಭಾವನೆಗಳನ್ನು ಮಕ್ಕಳಿಗೆ ತಿಳಿಹೇಳಿಕೊಡುವ ಮೂಲಕ ಉತ್ತಮ ಸಮಾಜ ರೂಪಿಸಲು ಮುಂದಾಗಬೇಕು.ಸ್ವಚಿಂತನೆ ಮಾಡುವ ಮೊದಲು ದೇಶದ ಸುಭದ್ರತೆಯ ಬಗ್ಗೆ ಗಮನ ಹರಿಸುವಂತೆ ಕರೆ ನೀಡಿದರು. ಮೈಸೂರು ಧರ್ಮ ಕೇಂದ್ರದ ಧರ್ಮಗುರುಗಳಾದ ರೆ. ಫಾ. ಪ್ರಶಾಂತ್, ವಿರಾಜಪೇಟೆ ನಗರ ಪೊಲೀಸ್ ವೃತ್ತ ನಿರೀಕ್ಷಕರಾದ ಪೆಮ್ಮಚಂಡ ಅನೂಪ್ ಮಾದಪ್ಪ ಕಾರ್ಯಕ್ರಮದ ಕುರಿತು ಮಾತನಾಡಿದರು.

ಕೆದಮುಳ್ಳೂರು ಫಾತಿಮಾ ಮಾತೆಯ ದೇವಾಲಯದ ಪ್ರದಾನ ಧರ್ಮಗುರುಗಳಾದ ರೆ. ಫಾ. ವಿಲ್ಪೇರ್ಡ ಎ. ಅವರು ಮಾತನಾಡಿ, ನೂರಾರು ವರ್ಷಗಳ ಹೋರಾಟದ ಫಲವಾಗಿ ದೊರಕಿದಂತಹ ಸ್ವಾತಂತ್ರ್ಯದ ಸಾರವನ್ನು ಅರಿಯಬೇಕು. ಮತ್ತು ಮುಂದಿನ ಪೀಳಿಗೆಗೆ ತಿಳಿಯಪಡಿಸಬೇಕು. ಅಸಂಖ್ಯಾತ ದೇಶಭಕ್ತರ ಪ್ರಾಣ ತ್ಯಾಗ ಬಲಿದಾನದ ಮೂಲಕ ಪಡೆದ ಸ್ವಾತಂತ್ರ್ಯವನ್ನು ಉಳಿಸುವ ಪ್ರಯತ್ನವಾಗಬೇಕು. ದೇಶವು ವಿವಿಧತೆಯಲ್ಲಿ ಎಕತೆ ಕಂಡ ದೇಶ ನಮ್ಮಲ್ಲಿ ವಿವಿಧ ಸಂಸ್ಕೃತಿ,ಧರ್ಮದಾಚರಣೆಯೊಂದಿಗೆ ಶಾಂತಿ ಮತ್ತು ಪ್ರೀತಿ ಪರಿತ್ಯಾಗದ ಸಮಾಜ ನಿರ್ಮಾಣವಾಗಿದೆ.ತಾಯಿ ಭಾರತಿಗೆ ನೋವು ನೀಡುವ ದುಷ್ಟ ಶಕ್ತಿಗಳ ವಿರುದ್ಧ ಹೋರಾಟ ಮಾಡುವ ಮನೋಬಲ ಯುವ ಸಮಾಜವು ಹೊಂದಬೇಕು. ದೇಶದ ಸರ್ವೋತೊಮುಖ ಅಭಿವೃದ್ದಿಯಲ್ಲಿ ಸರ್ವರು ಸಹಕಾರ ನೀಡುವಂತರಾಗಬೇಕು.ಸ್ವಾತಂತ್ರ್ಯ ಉತ್ಸವ ದಿನಕ್ಕೆ ಮಾತ್ರ ಸಿಮೀತವಾಗದೆ ಪ್ರತಿಯೊಂದು ದಿನವು ಉತ್ಸವವಾಗಿ ಹೊರಹೊಮ್ಮಬೇಕು ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಕ್ಯಥರಿನಾ ಚಿತ್ತದನಿ ಕಾನ್ವೆಂಟ್ ನ ಮಕ್ಕಳಿಂದ, ಧರ್ಮಸಭೆಯ ಮಕ್ಕಳಿಂದ ದೇಶಭಕ್ತಿ ಬಿಂಬಿಸುವ ಗೀತ ಗಾಯನ, ಭಾಷಣ, ಮತ್ತು ನೃತ್ಯಗಳು ಪ್ರದರ್ಶನಗೊಂಡವು. ಕೆದಮುಳ್ಳೂರು ಗ್ರಾಮದ ಮಾಜಿ ಸೈನಿಕರುಗಳು ಮತ್ತು ಹಿರಿಯರಾದ ಕೆ.ಕೆ. ರಾಜ, ಪೀಟರ್ ಡಿಸೋಜ, ಕ್ಯಥರಿನಾ ಚಿತ್ತದನಿ ಮಕ್ಕಳ ಕಾನ್ವೆಂಟ್ ನ ಸಿಸ್ಟರ್ ಟ್ರೀಜಾ ಉಪಸ್ಥಿತರಿದ್ದರು. ಶ್ವೇತಾ ಲೋಬೋ ಅವರು ಸ್ವಾಗತಿಸಿ, ಜಯ್ ಸನ್ ಲೋಬೊ ಕಾರ್ಯಕ್ರಮ ನಿರೂಪಿಸಿದರು. ನಥಲೀಯ ರೋಡ್ರಿಗ್ರಸ್ ವಂದಿಸಿದರು. ಫಾತಿಮಾ ಮಾತೆಯ ದೇವಾಲಯ ಕೆದಮುಳ್ಳೂರು ನ ಆಡಳಿತ ಮಂಡಳಿಯ ಸದಸ್ಯರು, ಕ್ಯಥರಿನಾ ಚಿತ್ತದನಿ ಕಾನ್ವೆಂಟ್ ನ ಮಕ್ಕಳು ಕನ್ಯಾ ಸ್ತ್ರೀಯರು .ಗ್ರಾಮದ ವಿವಿಧ ಭಾಗಗಳಿಂದ ಆಗಮಿಸಿದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

ವರದಿ: ಕಿಶೋರ್ ಕುಮಾರ್ ಶೆಟ್ಟಿ