ಪತ್ನಿ ಕೊಲೆ ಪ್ರಕರಣ: ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಮಡಿಕೇರಿ ನ್ಯಾಯಾಲಯ
admincoorgdaily

ಮಡಿಕೇರಿ: ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಹೆಂಡತಿಯೊಂದಿಗೆ ಜಗಳವಾಡಿ ಕಾಫಿಗಿಡದ ದೊಣ್ಣೆಯಿಂದ ಹಲ್ಲೆ ಮಾಡಿ ಆಕೆಯನ್ನು ಕೊಲೆ ಮಾಡಿದ ಆರೋಪ ಸಾಬೀತು ಆದ ಹಿನ್ನೆಲೆ ಮಡಿಕೇರಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ದಿನಾಂಕ 29-10-2023 ರ ರಾತ್ರಿ ಸಮಯದಲ್ಲಿ ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾನೂರು ಗ್ರಾಮದ ಮುಕ್ಕಾಟಿರ ಎಸ್. ಕುಶಾಲಪ್ಪರವರ ಬಾಡಿಗೆ ಮನೆಯಲ್ಲಿ ವಾಸವಿದ್ದ ರಂಗಸ್ವಾಮಿ ಟಿ. (52) ಎಂಬಾತ ತನ್ನ ಪತ್ನಿ ಲತಾಳನ್ನು ಕೊಂದು ಇದೀಗ ಶಿಕ್ಷೆಗೆ ಒಳಗಾದವನಾಗಿದ್ದಾನೆ. ಗಾರೆ ಕೆಲಸ ಮಾಡಿಕೊಂಡಿದ್ದ ರಂಗಸ್ವಾಮಿ ಮತ್ತು ಆತನ ಪತ್ನಿ ಪ್ರತಿನಿತ್ಯ ಮದ್ಯಪಾನ ಮಾಡಿ ಜಗಳವಾಡಿಕೊಳ್ಳುತ್ತಿದ್ದರು. ಅದೇ ರೀತಿ ದಿನಾಂಕ 29-10-2023 ರ ರಾತ್ರಿ ಇವರಿಬ್ಬರು ನಶೆಯ ಗುಂಗಿನಲ್ಲಿ ಕಲಹ ನಿರತರಾಗಿದ್ದಾರೆ.
ಜಗಳ ವಿಪರೀತಕ್ಕೆ ತಿರುಗಿದ ಪರಿಣಾಮ ರಂಗಸ್ವಾಮಿ ಕಾಫಿಗಿಡದ ದೊಣ್ಣೆಯಿಂದ ಪತ್ನಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ದೊಣ್ಣೆಯ ಏಟಿಗೆ ತೀವ್ರ ಗಾಯಗೊಂಡ ಲತಾ ಕೊನೆಯುಸಿರು ಎಳೆದಿದ್ದರೆ ಕೃತ್ಯ ಎಸಗಿದ ನಂತರ ರಂಗಸ್ವಾಮಿ ಅಲ್ಲಿಂದ ಕಾಲ್ಕಿತ್ತಿದ್ದ. ಮರುದಿನ ದಿನಾಂಕ 30-10-2023 ರಂದು ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು, ಮನೆ ಮಾಲೀಕ ಮುಕ್ಕಾಟಿರ ಎಸ್. ಕುಶಾಲಪ್ಪರವರು ಪುಕಾರು ನೀಡಿದ ಮೇರೆಗೆ ಪೊನ್ನಂಪೇಟೆ ಪೊಲೀಸ್ ಠಾಣೆಯ ಅಂದಿನ ಪ್ರಭಾರ PSI ಕಾವೇರಪ್ಪ ಟಿ.ಎಂ. ರವರು ಕಲಂ 302 IPC ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ಪ್ರಕರಣದ ಸಂಪೂರ್ಣ ತನಿಖೆಯನ್ನು ಪೂರೈಸಿದ ಅಂದಿನ ಗೋಣಿಕೊಪ್ಪಲು ವೃತ್ತ ನಿರೀಕ್ಷಕ ಗೋವಿಂದರಾಜು ಟಿ.ಎಂ. ರವರು ಆರೋಪಿ ವಿರುದ್ಧ ಕಲಂ 302 ಮತ್ತು 201 IPC ರೀತ್ಯಾ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮಡಿಕೇರಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನಟರಾಜು ಎಸ್. ರವರು, ಆರೋಪಿಯ ವಿರುದ್ಧ ಆರೋಪ ಸಾಬೀತು ಆದ ಹಿನ್ನೆಲೆಯಲ್ಲಿ ದಿನಾಂಕ 05-06-2026 ರಂದು ಆರೋಪಿ ರಂಗಸ್ವಾಮಿ ಟಿ. ಎಂಬಾತನಿಗೆ ಕಲಂ 302 IPC ಗಾಗಿ ಜೀವಾವಧಿ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ. 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ದಂಡ ಕಟ್ಟದಿದ್ದಲ್ಲಿ 6 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಅಲ್ಲದೇ ಕಲಂ 301 IPC ಗಾಗಿ 3 ವರ್ಷಗಳ ಸಾಧಾರಣ ಕಾರಾಗೃಹ ಶಿಕ್ಷೆ ಹಾಗೂ 6 ಸಾವಿರ ದಂಡ ಕಟ್ಟುವಂತೆಯೂ, ದಂಡ ಕಟ್ಟದಿದ್ದಲ್ಲಿ 3 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಯಾಸೀನ್ ಅಹಮ್ಮದ್ ರವರು ವಾದ ಮಂಡಿಸಿದ್ದರು.