ಮದುವೆಯಾದ 5 ತಿಂಗಳಿಗೇ ಕೌಟುಂಬಿಕ ಕಲಹಕ್ಕೆ ಬೇಸತ್ತು ವಿಚ್ಛೇದನಕ್ಕೆ ಸಿದ್ಧತೆ: ಕೆರಳಿದ ಗಂಡನಿಂದ ಪತ್ನಿಯ ಕೊಲೆ
ಚಿಕ್ಕಮಗಳೂರು, ಅ. 13: ಕೌಟುಂಬಿಕ ಕಲಹದಿಂದ ಬೇಸತ್ತು ತವರು ಮನೆ ಸೇರಿದ್ದ ಪತ್ನಿಯನ್ನು ಗಂಡನೇ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣದ ಹವ್ವಳ್ಳಿ ಗ್ರಾಮದಲ್ಲಿ ನಡೆದಿದೆ.
ಹವ್ವಳ್ಳಿ ಗ್ರಾಮದ ನೇತ್ರಾವತಿ (34) ಅವರು ಸಕಲೇಶಪುರ ಮೂಲದ ನವೀನ್ ಎಂಬವರೊಂದಿಗೆ ಸುಮಾರು ಐದು ತಿಂಗಳ ಹಿಂದೆ ವಿವಾಹವಾಗಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮಾಧಾನ ಉಂಟಾಗಿ ನೇತ್ರಾವತಿ ತವರು ಮನೆ ಸೇರಿದ್ದರು. ಇಬ್ಬರ ಕುಟುಂಬದ ಹಿರಿಯರು ರಾಜಿ ಪಂಚಾಯಿತಿ ನಡೆಸಿದ್ದರೂ ಫಲಕಾರಿಯಾಗಲಿಲ್ಲ.
ಗಂಡನಿಂದ ಸಂಪೂರ್ಣವಾಗಿ ದೂರವಾಗಲು ನೇತ್ರಾವತಿ ವಿಚ್ಛೇದನಕ್ಕೆ ಸಿದ್ಧತೆ ನಡೆಸಿದ್ದು, ಮೂರು ದಿನಗಳ ಹಿಂದೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪತಿ ನವೀನ್ ವಿರುದ್ಧ ಕಿರುಕುಳದ ದೂರು ನೀಡಿದ್ದರು. ಪೊಲೀಸರು ದೂರು ದಾಖಲಿಸಿ ತನಿಖೆ ಆರಂಭಿಸಿದ್ದರು.
ಈ ವಿಷಯ ತಿಳಿದ ನವೀನ್ ಕೋಪಗೊಂಡು ಆಲ್ದೂರಿನ ಹವ್ವಳ್ಳಿಗೆ ಬಂದು, ಮನೆಯ ಹಿಂಭಾಗದಲ್ಲಿ ಕೆಲಸ ಮಾಡುತ್ತಿದ್ದ ಪತ್ನಿ ನೇತ್ರಾವತಿ ಮೇಲೆ ಮಚ್ಚಿಯಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಕುತ್ತಿಗೆ ಹಾಗೂ ಎದೆ ಭಾಗದಲ್ಲಿ ಗಂಭೀರ ಗಾಯಗೊಂಡ ನೇತ್ರಾವತಿಯನ್ನು ತಕ್ಷಣವೇ ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಆಕೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಆಲ್ದೂರು ಪೊಲೀಸ್ ಠಾಣೆಯಲ್ಲಿ ನವೀನ್ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.
What's Your Reaction?
Like
1
Dislike
0
Love
2
Funny
1
Angry
0
Sad
3
Wow
0
